ತುಮಕೂರು: ಡೆಂಗೀ ಹಾಗೂ ಚಿಕೂನ್ ಗುನ್ಯ ಜ್ವರಗಳು ಸೋಂಕು ಹೊಂದಿದ್ದು, ಈಡೀಸ್ ಈಜಿಪ್ಟಿ ಎಂಬ ಸೊಳ್ಳೆಯ ಕಡಿತದಿಂದ ಬರುತ್ತವೆ. ನಿಂತ ಸ್ವಚ್ಛ ನೀರಿನಲ್ಲಿ ಹುಟ್ಟುವ ಈ ಸೊಳ್ಳೆ ಸಾಧಾರಣವಾಗಿ ಹಗಲಿನಲ್ಲಿ ಕಚ್ಚುತ್ತದೆ. ಈಡೀಸ್ ಈಜಿಪ್ಟಿ ಸೊಳ್ಳೆಯು ತನ್ನ ಜೀವನ ಚಕ್ರವನ್ನು ಪೂರ್ಣಗೊಳಿಸಲು ಸುಮಾರು 8 ರಿಂದ 10 ದಿನಗಳನ್ನು ತೆಗೆದುಕೊಳ್ಳುತ್ತದೆ. 7 ದಿನಗಳ ಮೊದಲ 3 ಹಂತಗಳಾದ ಮೊಟ್ಟೆ, ಲಾರ್ವಾ, ಪ್ಯೂಪಾ ಪ್ರಕ್ರಿಯೆಯು ನೀರಿನಲ್ಲಿ ನಡೆಯುತ್ತದೆ.
ಲಕ್ಷಣಗಳು:
ಹಠಾತ್ತನೆ ಬರುವ ಅಧಿಕ ಜ್ವರ, ತೀವ್ರ ತಲೆ ನೋವು, ಕಣ್ಣುಗಳ ಹಿಂಭಾಗದಲ್ಲಿ ತೀವ್ರತರ ನೋವು, ಮೈ ನೋವು, ಕೀಲುಗಳಲ್ಲಿ ನೋವು, ವಾಕರಿಕೆ ಮತ್ತು ವಾಂತಿ ಈ ರೋಗಗಳ ಲಕ್ಷಣಗಳಾಗಿವೆ.
ವೈದ್ಯಕೀಯ ಉಪಚಾರ:
ರೋಗದ ಲಕ್ಷಣ ಕಂಡೊಡನೆ ಉಚಿತ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಯನ್ನು ಸಂಪರ್ಕಿಸಿ, ವೈದ್ಯರಿಂದ ಪರೀಕ್ಷೆ ಮಾಡಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು.
ಮುನ್ನೆಚ್ಚರಿಕೆ:
ಸಿಮೆಂಟ್ ತೊಟ್ಟಿ, ಪ್ಲಾಸ್ಟಿಕ್ ತೊಟ್ಟಿ, ಬಕೆಟ್, ಡ್ರಂ, ಬ್ಯಾರಲ್, ಖಾಲಿ ಡಬ್ಬ, ಏರ್ ಕೂಲರ್, ಗಡಿಗೆ, ಗಡಿಗೆ ತುಂಡುಗಳು, ತೆಂಗಿನ ಚಿಪ್ಪು, ಹಳೆಯ/ ಒಡೆದ ಟೈರ್, ಹೀಗೆ ಎಲ್ಲೆಲ್ಲಿ ಸ್ವಚ್ಛನೀರು ನಿಲ್ಲಬಹುದೋ ಅಲ್ಲೆಲ್ಲಾ ಈ ಸೊಳ್ಳೆಗಳು ಹೇರಳವಾಗಿ ಉತ್ಪತ್ತಿಯಾಗುತ್ತವೆ. ಎಲ್ಲಾ ನೀರಿನ ತೊಟ್ಟಿ, ಡ್ರಂ, ಬ್ಯಾರಲ್, ಏರ್ ಕೂಲರ್ ಇತ್ಯಾದಿಗಳನ್ನು ವಾರಕ್ಕೊಮ್ಮೆ ಖಾಲಿ ಮಾಡಿ ಸ್ವಚ್ಛಪಡಿಸಿ ಮತ್ತೆ ಭರ್ತಿ ಮಾಡಿಕೊಳ್ಳಬೇಕು ಹಾಗೂ ಮುಚ್ಚಳದಿಂದ ಮುಚ್ಚಬೇಕು. ಬಯಲಿನಲ್ಲಿರುವ ತ್ಯಾಜ್ಯ ವಸ್ತುಗಳಾದ ಒಡೆದ ಬಾಟಲಿ ಮುಂತಾದವುಗಳಲ್ಲಿ ಮಳೆ ನೀರು ಸಂಗ್ರಹವಾಗದಂತೆ ಎಚ್ಚರವಹಿಸಬೇಕು ಅಥವಾ ಇವುಗಳನ್ನು ಸೂಕ್ತ ವಿಲೇವಾರಿ ಮಾಡುವುದು ಅತ್ಯಗತ್ಯ. ಆರೋಗ್ಯ ಇಲಾಖೆಯಿಂದ ಹಮ್ಮಿಕೊಂಡ ಸೊಳ್ಳೆ ನಿಯಂತ್ರಣ ಕ್ರಮಗಳಿಗೆ ಸಹಕಾರ ನೀಡಬೇಕು. ಸ್ವಯಂ ರಕ್ಷಣಾ ವಿಧಾನಗಳಾದ ಸೊಳ್ಳೆ ನಿರೋಧಕಗಳನ್ನು ಹಾಗೂ ಸೊಳ್ಳೆ ಪರದೆಯನ್ನು ಬಳಸುವುದು ಹಾಗೂ ಹಗಲಿನಲ್ಲಿ ಸೊಳ್ಳೆಗಳ ಕಚ್ಚುವಿಕೆಯಿಂದ ದೂರವಿರಬೇಕು.
ಸೊಳ್ಳೆ ಉತ್ಪತ್ತಿ ತಾಣಗಳು:
ಒಡೆದ ಟೈರ್, ತೆಂಗಿನ ಚಿಪ್ಪು, ಸಿಮೆಂಟ್ ತೊಟ್ಟಿ, ತೆರೆದ ಪ್ಲಾಸ್ಟಿಕ್ ತೊಟ್ಟಿ, ಬಕೆಟ್, ನೀರಿನ ತೊಟ್ಟಿ, ಏರ್ ಕೂಲರ್, ಹೂವಿನ ಕುಂಡಗಳ ತಟ್ಟೆ, ಇತ್ಯಾದಿ. ಡೆಂಗೀ ಮತ್ತು ಚಿಕೂನ್ಗುನ್ಯ ರೋಗಗಳಿಗೆ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ದೊರೆಯುತ್ತದೆ. ಹೆಚ್ಚಿನ ಮಾಹಿತಿಗೆ ಸ್ಥಳೀಯ ಆರೋಗ್ಯಾಧಿಕಾರಿ ಅಥವಾ ಸಾರ್ವಜನಿಕ ಆಸ್ಪತ್ರೆಯನ್ನು ಸಂಪರ್ಕಿಸಬೇಕೆಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
