ಬೆಳಗಾವಿ: ಕಬ್ಬಿಗೆ ಸೂಕ್ತ ಬೆಲೆ ನಿಗದಿಪಡಿಸುವ ಕುರಿತು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಆಯೋಜಿಸಲಾಗಿದ್ದ ರೈತ ಮುಖಂಡರ ಸಭೆಯು ತೀವ್ರ ಗಲಾಟೆ ಮತ್ತು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿ ರಣರಂಗವಾಗಿ ಮಾರ್ಪಟ್ಟಿದೆ. ರೈತ ಮುಖಂಡರಾದ ಕೋಡಿಹಳ್ಳಿ ಚಂದ್ರಶೇಖರ್ ಹಾಗೂ ಚೂನಪ್ಪ ಪೂಜಾರಿ ಅವರ ಬಣಗಳ ನಡುವೆ ನಡೆದ ಗಲಾಟೆಯನ್ನು ನಿಯಂತ್ರಿಸಲು ಪೊಲೀಸರು ತೀವ್ರ ಹರಸಾಹಸ ಪಡಬೇಕಾಯಿತು.
ಸಭೆಯ ಆರಂಭದಲ್ಲಿ ಕುಡಿಯುವ ನೀರು ಹಾಗೂ ಚಹಾ ವ್ಯವಸ್ಥೆ ಇಲ್ಲವೆಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ವೇಳೆ ಚೂನಪ್ಪ ಪೂಜಾರಿ ಎಲ್ಲರನ್ನೂ ಸಮಾಧಾನಪಡಿಸಿದ್ದರು. ಆದರೆ, ಭಾಷಣದ ಸಮಯದಲ್ಲಿ ಪ್ರತಿ ಟನ್ ಕಬ್ಬಿಗೆ ₹4,500 ಪಡೆದೇ ತೀರೋಣ ಎಂದು ಚೂನಪ್ಪ ಪೂಜಾರಿ ಹೇಳಿಕೆ ನೀಡಿದ್ದೇ ಗಲಾಟೆಗೆ ಪ್ರಮುಖ ಕಾರಣವಾಯಿತು.
ಈ ಹೇಳಿಕೆಯನ್ನು ಕೋಡಿಹಳ್ಳಿ ಚಂದ್ರಶೇಖರ್ ಬಣ ತೀವ್ರವಾಗಿ ವಿರೋಧಿಸಿತು. “ಹೊರಗಡೆ ಪ್ರತಿ ಟನ್ ಕಬ್ಬಿಗೆ ₹5,500 ನಿಗದಿ ಮಾಡಬೇಕೆಂದು ಹೇಳಿ, ಒಳಗಡೆ ₹4,500 ಕ್ಕೆ ಒಪ್ಪಿಕೊಳ್ಳುತ್ತಿದ್ದೀರಿ. ನೀವು ಸೂಟ್ಕೇಸ್ ಗಿರಾಕಿ” ಎಂದು ಕೋಡಿಹಳ್ಳಿ ಬಣದ ರೈತರು ಗಂಭೀರ ಆರೋಪ ಮಾಡಿದರು. ಇದರಿಂದ ಕೆರಳಿದ ಚೂನಪ್ಪ ಪೂಜಾರಿ ಬಣದವರು ಎದುರೇಟು ನೀಡಿದ್ದರಿಂದ ಎರಡೂ ಬಣಗಳ ನಡುವೆ ಪರಸ್ಪರ ಹೊಡೆದಾಟ ನಡೆಯಿತು.
ತಕ್ಷಣ ಮಧ್ಯಪ್ರವೇಶಿಸಿದ ಪೊಲೀಸರು, ಗಲಾಟೆಗೆ ಕಾರಣರಾದ ಇಬ್ಬರು ರೈತರನ್ನು ಸಭಾಂಗಣದಿಂದ ಹೊರಗೆ ಕರೆದೊಯ್ದು ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಇದಕ್ಕೂ ಮುನ್ನ, ರೈತರು ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದರು. ಹೆದ್ದಾರಿಯಲ್ಲಿ ಕುಳಿತಿದ್ದ 20ಕ್ಕೂ ಹೆಚ್ಚು ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
