ಮಧುಗಿರಿ: ಜಿಲ್ಲೆಯ ಹೈನುಗಾರರ ಹಿತ ಕಾಪಾಡುವ ಉದ್ದೇಶದಿಂದ ರೈತ ಕಲ್ಯಾಣ ಟ್ರಸ್ಟ್ ಸ್ಥಾಪಿಸಿ, 26 ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಕೊಂಡವಾಡಿ ಚಂದ್ರಶೇಖರ್ ಅವರಿಗೆ ಮತ್ತಷ್ಟು ರಾಜಕೀಯ ಶಕ್ತಿ ದೊರೆಯಲು ಕುಂಚಶ್ರೀಗಳು ಮಾರ್ಗದರ್ಶನ ನೀಡಬೇಕು ಎಂದು ತುಮುಲ್ ನಿರ್ದೇಶಕಿ ಭಾರತಿ ಶ್ರೀನಿವಾಸ್ ಮನವಿ ಮಾಡಿದರು.
ಪಟ್ಟಣದ ಸಿಪಿಸಿ ಸಭಾಂಗಣದಲ್ಲಿ ಸಹಕಾರಿ ರತ್ನ ಪ್ರಶಸ್ತಿ ಪಡೆದ ಜಿಲ್ಲೆಯ ನಾಲ್ವರನ್ನು ಅಭಿನಂದಿಸಿ ಅವರು ಮಾತನಾಡಿದರು.
ಕೊಂಡವಾಡಿ ಚಂದ್ರಶೇಖರ್ ಅವರಿಗೆ ಬಹಳ ಹಿಂದೆಯೇ ಸಹಕಾರಿ ರತ್ನ ಪ್ರಶಸ್ತಿ ದೊರೆಯಬೇಕಿತ್ತು. ಅವರ ದೀರ್ಘಕಾಲದ ಸಹಕಾರಿ ಸೇವೆ ಹಾಗೂ ಸಾಧನೆಯನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಸಂತಸದ ವಿಚಾರ. ರೈತ ಕಲ್ಯಾಣ ಟ್ರಸ್ಟ್ ಸ್ಥಾಪಿಸುವ ಮೂಲಕ ಈ ಭಾಗದ ರೈತರು ಮತ್ತು ಹೈನುಗಾರರಿಗೆ ಶಕ್ತಿ ತುಂಬಿದ್ದಾರೆ. ಇಂತಹ ಸೇವಾನಿರತರಿಗೆ ರಾಜಕೀಯವಾಗಿಯೂ ಹೆಚ್ಚಿನ ಅವಕಾಶಗಳು ದೊರೆಯಬೇಕು ಎಂದರು.
ತಮ್ಮ ಪತಿ ಶ್ರೀನಿವಾಸ್ ಅವರನ್ನು ಗುಬ್ಬಿ ಕ್ಷೇತ್ರದ ಜನತೆ ಸತತ ಐದು ಬಾರಿ ಶಾಸಕರನ್ನಾಗಿ ಆಯ್ಕೆ ಮಾಡಿರುವುದು ಜನರ ಪ್ರೀತಿ ಮತ್ತು ವಿಶ್ವಾಸಕ್ಕೆ ಸಾಕ್ಷಿಯಾಗಿದೆ ಎಂದು ಸ್ಮರಿಸಿದರು.
ಬಿಜೆಪಿ ಮುಖಂಡ ಎಲ್.ಸಿ. ನಾಗರಾಜ್ ಮಾತನಾಡಿ, ಕೊಂಡವಾಡಿ ಚಂದ್ರಶೇಖರ್ ಅವರಿಗೆ ದೊರೆತ ಸಹಕಾರಿ ರತ್ನ ಪ್ರಶಸ್ತಿ ತಾಲೂಕಿನ ಸಮಸ್ತ ರೈತರಿಗೆ ಸಲ್ಲಬೇಕಾದ ಗೌರವವಾಗಿದೆ. ಸಹಕಾರಿ ಕ್ಷೇತ್ರವು ಪಕ್ಷ, ಜಾತಿ ಭೇದವಿಲ್ಲದೆ ಬಡವರು, ರೈತರು ಮತ್ತು ಹೈನುಗಾರರ ಸೇವೆ ಮಾಡುವ ವೇದಿಕೆಯಾಗಬೇಕು. ಆದರೆ ಕೆಲವೆಡೆ ಕುಟುಂಬ ರಾಜಕಾರಣಕ್ಕೆ ಆದ್ಯತೆ ನೀಡುತ್ತಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
ಮಧುಗಿರಿ ತಾಲೂಕಿಗೆ ಶಾಶ್ವತ ನೀರಾವರಿ ಕಲ್ಪಿಸುವ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು. ದೊಡ್ಡೇರಿ ಹೋಬಳಿಯ ಕೆರೆಗಳಿಗೆ ಎತ್ತಿನಹೊಳೆ ನೀರು ಹರಿಸುವ 135 ಕೋಟಿ ರೂ.ಗಳ ಪ್ರಸ್ತಾವನೆ ಅನುಷ್ಠಾನಕ್ಕೆ ಮುಂದಾಗಿರುವ ಸರ್ಕಾರದ ಕ್ರಮ ಸ್ವಾಗತಾರ್ಹ ಎಂದರು.
ಪುರಸಭೆ ಮಾಜಿ ಸದಸ್ಯ ಜಗಣ್ಣ ಮಾತನಾಡಿ, ಕೊಂಡವಾಡಿ ಚಂದ್ರಶೇಖರ್ ಅವರಿಗೆ ದೊರೆತ ಪ್ರಶಸ್ತಿ 25 ವರ್ಷಗಳ ನಿರಂತರ ಸೇವೆಯ ಫಲವಾಗಿದೆ. ಇಂತಹವರಿಗೆ ಇನ್ನಷ್ಟು ರಾಜಕೀಯ ಶಕ್ತಿ ದೊರೆಯಬೇಕು ಎಂದರು.
ತುಮುಲ್ ನಿರ್ದೇಶಕ ಚೆನ್ನಮಲ್ಲಪ್ಪ ಮಾತನಾಡಿ, 25 ವರ್ಷಗಳ ಸಹಕಾರಿ ಕ್ಷೇತ್ರದ ಸೇವೆಯನ್ನು ಗುರುತಿಸಿ ಪ್ರಶಸ್ತಿ ದೊರೆಯುವಂತೆ ಮಾಡಲು ಭಾರತಿ ಶ್ರೀನಿವಾಸ್ ಸಹಕಾರ ನೀಡಿದ್ದಾರೆ. ಕೆಎಂಎಫ್ ಅಧ್ಯಕ್ಷ ಡಿ.ಕೆ. ಸುರೇಶ್ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ತುಮುಲ್ ನಿರ್ದೇಶಕರಾದ ಪ್ರಕಾಶ್ ಮತ್ತು ಶಿವಪ್ರಕಾಶ್ ಮಾತನಾಡಿ, ಕೊಂಡವಾಡಿ ಚಂದ್ರಶೇಖರ್ ಅವರಿಗೆ ಅನ್ಯಾಯವಾಗಿ ಒಂದೂವರೆ ವರ್ಷ ಸಹಕಾರಿ ಕ್ಷೇತ್ರದಿಂದ ದೂರ ಉಳಿಯುವ ಪರಿಸ್ಥಿತಿ ಎದುರಾಗಿತ್ತು. ಇದೀಗ ಮತ್ತೆ ಹೈನುಗಾರರ ಸೇವೆ ಮಾಡಲು ಅವಕಾಶ ದೊರೆತಿರುವುದು ಸಂತಸ ತಂದಿದೆ. ಸ್ಥಳೀಯ ಸೇವಾನಿರತರಿಗೆ ಆದ್ಯತೆ ನೀಡಬೇಕು ಹಾಗೂ ಕುಟುಂಬ ರಾಜಕಾರಣಕ್ಕೆ ಕಡಿವಾಣ ಹಾಕಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರು, ಸದಸ್ಯರು, ಎಪಿಎಂಸಿ ಮಾಜಿ ಅಧ್ಯಕ್ಷರು, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷರು, ಜೆಡಿಎಸ್ ಮಾಜಿ ಅಧ್ಯಕ್ಷ ಬಸವರಾಜು ಸೇರಿದಂತೆ ವಿವಿಧ ಮುಖಂಡರು ಹಾಗೂ ಸಾವಿರಾರು ಹೈನುಗಾರರು ಉಪಸ್ಥಿತರಿದ್ದರು.
ರೈತ ಕಲ್ಯಾಣ ಟ್ರಸ್ಟ್ ನಿಂದ ಹೈನುಗಾರರ ಬದುಕಿಗೆ ಆಸರೆ: ಕುಂಚಶ್ರೀ
ಬರಪೀಡಿತ ಮಧುಗಿರಿ ಭಾಗದಲ್ಲಿ ಹೈನುಗಾರರ ಬದುಕಿಗೆ ರೈತ ಕಲ್ಯಾಣ ಟ್ರಸ್ಟ್ ಮಹತ್ವದ ಆಸರೆಯಾಗಿದೆ. ಕೊಂಡವಾಡಿ ಚಂದ್ರಶೇಖರ್ ಅವರ ಸಹಕಾರಿ ಸೇವೆಯನ್ನು ಗುರುತಿಸಿ ಸರ್ಕಾರ ಸಹಕಾರಿ ರತ್ನ ಪ್ರಶಸ್ತಿ ನೀಡಿರುವುದು ಸ್ವಾಗತಾರ್ಹ. ಮುಂದಿನ ದಿನಗಳಲ್ಲಿ ಮಹಿಳೆಯೊಬ್ಬರು ತುಮುಲ್ ಅಧ್ಯಕ್ಷ ಸ್ಥಾನ ಅಲಂಕರಿಸುವ ಅವಕಾಶವಿದ್ದು, ಭಾರತಿ ಶ್ರೀನಿವಾಸ್ ಅವರಿಗೆ ಎಲ್ಲರೂ ಬೆಂಬಲ ನೀಡಬೇಕು ಎಂದು ಸಭೆಯಲ್ಲಿದ್ದ ಐವರು ನಿರ್ದೇಶಕರಿಗೆ ಕುಂಚಶ್ರೀ ಮನವಿ ಮಾಡಿದರು. ಯಾವುದೇ ಸರ್ಕಾರವಿದ್ದರೂ ರೈತರ ಹಿತ ಕಾಪಾಡುವುದೇ ಅದರ ಮೊದಲ ಆದ್ಯತೆಯಾಗಬೇಕು ಎಂದು ತಿಳಿಸಿದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
