ಹೊಳೆನರಸೀಪುರ: ತಾಲೂಕಿನ ಬಂಟರತಳಾಲು ಗ್ರಾಮದಲ್ಲಿರುವ ಸರ್ಕಾರಿ ಗೋಮಾಳ ಜಮೀನನ್ನು ಅಕ್ರಮವಾಗಿ ಉಳುಮೆ ಮಾಡಲು ಯತ್ನಿಸಿದ ಘಟನೆಗೆ ಸಂಬಂಧಿಸಿದಂತೆ ಗ್ರಾಮಸ್ಥರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಅತಿಕ್ರಮಣವನ್ನು ತಡೆದಿದ್ದಾರೆ.
ಗ್ರಾಮದ ಸರ್ವೇ ನಂಬರ್ 25 ರಲ್ಲಿರುವ ಸುಮಾರು 86 ಎಕರೆ ಜಮೀನು ಸಾರ್ವಜನಿಕ ಬಳಕೆಗೆ ಮೀಸಲಾಗಿರುವ ಸರ್ಕಾರಿ ಗೋಮಾಳವಾಗಿದೆ. ಈ ಜಮೀನಿನಲ್ಲಿ ಗ್ರಾಮದ ಕೆಲವರು ಉಳುಮೆ ಮಾಡಲು ಮುಂದಾಗಿದ್ದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಸ್ಥಳಕ್ಕೆ ತೆರಳಿ ಕೆಲಸವನ್ನು ತಡೆದಿದ್ದಾರೆ. ಅಲ್ಲದೆ, ಸಾರ್ವಜನಿಕ ಆಸ್ತಿಯನ್ನು ಉಳಿಸಲು ಮೇಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ವಿಷಯ ತಿಳಿದ ಕೂಡಲೇ ಬಂಟರತಳಾಲು ಗ್ರಾಮಕ್ಕೆ ಭೇಟಿ ನೀಡಿದ ಕಂದಾಯ ನಿರೀಕ್ಷಕರು (ಆರ್.ಐ), ಗ್ರಾಮಸ್ಥರೊಂದಿಗೆ ಸುದೀರ್ಘ ಚರ್ಚೆ ನಡೆಸಿ ಸಮಸ್ಯೆಯ ಸಂಪೂರ್ಣ ಮಾಹಿತಿ ಪಡೆದುಕೊಂಡರು. ಜಮೀನಿನ ದಾಖಲೆಗಳನ್ನು ಪರಿಶೀಲಿಸಿ ಸೂಕ್ತ ಪರಿಹಾರ ಒದಗಿಸುವುದಾಗಿ ಅವರು ಭರವಸೆ ನೀಡಿದ್ದಾರೆ.
ಗೋಮಾಳ ಜಮೀನು ಇಡೀ ಗ್ರಾಮಕ್ಕೆ ಸೇರಿದ ಆಸ್ತಿಯಾಗಿದ್ದು, ಇದನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಅತಿಕ್ರಮಣ ನಡೆದಿರುವುದನ್ನು ಖಚಿತಪಡಿಸಿಕೊಂಡು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಹಾಗೂ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಗ್ರಾಮಸ್ಥರಾದ ಬೀರೇಶ್, ಪ್ರಕಾಶ್, ವೆಂಕಟೇಗೌಡ ಮತ್ತು ಕನಕರಾಜು ಒತ್ತಾಯಿಸಿದ್ದಾರೆ.
ವರದಿ: ಮಂಜು ಶ್ರವಣೂರು, ಹೊಳೆನರಸೀಪುರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
