ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (KPSC) ನಡೆಸಿದ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಹಗರಣದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಹಿರಿಯ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರ ವಿರುದ್ಧ ಅಭಿಯೋಜನೆಗೆ (ಪ್ರಾಸಿಕ್ಯೂಷನ್ ಗೆ) ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕೃತ ಅನುಮತಿ ನೀಡಿದ್ದಾರೆ.
ಕೆಪಿಎಸ್ ಸಿ ಮೂಲಕ ನಡೆದ ಪಶುವೈದ್ಯಾಧಿಕಾರಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಮೌಲ್ಯಮಾಪನ ಅಕ್ರಮ ಹಾಗೂ ಅಕ್ರಮ ಹಣಕಾಸು ವ್ಯವಹಾರ ನಡೆದಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದವು.
ಅರ್ಹ ಅಭ್ಯರ್ಥಿಗಳಿಗೆ ಉದ್ದೇಶಪೂರ್ವಕವಾಗಿ ಕಡಿಮೆ ಅಂಕ ನೀಡಿ, ಲಂಚ ನೀಡಿದ ಅಭ್ಯರ್ಥಿಗಳ ಉತ್ತರ ಪತ್ರಿಕೆಗಳನ್ನು ತಿದ್ದಿ ಅಂಕ ಹೆಚ್ಚಿಸಲಾಗಿದೆ ಎಂಬ ಅಂಶ ದೋಷಾರೋಪ ಪಟ್ಟಿಯಲ್ಲಿದೆ.
ಕೆಪಿಎಸ್ಸಿ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರು ಈ ಅಕ್ರಮಗಳಿಗೆ ಆಡಳಿತಾತ್ಮಕ ರಕ್ಷಣೆ ನೀಡಿ, ಪ್ರಕ್ರಿಯೆಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಪ್ರಕರಣದಲ್ಲಿ ಪರೀಕ್ಷಾ ವಿಭಾಗದ ಕೆಲ ವಿಷಯ ತಜ್ಞರು ಹಾಗೂ ಮೌಲ್ಯಮಾಪಕರು ಕೂಡ ಭಾಗಿಗಳಾಗಿದ್ದಾರೆ.
ತನಿಖಾ ಸಂಸ್ಥೆಗಳು ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳನ್ನು ಕಲೆಹಾಕಿದ್ದು, ನ್ಯಾಯಾಲಯದಲ್ಲಿ ಚಾರ್ಜ್ಶೀಟ್ (ದೋಷಾರೋಪ ಪಟ್ಟಿ) ಸಲ್ಲಿಸಲು ಮತ್ತು ಕಾನೂನು ಕ್ರಮ ಕೈಗೊಳ್ಳಲು ಸಕ್ಷಮ ಪ್ರಾಧಿಕಾರವಾದ ಸರ್ಕಾರದ ಅನುಮತಿ ಅಗತ್ಯವಾಗಿತ್ತು. ಇದೀಗ ಸಿಎಂ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದರಿಂದ ತನಿಖೆಗೆ ಹೊಸ ವೇಗ ಸಿಕ್ಕಂತಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
