ಬೆಂಗಳೂರು: ರಾಜ್ಯದ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ಗಳ ಪ್ರವೇಶಾತಿಗೆ ಸಂಬಂಧಿಸಿದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಯುಜಿ ನೀಟ್ — 2026ರ ಆನ್ ಲೈನ್ ‘ಸ್ಟ್ರೇ ವೇಕೆನ್ಸಿ’ (Stray Vacancy) ಸುತ್ತಿನ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಮೂರನೇ ಸುತ್ತಿನ ಸೀಟು ಹಂಚಿಕೆಯ ಬಳಿಕ ಖಾಲಿ ಉಳಿದಿರುವ ವೈದ್ಯಕೀಯ ಸೀಟುಗಳ ಪಟ್ಟಿಯನ್ನು ಅಕ್ಟೋಬರ್ 8 ರಂದೇ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ. ದಂತ ವೈದ್ಯಕೀಯ ವಿಭಾಗದಲ್ಲಿ ಯಾವುದೇ ಸೀಟುಗಳು ಉಳಿದಿಲ್ಲ ಎಂದು ಕೆಇಎ ಸ್ಪಷ್ಟಪಡಿಸಿದೆ. ಮೂರನೇ ಸುತ್ತಿನ ನಂತರ ನಿಗದಿತ ದಿನಾಂಕದೊಳಗೆ ಕಾಲೇಜುಗಳಿಗೆ ಪ್ರವೇಶ ಪಡೆಯದ ಹಾಗೂ ರದ್ದುಗೊಂಡ ಸೀಟುಗಳನ್ನು ಕೂಡ ಈ ಸುತ್ತಿಗೆ ಸೇರಿಸಿ ಹಂಚಿಕೆ ಮಾಡಲಾಗುತ್ತದೆ.
ಹೊಸ ನೋಂದಣಿಗೆ ಅವಕಾಶ:
ನೀಟ್-2026 ಪರೀಕ್ಷೆಯಲ್ಲಿ ಅರ್ಹತೆ ಪಡೆದಿದ್ದರೂ ಇದುವರೆಗೆ ಕೆಇಎ ಮೂಲಕ ನೋಂದಣಿ ಮಾಡಿಕೊಳ್ಳದ ಅಥವಾ ಪ್ರಕ್ರಿಯೆ ಪೂರ್ಣಗೊಳಿಸದ ಆಸಕ್ತ ಅಭ್ಯರ್ಥಿಗಳಿಗೆ ಹೊಸದಾಗಿ ನೋಂದಾಯಿಸಿಕೊಳ್ಳಲು ಅಕ್ಟೋಬರ್ 13 ರಿಂದ 16 ರವರೆಗೆ ಅವಕಾಶ ಕಲ್ಪಿಸಲಾಗಿದೆ. ಈ ಅವಧಿಯಲ್ಲಿ ಅಭ್ಯರ್ಥಿಗಳು ನೋಂದಣಿ ಶುಲ್ಕ ಪಾವತಿಸಿ, ಪರಿಶೀಲನಾ ಚೀಟಿ (Verification Slip) ಪಡೆದು ಆಪ್ಷನ್ ಎಂಟ್ರಿ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು. ಈಗಾಗಲೇ ಪರಿಶೀಲನಾ ಚೀಟಿ ಹೊಂದಿರುವವರು ಮತ್ತೆ ನೋಂದಣಿ ಮಾಡಿಕೊಳ್ಳುವ ಅಗತ್ಯವಿಲ್ಲ.
ಅರ್ಹತೆ ಮತ್ತು ಷರತ್ತುಗಳು:
* ಈ ಹಿಂದಿನ ಯಾವುದೇ ಸುತ್ತುಗಳಲ್ಲಿ ಕೆಇಎ ಮೂಲಕ ವೈದ್ಯಕೀಯ ಸೀಟು ಪಡೆಯದ ಅಭ್ಯರ್ಥಿಗಳು ಮಾತ್ರ ಈ ಸುತ್ತಿನಲ್ಲಿ ಭಾಗವಹಿಸಲು ಅರ್ಹರು.
* ಈಗಾಗಲೇ ದಂತ ವೈದ್ಯಕೀಯ (ಡೆಂಟಲ್) ಸೀಟು ಪಡೆದಿರುವ ಅಭ್ಯರ್ಥಿಗಳು ನಿಗದಿತ ಕೋರ್ಸ್ ಶುಲ್ಕ ಪಾವತಿಸಿ ವೈದ್ಯಕೀಯ ಸೀಟುಗಳಿಗೆ ಮಾತ್ರ ಆಯ್ಕೆ ದಾಖಲಿಸಲು ಅವಕಾಶವಿದೆ.
* ಅಖಿಲ ಭಾರತ ಕೋಟಾ (AIQ), ಡೀಮ್ಡ್ ವಿವಿಗಳು ಅಥವಾ ಇತರ ಮಂಡಳಿಗಳ ಮೊದಲ ಮೂರು ಸುತ್ತುಗಳಲ್ಲಿ ಸೀಟು ಪಡೆದು ಪ್ರವೇಶ ಪಡೆದವರು ಹಾಗೂ MCC 4ನೇ ಸುತ್ತಿನಲ್ಲಿ ಸೀಟು ಹಂಚಿಕೆಯಾದವರು ಈ ಕೌನ್ಸಿಲಿಂಗ್ಗೆ ಅರ್ಹರಲ್ಲ.
* ಕೆಇಎ ಮೂಲಕ ಈಗಾಗಲೇ ಎಂಬಿಬಿಎಸ್ ಸೀಟು ಪಡೆದುಕೊಂಡಿರುವ ಅಭ್ಯರ್ಥಿಗಳು ಭಾಗವಹಿಸುವಂತಿಲ್ಲ.
ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು ಪ್ರಾಧಿಕಾರದ ಅಧಿಕೃತ ವೆಬ್ ಸೈಟ್ kea.kar.nic.in ಅಥವಾ ಸಹಾಯವಾಣಿ ಸಂಖ್ಯೆ 080-23460460 ಅನ್ನು ಸಂಪರ್ಕಿಸಬಹುದು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
