ಬೆಂಗಳೂರು/ತುಮಕೂರು: ಮೈಸೂರು ದಸರೆಯ ಸಾಂಸ್ಕೃತಿಕ ಪರಂಪರೆಯನ್ನು ಕಲ್ಪತರು ನಾಡಿನಲ್ಲೂ ಮರುಸೃಷ್ಟಿಸುವ ಸಂಕಲ್ಪದೊಂದಿಗೆ ರೂಪುಗೊಂಡಿರುವ ‘ತುಮಕೂರು ದಸರಾ–2026’ಕ್ಕೆ ಸಿದ್ಧತೆಗಳು ಬಿರುಸಿನಿಂದ ಸಾಗಿವೆ. ಈ ಸಾಂಸ್ಕೃತಿಕ ಮಹೋತ್ಸವಕ್ಕೆ ಚಾಲನೆ ನೀಡಲು ಹಾಗೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಜಿಲ್ಲಾಡಳಿತದ ಉನ್ನತ ನಿಯೋಗ ಇಂದು ಅಧಿಕೃತ ಆಹ್ವಾನ ಪತ್ರಿಕೆ ನೀಡಿ ಬರಮಾಡಿಕೊಂಡಿದೆ.
ಅಕ್ಟೋಬರ್ 11 ರಿಂದ 21ರವರೆಗೆ ಒಟ್ಟು ಹನ್ನೊಂದು ದಿನಗಳ ಕಾಲ ಸಾರ್ವಜನಿಕರನ್ನು ರಂಜಿಸಲು ಜಿಲ್ಲಾಡಳಿತ ವೈವಿಧ್ಯಮಯ ಕಾರ್ಯಕ್ರಮಗಳನ್ನು ರೂಪಿಸಿದೆ. ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಮುಖ್ಯಮಂತ್ರಿಗಳಿಗೆ ಹಬ್ಬದ ನೀಲನಕ್ಷೆಯನ್ನು ವಿವರಿಸಿದ್ದು, ಸ್ಥಳೀಯ ಜಾನಪದ ಕಲೆ, ಶಾಸ್ತ್ರೀಯ ಸಂಗೀತ, ನಾಟಕ ಹಾಗೂ ಯುವ ಸಮುದಾಯವನ್ನು ಆಕರ್ಷಿಸುವ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲಾಗಿದೆ.

ರಾಜ್ಯ ಮತ್ತು ಹೊರರಾಜ್ಯಗಳ ಖ್ಯಾತ ಕಲಾವಿದರ ಜತೆಗೆ ತುಮಕೂರು ಜಿಲ್ಲೆಯ ಸ್ಥಳೀಯ ಪ್ರತಿಭೆಗಳಿಗೆ ಮುಂಚೂಣಿ ವೇದಿಕೆ ಕಲ್ಪಿಸಲಾಗಿದೆ.
ನಗರದ ಪ್ರಮುಖ ರಸ್ತೆಗಳು, ವೃತ್ತಗಳು ವಿದ್ಯುದ್ದೀಪಗಳಿಂದ ಕಂಗೊಳಿಸಲಿದ್ದು, ವಿಜಯದಶಮಿಯಂದು ವೈಭವದ ಜಂಬೂಸವಾರಿ ಮಾದರಿಯ ಸ್ತಬ್ಧಚಿತ್ರಗಳ ಮೆರವಣಿಗೆಗೆ ಸಿದ್ಧತೆ ನಡೆಸಲಾಗಿದೆ.
ಇನ್ನೂ ಲಕ್ಷಾಂತರ ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆಯಿರುವುದರಿಂದ ಕಾನೂನು ಸುವ್ಯವಸ್ಥೆ ಮತ್ತು ಸಂಚಾರ ನಿರ್ವಹಣೆಗೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಯೋಜನೆ ರೂಪಿಸಲಾಗಿದೆ.
ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಸಿಇಒ ಅಶ್ವಿಜಾ ಬಿ.ವಿ. ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ. ಅವರನ್ನೊಳಗೊಂಡ ಜಿಲ್ಲಾಡಳಿತದ ತಂಡವು ಉತ್ಸವವನ್ನು ಕೇವಲ ಸರ್ಕಾರಿ ಆಚರಣೆಯಾಗಿಸದೆ ‘ಜನರ ಹಬ್ಬ’ವನ್ನಾಗಿ ರೂಪಿಸಲು ಸಜ್ಜಾಗಿದೆ.
ರಾಜ್ಯ ಸರ್ಕಾರದ ಸಹಕಾರದೊಂದಿಗೆ ತುಮಕೂರು ದಸರಾವನ್ನು ರಾಜ್ಯ ಮಟ್ಟದ ಪ್ರಮುಖ ಸಾಂಸ್ಕೃತಿಕ ಉತ್ಸವವನ್ನಾಗಿ ಮುನ್ನೆಲೆಗೆ ತರುವ ನಿಟ್ಟಿನಲ್ಲಿ ಈ ಬಾರಿಯ ಆಚರಣೆ ಹೊಸ ಮೈಲಿಗಲ್ಲಾಗುವ ನಿರೀಕ್ಷೆಯಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
