ತುಮಕೂರು: ನಗರದ ಟೌನ್ ಹಾಲ್ ವೃತ್ತದ ಬಳಿ SIR ಹಾಗೂ ಜ್ಞಾನೇಶ್ ಕುಮಾರ್ ಅಡಿಯಲ್ಲಿ ಮತದಾನ ಒಪ್ಪುವುದಿಲ್ಲ ಎಂದು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಶನ್ (AIDSO) ವತಿಯಿಂದ ಪ್ರತಿಭಟನೆ ನಡೆಸಲಾಯಿತು.
AIDSO ತುಮಕೂರು ಜಿಲ್ಲಾ ಕಾರ್ಯದರ್ಶಿ ಲಕ್ಕಪ್ಪ ಅವರು ಮಾತನಾಡುತ್ತಾ, ದೇಶಾದ್ಯಂತ ಮತದಾರರ ಹೆಸರುಗಳನ್ನು ರದ್ದುಗೊಳಿಸುವ ಕುರಿತು ತೆಗೆದುಕೊಂಡ ಬಹುತೇಕ ನಿರ್ಧಾರಗಳಿಗೆ ಚುನಾವಣಾ ಆಯೋಗದಲ್ಲಿ ಬಹುಮತದ ಅನುಮೋದನೆ ಸಿಕ್ಕಿರಲಿಲ್ಲ. ಉಳಿದ ಇಬ್ಬರು ಚುನಾವಣಾ ಆಯುಕ್ತರಾದ ಸುಖ್ ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಹೊಸ ಮತದಾರರ ನೋಂದಣಿಗೆ ಬಳಸುವ ‘ಫಾರ್ಮ್ 6’ ರಲ್ಲಿ ಮಾಡಿದ ಹೊಸ ಬದಲಾವಣೆಗಳು ಸೇರಿದಂತೆ ಹಲವು ನಿಬಂಧನೆಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಭಾರತೀಯ ಸಂವಿಧಾನದ ನಿಯಮಗಳ ಪ್ರಕಾರ, ಭಾರತೀಯ ಚುನಾವಣಾ ಆಯೋಗದಲ್ಲಿ (ಇಸಿಐ) ತೆಗೆದುಕೊಳ್ಳುವ ಯಾವುದೇ ನಿರ್ಧಾರವು ಬಹುಮತದಿಂದ (ಈ ಸಂದರ್ಭದಲ್ಲಿ ಮೂವರಲ್ಲಿ ಇಬ್ಬರು) ಅಂಗೀಕಾರಗೊಳ್ಳಬೇಕು. ಆದರೆ ಚುನಾವಣಾ ಆಯೋಗದ ದಾಖಲೆಗಳನ್ನು ಪರಿಶೀಲಿಸಿ ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ಪ್ರಕಟಿಸಿದ ವಿಶೇಷ ವರದಿಯ ಪ್ರಕಾರ, ಇಬ್ಬರು ಚುನಾವಣಾ ಆಯುಕ್ತರು ಕಳೆದ 10 ತಿಂಗಳುಗಳಲ್ಲಿ 14 ಆಕ್ಷೇಪಗಳನ್ನು ಎತ್ತಿ ತಮ್ಮ ಅಸಮ್ಮತಿಯನ್ನು ದಾಖಲಿಸಿದ್ದರು. ಆದರೂ ಮುಖ್ಯ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ರವರು ಎಸ್.ಐ.ಆರ್ ಪ್ರಕ್ರಿಯೆಯನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೆ ತಂದಿದ್ದು, ಇದು 30 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 13 ಕೋಟಿಗೂ ಹೆಚ್ಚು ಮತದಾರರ ಹೆಸರುಗಳು ಪಟ್ಟಿಯಿಂದ ಕೈಬಿಡಲಾಗಿದೆ ಎಂದರು.
ಈ ಸಂಪೂರ್ಣ ಎಸ್.ಐ.ಆರ್ ಪ್ರಕ್ರಿಯೆಯೇ ಅಸಾಂವಿಧಾನಿಕ ಎಂಬುದನ್ನು ತೋರಿಸುತ್ತದೆ. ನಮ್ಮ ದೇಶದ ಬಹುಪಾಲು ಜನರು ಬಡ ಕಾರ್ಮಿಕರು, ಹಳ್ಳಿಗಳ ನಿವಾಸಿಗಳು ಹಾಗೂ ಶೋಷಿತ ಸಮುದಾಯಗಳಿಗೆ ಸೇರಿದವರಾಗಿರುವಾಗ, ತಮ್ಮ ಗುರುತನ್ನು ಸಾಬೀತುಪಡಿಸಲು ಅವರು ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಬ್ಯಾಂಕ್ ಖಾತೆ ಅಥವಾ ಜನನ ಪ್ರಮಾಣಪತ್ರವನ್ನು ಎಲ್ಲಿಂದ ತರಲು ಸಾಧ್ಯ? ಅತ್ಯಂತ ತಳಮಟ್ಟದ ಬಡವರನ್ನು ಚುನಾವಣಾ ಪ್ರಕ್ರಿಯೆಯಿಂದಲೇ ಹೊರಗಿಡಲು ಈ ನಿಬಂಧನೆಯನ್ನು ತರಲಾಗಿದೆ. ಇದಕ್ಕೆ ಮಾನ್ಯತೆ ಸಿಕ್ಕರೆ ಈ ದೇಶದಲ್ಲಿ ಎಂದಾದರೂ ನಿಷ್ಪಕ್ಷಪಾತ ಚುನಾವಣೆಗಳು ನಡೆಯಲು ಸಾಧ್ಯವೇ? ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ AIDSO ಪದಾಧಿಕಾರಿಗಳಾದ ಭರತ್, ಸೈಯದ್, ಹಾಗೂ ಕಾರ್ಯಕರ್ತರಾದ ಹುಸನಪ್ಪ, ಉಮೇಶ್, ಸಿದ್ದು, ಪುನೀತ್, ನಿಸರ್ಗ ಅಮರೇಶ, ಯಶವಂತ, ಬಸವರಾಜ ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
