ಹಾಸನ ಜಿಲ್ಲೆಯಲ್ಲಿ ನಡೆದ ಭೀಕರ ಘಟನೆಯೊಂದರಲ್ಲಿ 67 ವರ್ಷದ ವೃದ್ಧೆಯೊಬ್ಬರ ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿ ಹೇಮಾವತಿ ಕಾಲುವೆಗೆ ಎಸೆದಿರುವುದು ಬೆಳಕಿಗೆ ಬಂದಿದೆ.
ಮೃತರನ್ನು ಅರಕಲಗೂಡು ತಾಲೂಕಿನ ಹಿರೇಹಳ್ಳಿಕೊಪ್ಪಲು ಗ್ರಾಮದ ಲಕ್ಷ್ಮಮ್ಮ (67) ಎಂದು ಗುರುತಿಸಲಾಗಿದೆ. ಅವರು ತಮ್ಮ ಪತಿಯೊಂದಿಗೆ ಗ್ರಾಮದಲ್ಲೇ ವಾಸವಾಗಿದ್ದರು.
ಪೊಲೀಸರ ಮಾಹಿತಿ ಪ್ರಕಾರ, ಅಕ್ಟೋಬರ್ 3ರಂದು ಯಾವುದೋ ಕೆಲಸದ ನಿಮಿತ್ತ ಮನೆಯಿಂದ ಹೊರಟಿದ್ದ ಲಕ್ಷ್ಮಮ್ಮ ವಾಪಸ್ ಮನೆಗೆ ಮರಳಿರಲಿಲ್ಲ. ಕುಟುಂಬಸ್ಥರು ಎಲ್ಲೆಡೆ ಹುಡುಕಾಟ ನಡೆಸುತ್ತಿದ್ದ ವೇಳೆ, ಅರಕಲಗೂಡು ತಾಲೂಕಿನ ಬೆಟ್ಟದಹಳ್ಳಿ ಗ್ರಾಮದ ಸಮೀಪವಿರುವ ಹೇಮಾವತಿ ಕಾಲುವೆಯಲ್ಲಿ ಮಂಗಳವಾರ ಸಂಜೆ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿದ್ದ ಶವ ಪತ್ತೆಯಾಗಿದೆ. ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಶವವನ್ನು ಹೊರತೆಗೆದು, ಗುರುತು ಪತ್ತೆಹಚ್ಚಿ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಲಕ್ಷ್ಮಮ್ಮ ಅವರನ್ನು ಕೊಲೆ ಮಾಡಿ, ನಂತರ ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿ ಕಾಲುವೆಗೆ ಎಸೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಲಕ್ಷ್ಮಮ್ಮ ಅವರು ಮನೆಯಿಂದ ಹೊರಟ ಬಳಿಕ ಎಲ್ಲಿಗೆ ತೆರಳಿದ್ದರು ಮತ್ತು ಯಾರನ್ನು ಭೇಟಿಯಾಗಿದ್ದರು ಎಂಬುದರ ಕುರಿತು ಪೊಲೀಸರು ತೀವ್ರ ಮಾಹಿತಿ ಕಲೆಹಾಕುತ್ತಿದ್ದಾರೆ. ಚಿನ್ನಾಭರಣ ದೋಚುವ ಉದ್ದೇಶದಿಂದ ಈ ಕೃತ್ಯ ನಡೆದಿದೆಯೇ ಅಥವಾ ಮಹಿಳೆಗೆ ಪರಿಚಯವಿರುವವರೇ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆಯೇ ಎಂಬ ಕೋನದಲ್ಲೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಈ ಸಂಬಂಧ ಕೊಲೆ ಪ್ರಕರಣ ದಾಖಲಾಗಿದ್ದು, ಕೊಲೆಯ ನಿಖರ ಕಾರಣ ಹಾಗೂ ಆರೋಪಿಗಳ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
