ಕಮಲನಗರ (ಬೀದರ್): ತಾಲೂಕಿನ ಬಳತ (ಬಿ) ಗ್ರಾಮ ಪಂಚಾಯತನಲ್ಲಿ 2026–27ನೇ ಸಾಲಿನ ಸಾಮಾಜಿಕ ಪರಿಶೋಧನೆ, ನರೇಗಾ ಯೋಜನೆ ಹಾಗೂ 15 ನೇ ಹಣಕಾಸು ಮತ್ತು ರಾಜ್ಯ ಹಣಕಾಸು ಅನುದಾನ ಆಯೋಗದ ಸಾಮಾಜಿಕ ಲೆಕ್ಕ ಪರಿಶೋಧನೆಯ ಗ್ರಾಮ ಸಭೆಯನ್ನು ನಡೆಸಲಾಯಿತು. ಗ್ರಾಮದ ಹಿರಿಯ ನಾಗರಿಕರಾದ ಶರಣು ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ಈ ಸಭೆ ಜರುಗಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಾಮಾಜಿಕ ಪರಿಶೋಧನೆಯ ತಾಲೂಕು ಸಂಪನ್ಮೂಲ ವ್ಯಕ್ತಿ ಸೂರ್ಯಕಾಂತ ಎಕಲಾರ, ಗ್ರಾಮಸ್ಥರು ಉದ್ಯೋಗ ಅರಸಿ ನಗರಗಳಿಗೆ ಗುಳೆ ಹೋಗದೆ, ತಮ್ಮ ಸ್ವಗ್ರಾಮದಲ್ಲೇ ಇದ್ದು ಸಿಗುವ ಕೆಲಸಗಳನ್ನು ನಿರ್ವಹಿಸಿ ಆರ್ಥಿಕವಾಗಿ ಸಬಲರಾಗಬೇಕು. ಜಮೀನಿಗೆ ಸಂಬಂಧಿಸಿದ ಕಾಮಗಾರಿಗಳು, ಕೊಳವೆ ಬಾವಿ, ಗಿಡ ನೆಡುವುದು, ದನದ ಕೊಟ್ಟಿಗೆ ಮುಂತಾದ ವೈಯಕ್ತಿಕ ಕಾಮಗಾರಿಗಳ ಜತೆಗೆ ಸಮುದಾಯ ಕಾಮಗಾರಿಗಳಲ್ಲಿಯೂ ಕೂಲಿಕಾರರು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಉದ್ಯೋಗ ಸೌಲಭ್ಯ ಪಡೆಯಲು ಅಗತ್ಯ ದಾಖಲೆಗಳನ್ನು ಗ್ರಾಮ ಪಂಚಾಯತಗೆ ಸಲ್ಲಿಸಿ ತಕ್ಷಣವೇ ಜಾಬ್ ಕಾರ್ಡ್ ಗಳನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಜುಲೈ 1ರಿಂದ ಜಾರಿಗೆ ಬಂದಿರುವ ‘ವಿಕಸಿತ ಭಾರತ–ಗ್ಯಾರಂಟಿ ಫಾರ್ ರೋಜಗಾರ ಅಂಡ್ ಆಜೀವಿಕ ಮಿಷನ್–ಗ್ರಾಮೀಣ’ ಯೋಜನೆಯಡಿ ದೊರೆಯುವ ವಿವಿಧ ಸೌಲಭ್ಯಗಳ ಕುರಿತು ಮಾಹಿತಿ ನೀಡಲಾಯಿತು.
ಪ್ರತಿ ಕುಟುಂಬಕ್ಕೆ ವರ್ಷಕ್ಕೆ 125 ದಿನಗಳ ಕೂಲಿ ಕೆಲಸ ನೀಡಲಾಗುತ್ತದೆ. ಮಹಿಳೆಯರು ಮತ್ತು ಪುರುಷರಿಗೆ ಯಾವುದೇ ತಾರತಮ್ಯವಿಲ್ಲದೆ ದಿನಕ್ಕೆ ₹382 ಸಮಾನ ಕೂಲಿ ನಿಗದಿಪಡಿಸಲಾಗಿದೆ.
ಸಭೆಯಲ್ಲಿ 2026–27ನೇ ಸಾಲಿನ ನರೇಗಾ ಹಾಗೂ ಹಣಕಾಸು ಆಯೋಗದ ಅನುದಾನಗಳ ಸಾಮಾಜಿಕ ಲೆಕ್ಕ ಪರಿಶೋಧನಾ ವರದಿಯನ್ನು ಮಂಡಿಸಲಾಯಿತು. ವರದಿಯ ಕುರಿತು ಗ್ರಾಮಸ್ಥರು ಮುಕ್ತವಾಗಿ ಚರ್ಚೆ ನಡೆಸಿದರು.
ಕಾರ್ಯಕ್ರಮವು ನಾಡಗೀತೆಯೊಂದಿಗೆ ಆರಂಭವಾಯಿತು. ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಶಿವಕುಮಾರ್ ಪಾಟೀಲ್ ಅವರು ಆಗಮಿಸಿದವರನ್ನು ಸ್ವಾಗತಿಸಿ, ಕೊನೆಯಲ್ಲಿ ರಾಷ್ಟ್ರಗೀತೆಯೊಂದಿಗೆ ವಂದಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಮಾಜಿ ಸದಸ್ಯರು, ಬಿಲ್ ಕಲೆಕ್ಟರ್, ಗ್ರಾ.ಪಂ. ಸಿಬ್ಬಂದಿ, ಕೂಲಿಕಾರರು, ಗ್ರಾಮಸ್ಥರು ಹಾಗೂ ಸಾಮಾಜಿಕ ಪರಿಶೋಧನೆ ತಂಡದ ಸದಸ್ಯರಾದ ಶೇಷ ರಾವ್ ವಿಠಲ್, ಸುನಿಲ್ ವಿಠಲ್, ಸಂಗೀತ, ಪ್ರಶಾಂತ್ ಉಪಸ್ಥಿತರಿದ್ದರು.
ವರದಿ: ಅರವಿಂದ ಮಲ್ಲೀಗೆ, ಬೀದರ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
