- ವಾಸವಿದ್ದ ಮನೆಗೆ ಬೀಗ ಜಡಿದು ಅಮಾನವೀಯ ವರ್ತನೆ
- ಮಕ್ಕಳೊಂದಿಗೆ ಮನೆಯ ಹೊರಗೆ ಉಪವಾಸ ನರಳುತ್ತಿರುವ ಅನ್ನದಾತ
- ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಹಾಲ್ಕುರಿಕೆ ಗ್ರಾಮಸ್ಥರ ಆಗ್ರಹ
ತಿಪಟೂರು: ಸಾಲ ವಸೂಲಾತಿ ನೆಪದಲ್ಲಿ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳು ಬಡ ರೈತನ ಕುಟುಂಬವನ್ನು ಮನೆಯಿಂದ ಹೊರಹಾಕಿ ಬೀಗ ಜಡಿದಿರುವ ಅಮಾನವೀಯ ಘಟನೆ ತಾಲ್ಲೂಕಿನ ಹೊನ್ನವಳ್ಳಿ ಹೋಬಳಿಯ ಹಾಲ್ಕುರಿಕೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಬಡ ರೈತ ರಂಗಸ್ವಾಮಿ ಅವರ ಕುಟುಂಬಕ್ಕೆ ಈಗ ಬೀದಿಯೇ ಗತಿಯಾಗಿದೆ. ಸಾಲ ಮರುಪಾವತಿ ವಿಚಾರವಾಗಿ ರಂಗಸ್ವಾಮಿ ಅವರ ಮನೆಗೆ ನುಗ್ಗಿದ ಮೈಕ್ರೋ ಫೈನಾನ್ಸ್ ಸಿಬ್ಬಂದಿ, ಕನಿಷ್ಠ ಮಾನವೀಯತೆಯನ್ನೂ ಮರೆತು ಕುಟುಂಬ ಸದಸ್ಯರನ್ನು ಮನೆಯಿಂದ ಆಚೆಗೆ ತಳ್ಳಿದ್ದಾರೆ. ಅಷ್ಟೇ ಅಲ್ಲದೆ, ಕುಟುಂಬ ವಾಸವಿದ್ದ ಮನೆಗೆ ಬೀಗ ಹಾಕಿ ದೌರ್ಜನ್ಯವೆಸಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಮನೆ ಕಳೆದುಕೊಂಡಿರುವ ರೈತ ರಂಗಸ್ವಾಮಿ ಅವರು ತಮ್ಮ ಪತ್ನಿ ಹಾಗೂ ಚಿಕ್ಕ ಮಕ್ಕಳೊಂದಿಗೆ ಮನೆಯ ಹೊರಭಾಗದಲ್ಲೇ ಕಾಲ ಕಳೆಯುವ ದುಸ್ಥಿತಿ ನಿರ್ಮಾಣವಾಗಿದೆ. ಒಪ್ಪೊತ್ತಿನ ಊಟವೂ ಇಲ್ಲದೆ ಇಡೀ ಕುಟುಂಬ ಬೀದಿಯಲ್ಲಿ ಉಪವಾಸದಿಂದ ನರಳುತ್ತಿದ್ದು, ಅನ್ನದಾತನ ಈ ಗೋಳನ್ನು ಕೇಳುವವರು ಯಾರು ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದ್ದಿದೆ.
ತಾಲ್ಲೂಕಿನಲ್ಲಿ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳ ದಿನೇ ದಿನೇ ಹೆಚ್ಚಾಗುತ್ತಿದ್ದು, ಹಾಲ್ಕುರಿಕೆಯ ಈ ಘಟನೆಗೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಡ ರೈತನ ಕುಟುಂಬವನ್ನು ಬೀದಿಗೆ ತಳ್ಳಿ ದಬ್ಬಾಳಿಕೆ ನಡೆಸಿರುವ ಫೈನಾನ್ಸ್ ಸಂಸ್ಥೆ ಹಾಗೂ ಸಿಬ್ಬಂದಿಗಳ ವಿರುದ್ಧ ತಾಲ್ಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ತಕ್ಷಣವೇ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ವರದಿ: ಆನಂದ್, ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
