ಮೈಸೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿರುವ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರಿಗೆ ಬ್ಲ್ಯಾಕ್ಮೇಲ್ ಮಾಡುವ ಯತ್ನ ನಡೆದಿದೆ ಹಾಗೂ ಇದರಲ್ಲಿ ನಮ್ಮ ಪಕ್ಷದವರೇ ಭಾಗಿಯಾಗಿದ್ದಾರೆ ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪತ್ರಕರ್ತ ಸೇರಿದಂತೆ ಇಬ್ಬರನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗಿದ್ದು, ಈ ಕುರಿತು ತಮ್ಮ ತಂದೆಯವರಿಗೂ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು.
“ಸ್ಟೀಂಗ್ ವಿಡಿಯೋದಲ್ಲಿ ನಮ್ಮ ಪಕ್ಷದವರೇ ಭಾಗಿಯಾಗಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ವಿಡಿಯೋದಲ್ಲಿ ಕಾಂಗ್ರೆಸ್ ಪಕ್ಷದ ಮಹಿಳೆಯೊಬ್ಬರು ಕಾಣಿಸಿಕೊಂಡಿದ್ದು, ಅವರು ಪುತ್ತೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು ಎಂಬ ಮಾಹಿತಿಯಿದೆ” ಎಂದರು.
40 ವರ್ಷಗಳ ಕಾಲ ಯಾವುದೇ ಕಳಂಕವಿಲ್ಲದೆ ರಾಜಕಾರಣ ಮಾಡಿಕೊಂಡು ಬಂದಿರುವ ಸಿದ್ದರಾಮಯ್ಯ ಅವರ ಹೆಸರನ್ನು ಕೆಡಿಸಲು, ಅವರ ಘನತೆ ಹಾಗೂ ಲೆಗಸಿಗೆ ಧಕ್ಕೆ ತಂದು ಟಿಕೆಟ್ಗಾಗಿ ಬ್ಲ್ಯಾಕ್ಮೇಲ್ ಮಾಡಲು ಈ ಸಂಚು ರೂಪಿಸಲಾಗಿದೆ ಎಂದು ಆರೋಪಿಸಿದರು.
ಈ ಸ್ಟಿಂಗ್ ವಿಡಿಯೋದಲ್ಲಿ ಒಬ್ಬ ಮಾಧ್ಯಮ ಮುಖ್ಯಸ್ಥರೂ ಸಹ ಕಾಣಿಸಿಕೊಂಡಿರುವುದು ಸ್ಪಷ್ಟವಾಗಿದೆ. ಆದರೆ, ಒಬ್ಬ ವ್ಯಕ್ತಿ ಮಾಡಿದ ತಪ್ಪಿಗೆ ಇಡೀ ಕಾಂಗ್ರೆಸ್ ಪಕ್ಷವನ್ನು ದೂಷಿಸಲು ಸಾಧ್ಯವಿಲ್ಲ ಎಂದು ಯತೀಂದ್ರ ಸ್ಪಷ್ಟಪಡಿಸಿದರು.
ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಮುಲಾಜಿಲ್ಲದೆ ಬಂಧಿಸುವಂತೆ ತಂದೆಯವರೇ ಸೂಚಿಸಿದ್ದಾರೆ. ಪ್ರಸ್ತುತ ನಡೆಯುತ್ತಿರುವ ತನಿಖೆಯ ಮೇಲೆ ನಮಗೆ ನಂಬಿಕೆ ಇದೆ. ಒಂದು ವೇಳೆ ತನಿಖೆ ಸರಿಯಾದ ಹಾದಿಯಲ್ಲಿ ಸಾಗದಿದ್ದರೆ ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸುತ್ತೇವೆ ಎಂದು ಹೇಳಿದರು.
ತಮ್ಮ ತಂದೆಯವರು ಈ ಘಟನೆಯಿಂದ ತೀವ್ರ ಬೇಸರಗೊಂಡಿದ್ದಾರೆ ಎಂದು ತಿಳಿಸಿದ ಅವರು, “ಸತ್ಯ ನಮ್ಮ ಕಡೆಯೇ ಇದೆ. ಈ ಷಡ್ಯಂತ್ರದ ಹಿಂದೆ ಯಾರಿದ್ದಾರೆ, ಸ್ವಪಕ್ಷದವರೋ ಅಥವಾ ಬೇರೆಯವರ ಕೈವಾಡವಿದೆಯೇ ಎಂಬುದು ತನಿಖೆಯಿಂದ ಹೊರಬರಲಿದೆ” ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
