ಔರಾದ್ (ಬೀದರ್): ರಾಷ್ಟ್ರ ಮಟ್ಟದಲ್ಲಿ ಪಕ್ಷವೊಂದನ್ನು ಸ್ಥಾಪಿಸಿ, ಕೋಮುವಾದಿಗಳಿಂದ ತುಳಿತಕ್ಕೊಳಗಾದ ದಲಿತ ಮತ್ತು ಅಲ್ಪಸಂಖ್ಯಾತರ ಪರ ರಾಜಕೀಯ ಚಳವಳಿ ರೂಪಿಸಿ ಕೋಮುವಾದಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ ಕಾನ್ಸಿರಾಂ ಅವರು ದೇಶ ಕಂಡ ಅತ್ಯುನ್ನತ ರಾಜಕಾರಣಿ ಎಂದು ಸಾಮಾಜಿಕ ಹೋರಾಟಗಾರ ರಾಹುಲ್ ಖಂದಾರೆ ಅಭಿಪ್ರಾಯಪಟ್ಟರು.
ಔರಾದ್ ಪಟ್ಟಣದ ಬಹುಜನ ಸಂಪರ್ಕ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಕಾನ್ಸಿರಾಂ ಅವರ 20ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ದೇಶದಲ್ಲಿ ಕಳೆದ 70 ವರ್ಷಗಳಲ್ಲಿ ಬಡವರಿಗಾಗಿ ಸಾವಿರಾರು ಯೋಜನೆಗಳು ಜಾರಿಗೆ ಬಂದರೂ ದಲಿತರು ಮತ್ತು ಅಲ್ಪಸಂಖ್ಯಾತರ ಸ್ಥಿತಿ ಉತ್ತಮಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಕಾನ್ಸಿರಾಂ ಅವರು ಪ್ರಬಲ ಚಳವಳಿಯನ್ನೇ ರೂಪಿಸಿ, ಪಕ್ಷ ಸಂಘಟನೆ ಮಾಡುವ ಮೂಲಕ ತುಳಿತಕ್ಕೊಳಗಾದವರನ್ನು ಮೇಲೆತ್ತುವ ಮಹತ್ತರ ಪ್ರಯತ್ನದಲ್ಲ ತೊಡಗಿದ್ದರು ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಯುವ ಬರಹಗಾರ ಪರಮೇಶ ವಿಳಸಪೂರೆ, “ದೇಶದಲ್ಲಿ ಕೋಮುವಾದಿ ಆಡಳಿತದಿಂದ ಶೋಷಿತ ಸಮುದಾಯಗಳು ಇಂದಿಗೂ ಅದೇ ಸ್ಥಿತಿಯಲ್ಲಿ ಮುಂದುವರಿಯುತ್ತಿವೆ. ವಿಜ್ಞಾನಿಯಾಗಿದ್ದ ಕಾನ್ಶಿರಾಂ ಅವರು ತಮ್ಮ ಉನ್ನತ ಸರ್ಕಾರಿ ಹುದ್ದೆಯನ್ನು ತೊರೆದು, ಡಾ. ಬಿ.ಆರ್. ಅಂಬೇಡ್ಕರ್ ಅವರು ರೂಪಿಸಿದ ಕ್ರಾಂತಿಕಾರಿ ಚಿಂತನೆಗಳನ್ನು ಮೂರು ದಶಕಗಳ ಕಾಲ ದಲಿತರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರು ಅಧಿಕಾರ ಪಡೆಯುವ ರಾಜಕೀಯ ಸಾಧನವನ್ನಾಗಿ ವಿಸ್ತರಿಸಿದರು. ವ್ಯವಸ್ಥಿತವಾಗಿ ಚಿಂತಿಸಿ, ಹಂತಹಂತವಾಗಿ ಕಾರ್ಯಕ್ರಮಗಳನ್ನು ರೂಪಿಸಿ ಬಹುಜನ ಸಮಾಜ ಪಕ್ಷವನ್ನು (BSP) ಕಟ್ಟಿ ಬೆಳೆಸಿದ ಅವರ ಸಾಧನೆ ಅತ್ಯಂತ ಅದ್ಭುತವಾದುದು” ಎಂದರು.
ಸಮಾಜದಲ್ಲಿದ್ದ ಜಾತಿ ವ್ಯವಸ್ಥೆಯಲ್ಲಿ ದೊಡ್ಡ ಮಟ್ಟದ ಬದಲಾವಣೆ ತಂದ ಕಾನ್ಶಿರಾಮ್ ಅವರು, ಬ್ರಾಹ್ಮಣ, ಬನಿಯಾ, ವೈಶ್ಯ ಹಾಗೂ ಪ್ರಬಲ ಜಾತಿ ಹೊರತುಪಡಿಸಿದ ಬಹುಸಂಖ್ಯಾತ ಜನಸಮೂಹವನ್ನು ‘ಬಹುಜನ’ ಎಂದು ಕರೆದು, ವಿಶಾಲವಾದ ಸಾಂಸ್ಕೃತಿಕ, ಸಾಮಾಜಿಕ ಮತ್ತು ರಾಜಕೀಯ ವೇದಿಕೆಯನ್ನು ಸಿದ್ಧಪಡಿಸಿದರು ಎಂದು ಹೇಳಿದರು.
“ದೇಶದಲ್ಲಿ ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಹಾಗೂ ದೀನ ದುರ್ಬಲ ವರ್ಗದ ಜನರು ಇಂದಿಗೂ ಭಯದ ವಾತಾವರಣದಲ್ಲಿ ಬದುಕುವಂತಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಡವರನ್ನು ಬದಿಗೊತ್ತಿ, ಪ್ರಭಾವಿ ಉದ್ಯಮಿಗಳಿಗೆ ಆದ್ಯತೆ ನೀಡಿ ಯೋಜನೆಗಳನ್ನು ರೂಪಿಸುತ್ತಿರುವುದರಿಂದ ಬಡ ಜನರು ಇಂದಿಗೂ ಬಡವರಾಗಿಯೇ ಉಳಿಯುವಂತಾಗಿದೆ.”
— ಪರಮೇಶ ಡಿ. ವಿಳಸಪೂರೆ, ಯುವ ಬರಹಗಾರ
ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಕಟ್ಟಡ ಕಾರ್ಮಿಕರ ಮಹಾಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ ಶಿಂಧೆ, ಸಿದ್ದಾರ್ಥ ಭೋಸ್ಲೆ, ಕೃಷ್ಣ ದಾಂಡೇಕರ್, ಉತ್ತಮ ಗಾಯಕವಾಡ, ದೀಪಕ್ ಭೋಸ್ಲೆ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.
ವರದಿ: ಅರವಿಂದ ಮಲ್ಲೀಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
