ಧಾರವಾಡ: ಹೆಚ್.ಐ.ವಿ ಸೋಂಕಿನ ನಿಯಂತ್ರಣಕ್ಕೆ ಸಾರ್ವಜನಿಕರಲ್ಲಿ ಮತ್ತು ಯುವಜನರಲ್ಲಿ ಜಾಗೃತಿ ಮೂಡಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ತಿಳಿಸಿದರು.
ಅಕ್ಟೋಬರ್ 12 ರಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಿವೇಕಾನಂದ ಸಂಸ್ಥೆ, ಭಾರತ್ ಪೆಟ್ರೋಲಿಯಂ ಸಂಸ್ಥೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಯುವಜನೋತ್ಸವ ಹಾಗೂ ಹೆಚ್.ಐ.ವಿ/ಏಡ್ಸ್ ತಡೆಗಟ್ಟುವ ಜಾಗೃತಿ ಬೈಕ್ ರ್ಯಾಲಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಹೆಚ್.ಐ.ವಿ ನಿಯಂತ್ರಣಕ್ಕೆ ಸಂಬಂಧಿಸಿದಂತೆ ನಿಗದಿಪಡಿಸಿರುವ ಮೂರು ಪ್ರಮುಖ ಗುರಿಗಳಲ್ಲಿ ಎರಡನೇ ಮತ್ತು ಮೂರನೇ ಗುರಿಗಳನ್ನು ಈಗಾಗಲೇ ಸಾಧಿಸಲಾಗಿದೆ. ಸೋಂಕು ಹೊಂದಿರುವ ಶೇ.95ರಷ್ಟು ಜನರಿಗೆ ರೋಗನಿರ್ಣಯ ಮಾಡುವುದು ಮೊದಲ ಗುರಿಯಾಗಿದ್ದು, ಸೋಂಕಿತ ಶೇ.95 ಜನರಿಗೆ ಚಿಕಿತ್ಸೆ ನೀಡುವುದು ಎರಡನೇ ಗುರಿ ಹಾಗೂ ಚಿಕಿತ್ಸೆ ಪಡೆಯುತ್ತಿರುವ ಶೇ.95 ಜನರ ದೇಹದಲ್ಲಿ ವೈರಸ್ ಪ್ರಮಾಣವನ್ನು ನಿಯಂತ್ರಿಸುವುದು ಮೂರನೇ ಗುರಿಯಾಗಿದೆ. ಮೊದಲ ಗುರಿಯನ್ನು ತಲುಪಲು ಇನ್ನು ಹೆಚ್ಚಿನ ಪ್ರಯತ್ನದ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು. ಇಂದಿನ ವೈದ್ಯಕೀಯ ಪ್ರಗತಿಯಿಂದ ಸೋಂಕಿತರು ಸೂಕ್ತ ಚಿಕಿತ್ಸೆ ಪಡೆದು ಸಹಜ ಜೀವನ ನಡೆಸಬಹುದು. ಸಮಾಜವು ಸೋಂಕಿತರನ್ನು ಕೀಳಾಗಿ ನೋಡದೆ ಗೌರವದಿಂದ ಕಾಣಬೇಕು. ಕೊರೊನಾ ನಂತರ ಇತರ ಕಾಯಿಲೆಗಳ ಬಗ್ಗೆ ನಿರ್ಲಕ್ಷ್ಯ ವಹಿಸದೆ ಆರೋಗ್ಯ ಇಲಾಖೆಯ ಜಾಗೃತಿ ಅಭಿಯಾನಗಳಿಗೆ ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಏಡ್ಸ್ ತಡೆಗಟ್ಟುವ ಸೊಸೈಟಿಯ ಯೋಜನಾ ನಿರ್ದೇಶಕಿ ಪದ್ಮಾ ಬಸವಂತಪ್ಪ ಮಾತನಾಡಿ, ಬದಲಾಗುತ್ತಿರುವ ಜೀವನಶೈಲಿ ಮತ್ತು ಡೇಟಿಂಗ್ ಆ್ಯಪ್‌ಗಳ ಬಳಕೆಯಿಂದಾಗಿ ಸಾಂದರ್ಭಿಕ ಲೈಂಗಿಕ ಸಂಪರ್ಕಗಳು ಹೆಚ್ಚುತ್ತಿದ್ದು, ಇಂತಹ ಸಂಪರ್ಕಗಳನ್ನು ಗುರುತಿಸಿ ಆರೋಗ್ಯ ತಪಾಸಣೆ ನಡೆಸುವುದು ಸವಾಲಾಗಿದೆ. ಆದ್ದರಿಂದ ಯುವಜನರಲ್ಲಿ ಹೆಚ್.ಐ.ವಿ ಹರಡುವಿಕೆ ಮತ್ತು ಸುರಕ್ಷಿತ ಲೈಂಗಿಕ ನಡವಳಿಕೆಗಳ ಕುರಿತು ಅರಿವು ಮೂಡಿಸುವುದು ಅತ್ಯಂತ ಮುಖ್ಯವಾಗಿದೆ ಎಂದರು.
ಅಭಿಯಾನದ ಅಂಗವಾಗಿ ಆಯೋಜಿಸಲಾಗಿದ್ದ ಬೈಕ್ ರ್ಯಾಲಿಯು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಿಂದ ಆರಂಭವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಪುನಃ ಕಚೇರಿ ಆವರಣಕ್ಕೆ ತಲುಪಿ ಮುಕ್ತಾಯಗೊಂಡಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಪರಶುರಾಮ ಎಫ್.ಕೆ, ಜಿಲ್ಲಾ ಕ್ಷಯ ರೋಗ ನಿರ್ಮೂಲನ ಅಧಿಕಾರಿ ಡಾ. ರವೀಂದ್ರ ಆರ್. ಬೋವೇರ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ. ಆರ್. ಪಾತ್ರೋಟ, ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ. ಸಂಜಯ ಡುಮ್ಮಗೋಳ, ತಾಲೂಕು ಆರೋಗ್ಯ ಅಧಿಕಾರಿ ಡಾ. ತನುಜಾ ಕೆ.ಎನ್. ಹಾಗೂ ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
