ಮಧುಗಿರಿ : ನ್ಯಾಯಕ್ಕಾಗಿ ತಹಶೀಲ್ದಾರ್ ಕಚೇರಿ ಎದುರೇ ಗೋಣಿ ಚೀಲ ಹೊದ್ದು ರಾತ್ರಿ ಕಳೆದಿದ್ದ ದೊಡ್ಡಮಾಲೂರು ಗ್ರಾಮದ ಕೂಲಿ ಕಾರ್ಮಿಕ ನಾಗರಾಜಪ್ಪ ಅವರ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಮಧುಗಿರಿ ತಹಶೀಲ್ದಾರ್ ನಂದಿನಿ ಅವರು ಹಳೆಯ ಕಂದಾಯ ದಾಖಲೆಗಳನ್ನು ಮುಂದಿಟ್ಟು ಸ್ಪಷ್ಟನೆ ನೀಡಿದ್ದಾರೆ.
ಜಮೀನಿನ ಸಾಗುವಳಿ ಚೀಟಿ ಹಾಗೂ ಭೂ ದಾಖಲೆಗಳಿಗಾಗಿ ಹಲವು ದಿನಗಳಿಂದ ಕಂದಾಯ ಇಲಾಖೆ ಕಚೇರಿಗೆ ಅಲೆದಾಡುತ್ತಿದ್ದ ನಾಗರಾಜಪ್ಪ ಅವರಿಗೆ ಅಧಿಕಾರಿಗಳಿಂದ ನಿರೀಕ್ಷಿತ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಕಚೇರಿ ಮುಂಭಾಗದಲ್ಲೇ ರಾತ್ರಿ ಕಳೆಯುವಂತಾಗಿತ್ತು. ಚಳಿಯ ನಡುವೆಯೂ ಗೋಣಿ ಚೀಲವನ್ನೇ ಹೊದಿಕೆಯಾಗಿ ಮಾಡಿಕೊಂಡು ರಾತ್ರಿ ಕಳೆದಿದ್ದ ಅವರ ಪರಿಸ್ಥಿತಿ ಮಾಧ್ಯಮಗಳಲ್ಲಿ ವರದಿಯಾಗಿ ಸಾರ್ವಜನಿಕರ ಗಮನ ಸೆಳೆದಿತ್ತು.
ಈ ವರದಿಗಳ ಬೆನ್ನಲ್ಲೇ ತಹಶೀಲ್ದಾರ್ ನಂದಿನಿ ಅವರು ನಾಗರಾಜಪ್ಪ ಅವರಿಗೆ ಸಂಬಂಧಿಸಿದ ದಾಖಲೆಗಳ ಕುರಿತು ಮಾಹಿತಿ ನೀಡಿ ಲಿಖಿತ ಸ್ಪಷ್ಟನೆ ನೀಡಿದ್ದಾರೆ. ಬಳಿಕ ಪತ್ರಿಕಾಗೋಷ್ಠಿ ನಡೆಸಿ ಪ್ರಕರಣದ ಹಿನ್ನೆಲೆ ಹಾಗೂ ಕಂದಾಯ ದಾಖಲೆಗಳ ವಿವರಗಳನ್ನು ಬಹಿರಂಗ ಪಡಿಸಿದ್ದಾರೆ.
1991ರಲ್ಲೇ ಸಾಗುವಳಿ ಅರ್ಜಿ ತಿರಸ್ಕೃತ!
ನಾಗರಾಜಪ್ಪ ಸಲ್ಲಿಸಿದ್ದ ಸಾಗುವಳಿ ಅರ್ಜಿಯನ್ನು 1991ರಲ್ಲಿಯೇ ತಿರಸ್ಕರಿಸಲಾಗಿತ್ತು. ನಂತರ 1992ರಲ್ಲಿ ಸದರಿ ಜಮೀನನ್ನು ಮತ್ತೊಬ್ಬರಿಗೆ ಮಂಜೂರು ಮಾಡಲಾಗಿದೆ. ಪ್ರಸ್ತುತ ಪಹಣಿ ದಾಖಲೆಗಳಲ್ಲಿ ದೊಡ್ಡ ಹನುಮಂತಪ್ಪ ಅವರ ಹೆಸರು ದಾಖಲಾಗಿರುವುದಾಗಿ ತಹಶೀಲ್ದಾರ್ ನಂದಿನಿ ತಿಳಿಸಿದ್ದಾರೆ.
ಹಳೆಯ ದಾಖಲೆಗಳ ಆಧಾರದಲ್ಲಿ ಇಲಾಖೆಯ ಸ್ಪಷ್ಟನೆ
ನವೆಂಬರ್ 19 ರಂದು ನೀಡಿರುವ ಕಂದಾಯ ಇಲಾಖೆಯ ಲಿಖಿತ ಸ್ಪಷ್ಟನೆಯಲ್ಲಿ ದೊಡ್ಡ ಮಾಲೂರು ಗ್ರಾಮದ ಸರ್ವೆ ನಂಬರ್ 62 ಹಾಗೂ ಹಿಸ್ಸಾ ನಂಬರ್ 329ಕ್ಕೆ ಸಂಬಂಧಿಸಿದಂತೆ ಹಿಂದಿನ ಸಾಗುವಳಿ ಅರ್ಜಿಗಳು, ಭೂ ಮಂಜೂರಾತಿ ಸಮಿತಿಯ ನಿರ್ಣಯಗಳು, ಕಂದಾಯ ಇಲಾಖೆಯ ಆದೇಶಗಳು ಮತ್ತು ಪಹಣಿ ದಾಖಲೆಗಳ ವಿವರಗಳನ್ನು ಉಲ್ಲೇಖಿಸಲಾಗಿದೆ.
1994 ರಿಂದ 1999 ರ ವರೆಗಿನ ಮಂಜೂರಾತಿ ಪ್ರಕ್ರಿಯೆಗಳು, 1998 ರ ಅಧಿಕೃತ ಜ್ಞಾಪನ ಪತ್ರ, 2000 ರ ಸಾಗುವಳಿ ಚೀಟಿ ಹಾಗೂ ನಂತರದ ಕಂದಾಯ ದಾಖಲೆಗಳ ಬದಲಾವಣೆ ಮತ್ತು ಮೇಲ್ಮನವಿ ಪ್ರಕ್ರಿಯೆಗಳ ಬಗ್ಗೆಯೂ ಪತ್ರದಲ್ಲಿ ಮಾಹಿತಿ ನೀಡಲಾಗಿದೆ. ಈ ದಾಖಲೆಗಳ ಆಧಾರದ ಮೇಲೆ ನಾಗರಾಜಪ್ಪ ಅವರ ಮನವಿಗೆ ಸಂಬಂಧಿಸಿದಂತೆ ಇಲಾಖೆ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.
ದಾಖಲೆಗಳ ವಿವರಣೆ ಸಿಕ್ಕಿದೆ ; ಸಮಸ್ಯೆಗೆ ಪರಿಹಾರ ಯಾವಾಗ?
ಸುಮಾರು ಐದು ದಶಕಗಳಿಂದ ಜಮೀನಿನ ವಿಚಾರವಾಗಿ ಹೋರಾಡುತ್ತಿರುವುದಾಗಿ ನಾಗರಾಜಪ್ಪ ಹೇಳಿಕೊಂಡಿದ್ದಾರೆ. ಆದರೆ ಕಂದಾಯ ಇಲಾಖೆ ಮುಂದಿಟ್ಟಿರುವ ದಾಖಲೆಗಳು ಅವರ ಅಹವಾಲಿಗೆ ಹೊಸ ತಿರುವು ನೀಡಿವೆ.
ಒಂದೆಡೆ 1991ರ ಅರ್ಜಿ ತಿರಸ್ಕಾರ ಹಾಗೂ 1992ರ ಮಂಜೂರಾತಿಯನ್ನು ಇಲಾಖೆ ಉಲ್ಲೇಖಿಸುತ್ತಿದ್ದರೆ, ಮತ್ತೊಂದೆಡೆ ನಾಗರಾಜಪ್ಪ ತಮ್ಮ ಜಮೀನಿನ ಹಕ್ಕಿಗಾಗಿ ನ್ಯಾಯಕ್ಕಾಗಿ ಕಾಯುತ್ತಿದ್ದಾರೆ. ಹೀಗಾಗಿ ಅವರ ಬಳಿ ಇರುವ ದಾಖಲೆಗಳು, ಹಿಂದಿನ ಮಂಜೂರಾತಿ ಆದೇಶಗಳು ಹಾಗೂ ಮೇಲ್ಮನವಿ ಪ್ರಕ್ರಿಯೆಗಳನ್ನು ಸಮಗ್ರವಾಗಿ ಪರಿಶೀಲಿಸಿ ಕಾನೂನು ಬದ್ಧವಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೆಂಬ ಒತ್ತಾಯ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಕಚೇರಿ ಬಾಗಿಲಲ್ಲೇ ರಾತ್ರಿ ಕಳೆಯುವ ಪರಿಸ್ಥಿತಿ ಎದುರಿಸಿದ ಬಡ ಕೂಲಿ ಕಾರ್ಮಿಕನಿಗೆ ಕೇವಲ ದಾಖಲೆಗಳ ಮಾಹಿತಿ ನೀಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಅವರ ಅಹವಾಲನ್ನು ಸಮಗ್ರವಾಗಿ ಪರಿಶೀಲಿಸಿ ನ್ಯಾಯಸಮ್ಮತ ಕ್ರಮ ಕೈಗೊಳ್ಳುವ ಜವಾಬ್ದಾರಿ ಕಂದಾಯ ಇಲಾಖೆಯ ಮೇಲಿದೆ.
ನಾಗರಾಜಪ್ಪನ ಹೋರಾಟಕ್ಕೆ ಅಂತಿಮ ತೆರೆ ಬೀಳುವುದೇ? ಅಥವಾ ದಾಖಲೆಗಳ ನಡುವೆಯೇ ನ್ಯಾಯಕ್ಕಾಗಿ ಅಲೆದಾಟ ಮುಂದುವರಿಯುವುದೇ? ಎಂಬುದನ್ನು ಕಾದು ನೋಡಬೇಕಿದೆ.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
