ಬೆಂಗಳೂರು: ಈಶಾನ್ಯ ಬೆಂಗಳೂರಿನ ಬಾಗಲೂರು ಕ್ರಾಸ್ ಸಮೀಪವಿರುವ ಅಮೆಜಾನ್ ಕಚೇರಿಯ ಹೊರಭಾಗದ ಫುಟ್’ಪಾತ್’ನಲ್ಲಿ ಅಳವಡಿಸಲಾಗಿದ್ದ ಟ್ರಾನ್ಸ್’ಫಾರ್ಮರ್ ಬಾಕ್ಸ್’ವೊಂದು ಅಕ್ಟೋಬರ್ 7ರ ಬೆಳಿಗ್ಗೆ ಹಠಾತ್ ಸ್ಫೋಟಗೊಂಡಿದ್ದು, ಪರಿಣಾಮ ಪಾದಚಾರಿಯೊಬ್ಬರು ಗಾಯಗೊಂಡಿರುವ ಘಟನೆ ವರದಿಯಾಗಿದೆ.
ಅಮೆಜಾನ್ ಕಚೇರಿಯ ಗೇಟ್ ನಂ. 3ರ ಹೊರಭಾಗದ ಫುಟ್ ಪಾತ್ ನಲ್ಲಿ ಬೆಳಿಗ್ಗೆ 9.49ರ ಸುಮಾರಿಗೆ ಈ ಅನಾಹುತ ಸಂಭವಿಸಿದೆ. ಈ ಪ್ರದೇಶವು ಯಲಹಂಕ ಓಲ್ಡ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುತ್ತದೆ.
ಸ್ಫೋಟದ ತೀವ್ರತೆಗೆ ನೆಲಕ್ಕೆ ಬಿದ್ದ ಪರಿಣಾಮ ಮೊಹಮ್ಮದ್ ಅಫ್ರೋಜ್ ಎಂಬ ಪಾದಚಾರಿಗೆ ತೀವ್ರ ಗಾಯಗಳಾಗಿವೆ. ಅವರ ಕೈಗಳಿಗೆ ಸುಟ್ಟ ಗಾಯಗಳಾಗಿದ್ದು, ಮತ್ತೊಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್, ಅದೇ ಸಮಯದಲ್ಲಿ ಸಮೀಪದಲ್ಲಿ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾಳೆ. ಗಾಯಾಳು ಮೊಹಮ್ಮದ್ ಅಫ್ರೋಜ್ ಪ್ರಸ್ತುತ ಸುರಕ್ಷಿತರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಈಶಾನ್ಯ ವಿಭಾಗದ ಉಪ ಪೊಲೀಸ್ ಆಯುಕ್ತ (DCP) ಮಿಥುನ್ ಕುಮಾರ್ ಸತೇಡ್ ತಿಳಿಸಿದ್ದಾರೆ.
ಈ ಹಠಾತ್ ಸ್ಫೋಟದ ಭೀಕರ ದೃಶ್ಯವು ಸ್ಥಳದಲ್ಲಿದ್ದ ಅರುಣ್ ಜಿ ಎಂಬುವವರ ಕಾರಿನ ಡ್ಯಾಶ್ಕ್ಯಾಮ್ನಲ್ಲಿ (Dashcam) ಸೆರೆಯಾಗಿದೆ. ಘಟನೆಯ ಬಳಿಕ ದೊಡ್ಡ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರಿಂದ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ನಗರದ ಪಾದಚಾರಿ ಮಾರ್ಗಗಳಲ್ಲಿ, ಅದರಲ್ಲೂ ವಿಶೇಷವಾಗಿ ಶಾಲಾ ಮಕ್ಕಳು ಮತ್ತು ಸಾರ್ವಜನಿಕರು ಹೆಚ್ಚಾಗಿ ಓಡಾಡುವ ಪ್ರದೇಶಗಳಲ್ಲಿ ಅಳವಡಿಸಲಾಗಿರುವ ಟ್ರಾನ್ಸ್ಫಾರ್ಮರ್ಗಳ ಸುರಕ್ಷತೆಯ ಕುರಿತು ಈ ಘಟನೆಯು ಮತ್ತೊಮ್ಮೆ ಗಂಭೀರ ಆತಂಕವನ್ನು ಹುಟ್ಟುಹಾಕಿದೆ. 2022ರಲ್ಲಿ ಬೆಂಗಳೂರಿನಲ್ಲಿ ಸಂಭವಿಸಿದ ಇದೇ ರೀತಿಯ ಟ್ರಾನ್ಸ್ ಫಾರ್ಮರ್ ಸ್ಫೋಟವೊಂದರಲ್ಲಿ ತಂದೆ ಮತ್ತು ಮಗಳು ಮೃತಪಟ್ಟಿದ್ದರು.
ಸದ್ಯ ವಿದ್ಯುತ್ ದೋಷಕ್ಕೆ ನಿಖರವಾದ ಕಾರಣವೇನು ಎಂಬುದರ ಕುರಿತು ಸಂಬಂಧಪಟ್ಟ ಇಲಾಖೆ ಹಾಗೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
