ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಬೆಟ್ಟದಹಳ್ಳಿ ಗ್ರಾಮದ ಬಳಿ ನಾಲೆಯಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ವೃದ್ಧೆಯೊಬ್ಬರ ಮೃತದೇಹ ಪತ್ತೆಯಾಗಿದ್ದ ಭೀಕರ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡ ತಿರುವು ಸಿಕ್ಕಿದೆ. 50 ಸಾವಿರ ರೂಪಾಯಿ ಸಾಲದ ಹಣ ವಾಪಸ್ ನೀಡದ್ದಕ್ಕೆ ವೃದ್ಧೆಯನ್ನು ಕೊಲೆ ಮಾಡಿ, ನಂತರ ಮೃತದೇಹವನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ನಾಲೆಗೆ ಎಸೆದು ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅರಕಲಗೂಡು ತಾಲೂಕಿನ ಬೆಟ್ಟದಹಳ್ಳಿ ಗ್ರಾಮದ ಬಳಿ ಅಕ್ಟೋಬರ್ 7 ರಂದು ನಾಲೆಯಲ್ಲಿ ಲಕ್ಷ್ಮಮ್ಮ (67) ಎಂಬವರ ಮೃತದೇಹ ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಕುರಿತು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡ ಕೊಣನೂರು ಠಾಣಾ ಪೊಲೀಸರು, ರಮೇಶ್ (58) ಎಂಬಾತನನ್ನು ಬಂಧಿಸಿದ್ದಾರೆ.
ಮೃತ ಲಕ್ಷ್ಮಮ್ಮ ಅವರು ರಮೇಶ್ ಎಂಬಾತನ ಬಳಿ 50 ಸಾವಿರ ರೂಪಾಯಿ ಸಾಲ ಪಡೆದಿದ್ದರು. ಪಡೆದ ಹಣವನ್ನು ವಾಪಸ್ ನೀಡದೆ ಸತಾಯಿಸುತ್ತಿದ್ದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ರಮೇಶ್, ವೃದ್ಧೆಯನ್ನು ಕೊಲೆ ಮಾಡಲು ಸಂಚು ಹೂಡಿದ್ದ. ಅಕ್ಟೋಬರ್ 3 ರಂದು ವಿಜಿ ಕೊಪ್ಪಲಿಗೆ ಹೋಗಿ ಬರುವುದಾಗಿ ಪತಿಗೆ ತಿಳಿಸಿ ಮನೆಯಿಂದ ಹೊರಟಿದ್ದ ಲಕ್ಷ್ಮಮ್ಮ ಅವರಿಗೆ ಬೈಕ್ ನಲ್ಲಿ ಡ್ರಾಪ್ ನೀಡುವುದಾಗಿ ನಂಬಿಸಿ ಕರೆದೊಯ್ದಿದ್ದಾನೆ. ಬಳಿಕ ಬೆಟ್ಟದಹಳ್ಳಿ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಕಪಾಳಕ್ಕೆ ಹೊಡೆದು, ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಮೃತದೇಹವನ್ನು ಮೊದಲೇ ತಂದಿದ್ದ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ನಾಲೆಗೆ ಎಸೆದಿದ್ದಾನೆ ಎಂದು ಅರಕಲಗೂಡು ವೃತ್ತ ನಿರೀಕ್ಷಕ ವಸಂತ್ ಕುಮಾರ್ ಮಾಹಿತಿ ನೀಡಿದ್ದಾರೆ.
120 ಗ್ರಾಂ ಚಿನ್ನಾಭರಣ ದೋಚಿದ್ದ ಆರೋಪಿ:
ಕೊಲೆಗೈಯುವ ಮುನ್ನ ವೃದ್ಧೆ ಲಕ್ಷ್ಮಮ್ಮ ಅವರ ಮೈಮೇಲಿದ್ದ ಚಿನ್ನದ ತಾಳಿ, ಕಾಸಿನ ಸರ, ಓಲೆ, ಮಾಟಿ ಹಾಗೂ ಮೂರು ಉಂಗುರಗಳು ಸೇರಿದಂತೆ ಒಟ್ಟು ಸುಮಾರು 120 ಗ್ರಾಂ ಚಿನ್ನಾಭರಣಗಳನ್ನು ಆರೋಪಿ ರಮೇಶ್ ಕಸಿದುಕೊಂಡಿದ್ದನು. ಈ ಪೈಕಿ ಒಂದು ಉಂಗುರವನ್ನು ಗಿರವಿ ಅಂಗಡಿಯಲ್ಲಿ ಅಡವಿಟ್ಟು ಸಾಲ ಪಡೆದಿದ್ದರೆ, ಉಳಿದ ಚಿನ್ನಾಭರಣಗಳನ್ನು ಶುಂಠಿ ಬೆಳೆದಿದ್ದ ಜಮೀನಿನ ಬಳಿಯ ಹಳೆಯ ಕೋಣೆಯಲ್ಲಿ ಪ್ಲಾಸ್ಟಿಕ್ ಪೈಪ್‌ಗಳ ನಡುವೆ ಬಚ್ಚಿಟ್ಟಿರುವುದು ಪೊಲೀಸರ ತನಿಖೆಯಿಂದ ಬಯಲಾಗಿದೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಕೊಣನೂರು ಠಾಣಾ ಪೊಲೀಸರು, ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
