ಕೊರಟಗೆರೆ : ಜಮೀನಿನಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದ ಪರಿಣಾಮ ಐದು ಕುರಿ ಹಾಗೂ ಒಂದು ಮೇಕೆ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಕೊರಟಗೆರೆ ತಾಲೂಕಿನ ವಡ್ಡಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವರವಲಯ ಕೆರೆ ಸಮೀಪ ನಡೆದಿದೆ.
ಘಟನೆಯಿಂದ ₹2 ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದ್ದು, ಜೀವನಾಧಾರವಾಗಿದ್ದ ಜಾನುವಾರುಗಳನ್ನು ಕಳೆದುಕೊಂಡ ರೈತ ಮಹಿಳೆ ಕಮಲಮ್ಮ ಕುಟುಂಬ ಕಂಗಾಲಾಗಿದೆ.
ವಡ್ಡಗೆರೆ ತಾಂಡದ ರಾಜಣ್ಣ ಮತ್ತು ಕಮಲಮ್ಮ ದಂಪತಿಗೆ ಸೇರಿದ ಕುರಿ-ಮೇಕೆಗಳನ್ನು ಜಮೀನಿನಲ್ಲಿ ಮೇಯಿಸುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಕೆರೆಯ ಪಕ್ಕದ ಜಮೀನಿನ ವಿದ್ಯುತ್ ಕಂಬದಲ್ಲಿದ್ದ ಪಿಂಗಾಣಿ ಇನ್ಸುಲೇಟರ್ ತುಂಡಾದ ಪರಿಣಾಮ ವಿದ್ಯುತ್ ತಂತಿ ನೆಲಕ್ಕೆ ಬಿದ್ದಿತ್ತು ಎನ್ನಲಾಗಿದೆ. ಇದನ್ನು ಗಮನಿಸದೆ ಸಂಚರಿಸಿದ ಕುರಿ-ಮೇಕೆಗಳು ವಿದ್ಯುತ್ ಸ್ಪರ್ಶಕ್ಕೆ ಒಳಗಾಗಿ ಸ್ಥಳದಲ್ಲೇ ಮೃತಪಟ್ಟಿವೆ ಎಂದು ತಿಳಿದು ಬಂದಿದೆ.
ಕಣ್ಣೆದುರೇ ತಮ್ಮ ಜೀವನಾಧಾರವಾಗಿದ್ದ ಜಾನುವಾರುಗಳು ಸಾವಿಗೀಡಾಗಿದ್ದನ್ನು ಕಂಡ ಕಮಲಮ್ಮ ದುಃಖದಲ್ಲಿ ಮುಳುಗಿದ್ದಾರೆ. ಇದೇ ವೇಳೆ ಅವರಿಗೂ ವಿದ್ಯುತ್ ಸ್ಪರ್ಶಿಸುವ ಅಪಾಯ ಎದುರಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆ ತಿಳಿಯುತ್ತಿದ್ದಂತೆ ಕೊರಟಗೆರೆ ಬೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಪ್ರತಿಕ್ರಿಯಿಸಿದ ಬೆಸ್ಕಾಂ ಅಧಿಕಾರಿ ಮಲ್ಲಣ್ಣ, ರೈತರ ಪಂಪ್ ಸೆಟ್ ಗಳಿಗೆ ವಿದ್ಯುತ್ ಪೂರೈಸುವ ಪ್ರೈಮರಿ ಲೈನ್ನ ಕಂಬದಲ್ಲಿದ್ದ ಪಿಂಗಾಣಿ ಇನ್ಸುಲೇಟರ್ ತುಂಡಾಗಿರುವುದರಿಂದ ಅವಘಡ ಸಂಭವಿಸಿದೆ. ಈ ಬಗ್ಗೆ ಮೇಲಧಿಕಾರಿಗಳೊಂದಿಗೆ ಚರ್ಚಿಸಿ, ನೊಂದ ಕುಟುಂಬಕ್ಕೆ ಸೂಕ್ತ ಪರಿಹಾರ ಕೊಡಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದ್ದಾರೆ.
ಕುರಿ-ಮೇಕೆ ಸಾಕಾಣಿಕೆಯನ್ನೇ ನಂಬಿಕೊಂಡು ಬದುಕುತ್ತಿದ್ದ ಬಡ ರೈತ ಕುಟುಂಬಕ್ಕೆ ಈ ಘಟನೆ ದೊಡ್ಡ ಆರ್ಥಿಕ ಹೊಡೆತ ನೀಡಿದೆ. ವಿದ್ಯುತ್ ತಂತಿಗಳ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಜಾನುವಾರುಗಳನ್ನು ಕಳೆದುಕೊಂಡ ಕುಟುಂಬಕ್ಕೆ ವಿಳಂಬವಿಲ್ಲದೆ ಸೂಕ್ತ ಪರಿಹಾರ ನೀಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
