ಮೈಸೂರು: ದೇಶದಲ್ಲಿ ಪ್ರಜಾಪ್ರಭುತ್ವವಿದೆಯೇ ಅಥವಾ ತುರ್ತು ಪರಿಸ್ಥಿತಿಯೇ ಎಂಬುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರಿಗೆ ಉತ್ತರ ನೀಡಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀವ್ರವಾಗಿ ಆಗ್ರಹಿಸಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಹಾಗೂ ಆಡಳಿತ ವ್ಯವಸ್ಥೆಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಈ ದೇಶದಲ್ಲಿ ಪ್ರಜಾಪ್ರಭುತ್ವವಿದ್ದು, ಪ್ರತಿಭಟನೆ ನಡೆಸುವುದು ಪ್ರತಿಯೊಬ್ಬ ನಾಗರಿಕನ ಹಕ್ಕು. ಆದರೆ ಆರಂಭದಲ್ಲೇ ಪ್ರತಿಭಟನೆಗಳನ್ನು ಹತ್ತಿಕ್ಕುವುದು, ಇಂಟರ್ನೆಟ್ ಸ್ಥಗಿತಗೊಳಿಸುವುದು, ವಿಮಾನದಿಂದ ಇಳಿಯುತ್ತಿದ್ದಂತೆಯೇ ಜನರನ್ನು ಹಾಗೂ ಚುನಾಯಿತ ಪ್ರತಿನಿಧಿಗಳನ್ನು ಏಕಾಏಕಿ ಬಂಧಿಸುವುದು ಇಡೀ ದೇಶಕ್ಕೆ ದೊಡ್ಡ ಮುಜುಗರದ ಸಂಗತಿ ಎಂದು ಸಿಎಂ ಡಿ.ಕೆ. ಶಿವಕುಮಾರ್ ಟೀಕಿಸಿದರು. ಇಡೀ ಜಗತ್ತು ನಮ್ಮನ್ನು ಗಮನಿಸುತ್ತಿದ್ದು, ಇಂತಹ ಘಟನೆಗಳು ದೇಶದ ಪ್ರತಿಷ್ಠೆಗೆ ದೊಡ್ಡ ಕಳಂಕ ತರುತ್ತವೆ ಎಂದರು.
ಯಾವುದೇ ಸೂಕ್ತ ಪರಿಶೀಲನೆ ನಡೆಸದೆ ಸುಮಾರು ಒಂದು ಕೋಟಿ ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸಿಹಾಕಲಾಗಿದೆ ಎಂದು ಆರೋಪಿಸಿದ ಅವರು, ವಿಶೇಷವಾಗಿ ದಲಿತರು, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ಸಮುದಾಯಗಳ ಮತದಾನದ ಹಕ್ಕನ್ನು ಕಸಿದುಕೊಂಡು ಅದರಲ್ಲೂ ರಾಜಕೀಯ ಮಾಡುವುದು ಅಮಾನವೀಯ. ಇದು ಪ್ರಜಾಪ್ರಭುತ್ವವಲ್ಲ, ಸಂಪೂರ್ಣ ಸರ್ವಾಧಿಕಾರ ಧೋರಣೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮತದಾರರ ಹಕ್ಕುಗಳ ರಕ್ಷಣೆಗಾಗಿ ನಾವು ಹೋರಾಟ ನಡೆಸಲಿದ್ದು, ರಾಜ್ಯದ ಎಲ್ಲ ಶಾಸಕರು ದೆಹಲಿಯಲ್ಲಿ ಇರುವಂತೆ ಸೂಚಿಸಲಾಗಿದೆ. ತಾವೂ ಕೂಡ ದೆಹಲಿಗೆ ತೆರಳಿ ದೇಶದ ಪ್ರತಿಯೊಬ್ಬ ಮತದಾರನ ಹಕ್ಕುಗಳ ರಕ್ಷಣೆಗಾಗಿ ಮತ್ತು ಮತದಾನದ ಹಕ್ಕು ಸಿಗುವಂತೆ ಹೋರಾಟ ಮುಂದುವರಿಸುವುದಾಗಿ ತಿಳಿಸಿದರು.
ಸಾರ್ವಜನಿಕ ಜೀವನದಲ್ಲಿರುವಾಗ ಟೀಕೆಗಳನ್ನು ಸ್ವೀಕರಿಸುವುದನ್ನು ಕಲಿಯಬೇಕು ಎಂದ ಅವರು, ದೇಶದಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದು ಹೇಡಿತನದ ವಾತಾವರಣವನ್ನು ಬಿಂಬಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
