ಚಿತ್ರದುರ್ಗ: ಮದಕರಿ ನಾಯಕ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮಾಜಿ ಸಂಸದ ಹಾಗೂ ಮಾಜಿ ಸಚಿವ ವಿ.ಎಸ್. ಉಗ್ರಪ್ಪ ಅವರು ನಟ ಕಿಚ್ಚ ಸುದೀಪ್ ಗೆ ಮೀಸಲಾತಿ ಹೋರಾಟಕ್ಕೆ ಕೈಜೋಡಿಸುವಂತೆ ಮನವಿ ಮಾಡಿದ್ದಾರೆ. ಅಭಿಮಾನಿಗಳಿಂದ ಕೇಕೆ, ಶಿಳ್ಳೆ ಪಡೆಯುವುದಷ್ಟೇ ಅಲ್ಲ, ನಾಯಕ ಸಮುದಾಯದ ಮೀಸಲಾತಿ ಹೋರಾಟದಲ್ಲೂ ಭಾಗವಹಿಸಬೇಕು ಎಂದು ಅವರು ಹೇಳಿರುವುದು ಗಮನ ಸೆಳೆದಿದೆ.ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಉಗ್ರಪ್ಪ, “ನಾಯಕ ಜನಾಂಗದ ಮನೆಯ ಮಗನಾಗಿದ್ದರೆ ನಮ್ಮ ಸಮುದಾಯದ ಪರ ಧ್ವನಿ ಎತ್ತಿ. ಮೀಸಲಾತಿ ಹೋರಾಟಕ್ಕೆ ಬಂದು ಬೀದಿಯಲ್ಲಿ ಹೋರಾಡಿ. ದಮ್ಮು, ತಾಕತ್ತು ಇದ್ದರೆ ನಮ್ಮ ಸಮುದಾಯದ ಮೀಸಲಾತಿಗಾಗಿ ನಡೆಯುವ ಹೋರಾಟಕ್ಕೆ ಬನ್ನಿ” ಎಂದು ಸುದೀಪ್ ಗೆ ಕರೆ ನೀಡಿದರು.
ನಟ ಸುದೀಪ್ ಅವರ ಅಭಿಮಾನಿಗಳನ್ನು ಉಲ್ಲೇಖಿಸಿದ ಉಗ್ರಪ್ಪ, “ನೀವೆಲ್ಲ ಕಿಚ್ಚ, ಕಿಚ್ಚ ಎಂದು ಕೂಗುತ್ತೀರಿ. ಆದರೆ, ನಮ್ಮ ಸಮುದಾಯದ ಮೀಸಲಾತಿ ಹೆಚ್ಚಳದ ಹೋರಾಟಕ್ಕೂ ನಾಯಕತ್ವ ವಹಿಸಿ” ಎಂದು ಮನವಿ ಮಾಡಿದರು. ಅವರ ಈ ಹೇಳಿಕೆ ಕಾರ್ಯಕ್ರಮದಲ್ಲಿ ಚರ್ಚೆಗೆ ಕಾರಣವಾಗಿದೆ.
ಮದಕರಿ ನಾಯಕರ ಜನನ ವೃತ್ತಾಂತವನ್ನು ಪ್ರಸ್ತಾಪಿಸಿದ ಉಗ್ರಪ್ಪ, ಯಾವುದೇ ಸಮಾಜದಲ್ಲಿ ಜಾಗೃತಿ, ವೈಚಾರಿಕತೆ ಮತ್ತು ಸಂಘಟನೆ ಇಲ್ಲದಿದ್ದರೆ ಆ ಸಮಾಜದ ಪ್ರಗತಿ ಕಷ್ಟ ಎಂದು ಅಭಿಪ್ರಾಯಪಟ್ಟರು.ಪರಿಶಿಷ್ಟ ಪಂಗಡದ (ಎಸ್ಟಿ) ಮೀಸಲಾತಿಗೆ ಸಂಬಂಧಿಸಿದ ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸುವುದು ಸೇರಿದಂತೆ ಕಾನೂನುಬದ್ಧ ಕ್ರಮಗಳ ಮೂಲಕ ಮೀಸಲಾತಿ ಪ್ರಮಾಣವನ್ನು ಶೇ.56ಕ್ಕೆ ಹೆಚ್ಚಿಸಲು ಪ್ರಯತ್ನಿಸಬೇಕು ಎಂದು ಹೇಳಿದರು.
ಮೀಸಲಾತಿ ಹೆಚ್ಚಳಕ್ಕೆ ಸಂವಿಧಾನದ ಒಂಬತ್ತನೇ ಅನುಸೂಚಿಯಲ್ಲಿ ಸೇರಿಸುವ ವಿಚಾರವನ್ನೂ ಪ್ರಸ್ತಾಪಿಸಿದ ಅವರು, ಈ ನಿಟ್ಟಿನಲ್ಲಿ ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಚಿತ್ರದುರ್ಗದ ಬಸ್ ನಿಲ್ದಾಣ, ರೈಲು ನಿಲ್ದಾಣ ಹಾಗೂ ಜಿಲ್ಲಾಧಿಕಾರಿ ಕಚೇರಿಗೆ ವೀರ ಮದಕರಿ ನಾಯಕರ ಹೆಸರಿಡುವಂತೆ ಉಗ್ರಪ್ಪ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿದರು. ಅಲ್ಲದೆ, ರಾಜ್ಯ ಸರ್ಕಾರವು ವೀರ ಮದಕರಿ ನಾಯಕರ ಹೆಸರಿನಲ್ಲಿ ಪ್ರಾಧಿಕಾರ ರಚಿಸಬೇಕು ಮತ್ತು ಚಿತ್ರದುರ್ಗದಲ್ಲಿ ಅವರ ಹೆಸರಿನಲ್ಲಿ ಸ್ಮಾರಕ ನಿರ್ಮಿಸಬೇಕು ಎಂದು ಒತ್ತಾಯಿಸಿದರು.
“ನನ್ನ ಕೊನೆಯ ಉಸಿರು ಇರುವವರೆಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಸೇವೆ ಮಾಡುತ್ತೇನೆ” ಎಂದು ಉಗ್ರಪ್ಪ ಹೇಳಿದರು.ಮದಕರಿ ನಾಯಕ ಜಯಂತೋತ್ಸವದ ವೇದಿಕೆಯಲ್ಲಿ ಸುದೀಪ್ಗೆ ಮೀಸಲಾತಿ ಹೋರಾಟಕ್ಕೆ ಆಹ್ವಾನ ನೀಡಿರುವುದು ಕಾರ್ಯಕ್ರಮದ ಪ್ರಮುಖ ಚರ್ಚೆಯ ವಿಷಯವಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
