ಪಾವಗಡ: ತಾಲ್ಲೂಕು ತೀವ್ರ ಬರಪೀಡಿತ ಪ್ರದೇಶವಾಗಿದ್ದು, ಭದ್ರಾ ಮೇಲ್ದಂಡೆ ಹಾಗೂ ಎತ್ತಿನಹೊಳೆ ಯೋಜನೆಯಿಂದ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸುವ ಹಿನ್ನೆಲೆಯಲ್ಲಿ ತ್ವರಿತಗತಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕೆಂದು ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.
ಜೆಡಿಎಸ್ ಹಾಗೂ ಬಿಜೆಪಿಯಿಂದ ಸೋಮವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ, ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿದ ಸಂದರ್ಭ ನೇತೃತ್ವ ವಹಿಸಿ ಮಾತನಾಡಿದರು.
ರಾಜ್ಯದಲ್ಲಿ ಗುಟ್ಕಾ ನಿಷೇಧದಿಂದಾಗಿ ರೈತರಿಂದ ವರ್ತಕರು ಅಡಿಕೆ ಕೊಳ್ಳಲು ಹಿಂದು ಮುಂದು ನೋಡುತ್ತಿದ್ದು, ಗುಟ್ಕಾ ನಿಷೇಧವನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕು. ಸೋಲಾರ್ ಕಂಪನಿಗಳಲ್ಲಿ ಸ್ಥಳೀಯರಿಗೆ ಉದ್ಯೋಗದ ಅವಕಾಶ ನೀಡಬೇಕು. ಅಸಮರ್ಪಕ ವಿದ್ಯುತ್ ಸರಬರಾಜನ್ನು ಸರಿಪಡಿಸಿ, ರೈತರಿಗೆ 7 ಗಂಟೆಗಳ ಕಾಲ ವಿದ್ಯುತ್ ನೀಡಬೇಕು ಎಂದು ಒತ್ತಾಯಿಸಿದರಲ್ಲದೇ, ತಾಲ್ಲೂಕಿನ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ನಿಗಮದಿಂದ ಕೈಗೊಂಡ ಕೋಟ್ಯಂತರ ರೂ. ವೆಚ್ಚದ ಬಹುತೇಕ ಕಾಮಗಾರಿಗಳು ಕಳಪೆಯಿಂದ ಕೂಡಿತ್ತು ಎಂದು ಆರೋಪಿಸಿದರು.
ನಗರದ ಜೂನಿಯರ್ ಕಾಲೇಜ್ ಮೈದಾನದಲ್ಲಿ ಕಾಂಪೌಂಡ್ ಹಾಗೂ ತಡೆಗೋಡೆ ನಿರ್ಮಾಣ ಕಾಮಗಾರಿ ನಿಲ್ಲಿಸಬೇಕು. ಕ್ರೀಡಾಳುಗಳಿಗೆ ಆಗುತ್ತಿರುವ ತೊಂದರೆ ನಿವಾರಿಸಬೇಕು. ಪುರಸಭೆ ಮತ್ತು ಗ್ರಾಮ ಪಂಚಾಯಿತಿಯಲ್ಲಿ ಇ–ಖಾತೆಗಳನ್ನು ಮಾಡಲು ವಿಳಂಬ ನೀತಿ ಅನುಸರಿಸುತ್ತಿದ್ದು ಕೂಡಲೇ ಸರಿಪಡಿಸಬೇಕು. ಅರ್ಧಕ್ಕೆ ನಿಂತಿರುವ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು. ಕೂಡಲೇ ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಾಲ್ಲೂಕು ಜೆಡಿಎಸ್, ಬಿಜೆಪಿ ವತಿಯಿಂದ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ತಾಲ್ಲೂಕು ಬಿಜೆಪಿ ಅಧ್ಯಕ್ಷ ಡಿ.ಆರ್.ಅಶೋಕ್ ಮಾತನಾಡಿ, ಜನಪರ ಆಡಳಿತ ನೀಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದರು
ಪಾವಗಡ ತಾಲ್ಲೂಕು ನಿರಂತರ ಬರಗಾಲದಿಂದ ತತ್ತರಿಸಿದೆ. ಸರ್ಕಾರ ಕೂಡಲೇ ಭದ್ರಾ ಮೇಲ್ದಂಡೆ ಮತ್ತು ಎತ್ತಿನಹೊಳೆ ನೀರನ್ನು ಪಾವಗಡಕ್ಕೆ ಹರಿಸಬೇಕು. ಆಡಳಿತಾರೂಢ ಪಕ್ಷದ ತಾಳಕ್ಕೆ ಕುಣಿಯುತ್ತಿರುವ ಇಲ್ಲಿನ ಪೊಲೀಸ್ ಇಲಾಖೆ ನಮ್ಮ ಕಾರ್ಯಕರ್ತರನ್ನು ದಮನಿಸುವ ಕೆಲಸ ಮಾಡುತ್ತಿದೆ. ಸುಳ್ಳು ಕೇಸು ಹಾಕುತ್ತಿದ್ದು, ಕೇಸು ವಾಪಸ್ ಪಡೆಯಬೇಕು. ಅದೇ ಸರ್ಕಾರ ಹೀಗೆಯೇ ಇರುವುದಿಲ್ಲ, ಮುಂದೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರಲಿದೆ. ರಾಜ್ಯ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ಪಾವಗಡದಲ್ಲಿ ಸೋಲಾರ್ ಕಂಪನಿಗಳು ಸಾವಿರಾರು ಭೂಮಿ ಪಡೆದು ಸ್ಥಳೀಯರಿಗೆ ಉದ್ಯೋಗ ನೀಡದೆ ವಂಚಿಸುತ್ತಿದೆ. ರೈತರಿಗೆ 7 ಗಂಟೆ ನಿರಂತರ ವಿದ್ಯುತ್ ನೀಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ.
– ಕೆ.ಎಂ.ತಿಮ್ಮರಾಯಪ್ಪ, ಮಾಜಿ ಶಾಸಕರು.
ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ಶಾಶ್ವತವಲ್ಲ, ಎನ್ ಡಿಎ ಕಾರ್ಯಕರ್ತರ ಮೇಲೆ ದಿನಾ ಕಾರಣ ಕೇಸು ದಾಖಲಿಸಿದರೆ ಪರಿಣಾಮ ಎದುರಿಸಬೇಕೆಂದು ಎಚ್ಚರಿಸಿದರು. ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಎನ್.ತಿಮ್ಮಾರೆಡ್ಡಿ, ಮಾಜಿ ಜಿಲ್ಲಾಧ್ಯಕ್ಷ ಆರ್.ಸಿ.ಅಂಜಿನಪ್ಪ, ಕಾರ್ಯದರ್ಶಿ ಗೋವಿಂದದಾಸ್ ಮಾತನಾಡಿ, ಮನವಿ ಸ್ವೀಕರಿಸಿದ ತಹಶೀಲ್ದಾರ್ ವೈ.ರವಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯಪಾಲರಿಗೆ, ಮುಖ್ಯಮಂತ್ರಿಗಳಿಗೆ ವರದಿ ನೀಡುವುದಾಗಿ ಹೇಳಿದರು.
ತಾಲ್ಲೂಕು ಜೆಡಿಎಸ್ ಹಿರಿಯ ಮುಖಂಡರಾದ ಬಲರಾಮರೆಡ್ಡಿ, ಕಾರ್ಯದರ್ಶಿ ಸೋಗೆಡು ಮುಖಂಡರಾದ ಅಕ್ಕಲಪ್ಪ ನಾಯ್ಕ, ರೈತ ಘಟಕದ ಗಂಗಾಧರ್ ನಾಯ್ಕ, ಗುಟ್ಟಹಳ್ಳಿ ಮುಣಿ, ಜಿ.ವಿ.ವೆಂಕಟೇಶ್, ಬಿಜೆಪಿ ಪಾವಗಡ ರವಿ, ಎನ್.ರಾಮಕೃಷ್ಣರೆಡ್ಡಿ, ಜಿ.ಎನ್.ನಲ್ಲಪ್ಪ, ಜೆಡಿಎಸ್ ಯುವ ಘಟಕದ ಅಧ್ಯಕ್ಷ ಭರತ್ ಕುಮಾರ್, ತಾಪಂ ಅಧ್ಯಕ್ಷ ರಾಜ್ ಗೋಪಾಲ್, ನಗರ ಘಟಕದ ಆಪ್ ಬಂಡೆ ಗೋಪಾಲ, ಕಾವಲಗರೆ ರಾಮೋಜಿಣಪ್ಪ, ಕನ್ನಮೆಡಿ ಲೋಕೇಶ್, ಅಂಬಿಕಾ ರಮೇಶ್, ಶಕುಂತಮ್ಮ ಅನೇಕ ಮುಂದಿನ ಜೆಡಿಎಸ್ ಹಾಗೂ ಬಿಜೆಪಿ ಮುಖಂಡರು ಪ್ರತಿಭಟನೆಯಲ್ಲಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
