ತುಮಕೂರು: ಕರ್ನಾಟಕ, ದೆಹಲಿ, ಅಸ್ಸಾಂ, ಬಿಹಾರ ಸೇರಿದಂತೆ ದೇಶದ ಹಲವೆಡೆ ತೀವ್ರ ಪೊಲೀಸ್ ದಬ್ಬಾಳಿಕೆ ಹಾಗೂ ಅನೇಕ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರು ಮತ್ತು ಎಐಡಿಎಸ್ ಓ ನ ನೂರಾರು ಕಾರ್ಯಕರ್ತರನ್ನು ಬಂಧಿಸಿರುವುದನ್ನು ವಿರೋಧಿಸಿ ಅಖಿಲ ಭಾರತ ಪ್ರತಿಭಟನಾ ದಿನವನ್ನು ನಗರದ ವಿವಿಧ ಕಡೆ ವಿದ್ಯಾರ್ಥಿಗಳ ನಡುವೆ ನಡೆಸಲಾಯಿತು.
AIDSO ಜಿಲ್ಲಾ ಕಾರ್ಯದರ್ಶಿ ಲಕ್ಕಪ್ಪ ಮಾತನಾಡಿ, ಭಾರತೀಯ ಸಂವಿಧಾನದ ಆರ್ಟಿಕಲ್ 19(1)(ಬಿ) (Article 19(1)(b)) ದೇಶದ ಎಲ್ಲಾ ನಾಗರೀಕರಿಗೆ ಶಸ್ತ್ರಾಸ್ತ್ರಗಳಿಲ್ಲದೆ ಶಾಂತಿಯುತವಾಗಿ ಸಭೆ ಸೇರುವ ಮತ್ತು ಪ್ರತಿಭಟಿಸುವ ಮೂಲಭೂತ ಹಕ್ಕನ್ನು ನೀಡಿದೆ. ಆದರೆ, ಇಂದು ಆಡಳಿತ ಪಕ್ಷಗಳು ಪ್ರಜಾಪ್ರಭುತ್ವದ ಕಗ್ಗೊಲೆಗೆ ಮುಂದಾಗಿವೆ, ಎಸ್ ಐಆರ್ (SIR) ವಿರುದ್ಧದ ಪ್ರತಿಭಟನೆಗಳನ್ನು ನಿಲ್ಲಿಸಲು ಮಾಡಿದ ತಂತ್ರಗಳು, ಸಂವಿಧಾನದ ಈ ಮೂಲಭೂತ ಹಕ್ಕನ್ನು ಸಂಪೂರ್ಣವಾಗಿ ಕಿತ್ತುಕೊಳ್ಳುತ್ತಿರುವುದನ್ನು ಎತ್ತಿ ತೋರಿಸುತ್ತಿದೆ ಎಂದರು.
“ನಮ್ಮ ದೇಶದ ಇತಿಹಾಸದುದ್ದಕ್ಕೂ ಈ ದೇಶವನ್ನಾಳಿದ ವಿವಿಧ ರಾಜಕೀಯ ಪಕ್ಷಗಳು ಪ್ರಜಾಪ್ರಭುತ್ವದ ಆಧಾರಸ್ತಂಭಗಳನ್ನು ತುಳಿದುಹಾಕಿವೆ ಎಂಬುದು ನಮಗೆ ತಿಳಿದಿದೆ. ಅವು ಎಂದಿಗೂ ಸ್ವತಂತ್ರವಾಗಿ ಮತ್ತು ಜನಪರವಾಗಿ ಉಳಿದಿರಲಿಲ್ಲ. ನ್ಯಾಯಾಲಯಗಳು ಸಹ ಜನವಿರೋಧಿ ನೀತಿಗಳನ್ನು ಸಮರ್ಥಿಸಿಕೊಂಡಿವೆ. ಆದಾಗ್ಯೂ ಇಂದು ನಾವು ಕಾಣುತ್ತಿರುವ ದಾಳಿಗಳು ಹಿಂದಿನ ಎಲ್ಲಾ ದಾಳಿಗಳನ್ನು ಮೀರಿಸುವಂತಿವೆ” ಎಂದರು.
“ಇಂದು ವಿರೋಧ ಪಕ್ಷಗಳು ಪ್ರಜಾಪ್ರಭುತ್ವವನ್ನು ಉಳಿಸುವ ಘೋಷಣೆಗಳನ್ನು ಕೂಗುತ್ತಿವೆ, ಆದರೆ ಅಧಿಕಾರದಲ್ಲಿದ್ದಾಗ ತಮ್ಮದೇ ಸ್ವಾರ್ಥಕ್ಕಾಗಿ ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡ ಆರೋಪದಿಂದ ಅವರು ತಪ್ಪಿಸಿಕೊಳ್ಳಲು ಸಾಧ್ಯವೇ? ಅವರೂ ತಮ್ಮ ಅಧಿಕಾರವನ್ನು ಉಳಿಸಿಕೊಳ್ಳಲು ಇದೇ ರೀತಿಯಲ್ಲಿ ವರ್ತಿಸಿದ್ದರು. ಇಂತಹ ನಿರ್ಣಾಯಕ ಸಂದರ್ಭದಲ್ಲಿ, ನಮ್ಮ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಉಳಿಸುವ ಜವಾಬ್ದಾರಿಯನ್ನು ಈ ದೇಶದ ವಿದ್ಯಾರ್ಥಿಗಳು ಮತ್ತು ಯುವಜನತೆ ಹೊರಬೇಕಾದವರು ಎಂದು ಹೇಳಿದರು.
ಈ ಸಂದರ್ಭದಲ್ಲಿ AIDSO ಪದಾಧಿಕಾರಿಗಳಾದ ಭರತ್, ಸೈಯದ್, ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
