ಹೊಸದಾಗಿ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಸಿದ್ಧತೆ ನಡೆಸುತ್ತಿದ್ದೀರಾ? ಅಥವಾ ಈಗಾಗಲೇ ಇರುವ ಲೈಸೆನ್ಸ್ನಲ್ಲಿ ಹೆಸರು, ವಿಳಾಸ ಹಾಗೂ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಬೇಕಿದೆಯೇ? ಹಾಗಿದ್ದರೆ ನಿಮಗೆ ಮಹತ್ವದ ಸುದ್ದಿ ಇಲ್ಲಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಡ್ರೈವಿಂಗ್ ಲೈಸೆನ್ಸ್ ಗೆ ಸಂಬಂಧಿಸಿದ ನಿಯಮಗಳಲ್ಲಿ ಹಲವು ಬದಲಾವಣೆಗಳನ್ನು ತರಲು ಪ್ರಸ್ತಾವನೆ ಮುಂದಿಟ್ಟಿದೆ.
ಹೊಸ ಪ್ರಸ್ತಾವನೆಯ ಪ್ರಕಾರ, ಲರ್ನರ್ಸ್ ಲೈಸೆನ್ಸ್ ಪಡೆಯಲು ನಡೆಸುವ ಸುರಕ್ಷಿತ ಚಾಲನಾ ಪಾಠದ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಅಗತ್ಯವಿರುವ ಕನಿಷ್ಠ ಅಂಕಗಳನ್ನು ಶೇ. 60ರಿಂದ ಶೇ. 75ಕ್ಕೆ ಹೆಚ್ಚಿಸಲು ಉದ್ದೇಶಿಸಲಾಗಿದೆ. ಜೊತೆಗೆ, ಆಧಾರ್ ದೃಢೀಕರಣದ ಮೂಲಕ ಆನ್ಲೈನ್ನಲ್ಲಿ ಪಡೆಯುವ ಕೆಲವು ಸೇವೆಗಳಿಗೆ ಶುಲ್ಕ ವಿನಾಯಿತಿ ನೀಡುವ ಪ್ರಸ್ತಾವನೆಯೂ ಇದೆ. ಆದರೆ ಈ ಬದಲಾವಣೆಗಳು ಇನ್ನೂ ಕರಡು ಅಧಿಸೂಚನೆಯ ಹಂತದಲ್ಲಿದ್ದು, ಅಂತಿಮ ಅಧಿಸೂಚನೆ ಪ್ರಕಟವಾದ ಬಳಿಕವೇ ಜಾರಿಗೆ ಬರಲಿವೆ.
ಪ್ರಸ್ತುತ ನಿಯಮಗಳ ಪ್ರಕಾರ, ಲರ್ನರ್ಸ್ ಲೈಸೆನ್ಸ್ಗಾಗಿ ಆನ್ಲೈನ್ನಲ್ಲಿ ನಡೆಸುವ ಸುರಕ್ಷಿತ ಚಾಲನಾ ಪಾಠದ ಪರೀಕ್ಷೆಯಲ್ಲಿ ಕನಿಷ್ಠ ಶೇ. 60ರಷ್ಟು ಅಂಕ ಗಳಿಸಿದರೆ ಉತ್ತೀರ್ಣರಾಗಬಹುದು. ಈ ಮಿತಿಯನ್ನು ಶೇ. 75ಕ್ಕೆ ಹೆಚ್ಚಿಸಲು ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ. ಅಂದರೆ, ಪ್ರಸ್ತಾವನೆ ಜಾರಿಗೆ ಬಂದರೆ ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಬೇಕಾಗುತ್ತದೆ. ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಕುರಿತು ಚಾಲಕರ ಜ್ಞಾನವನ್ನು ಹೆಚ್ಚಿಸುವುದು ಈ ಬದಲಾವಣೆಯ ಉದ್ದೇಶವಾಗಿದೆ.
ಹೊಸ ಪ್ರಸ್ತಾವನೆಯ ಪ್ರಕಾರ, ಲರ್ನರ್ಸ್ ಲೈಸೆನ್ಸ್ ಪಡೆಯುವ ಅಭ್ಯರ್ಥಿಗಳು ಕನಿಷ್ಠ 30 ನಿಮಿಷಗಳ ಸುರಕ್ಷಿತ ಚಾಲನಾ ಪಾಠವನ್ನು ಪೂರ್ಣಗೊಳಿಸಬೇಕಾಗುತ್ತದೆ. ಈ ಪಾಠವನ್ನು ಪೂರ್ಣಗೊಳಿಸಲು ಅರ್ಜಿ ಸಲ್ಲಿಸಿದ ನಂತರ ನೀಡುವ ಕಾಲಾವಕಾಶವನ್ನು ಏಳು ದಿನಗಳಿಂದ 15 ದಿನಗಳಿಗೆ ವಿಸ್ತರಿಸುವುದಕ್ಕೂ ಪ್ರಸ್ತಾಪಿಸಲಾಗಿದೆ.ಈ ಪಾಠದಲ್ಲಿ ರಸ್ತೆ ಚಿಹ್ನೆಗಳು, ಸಂಚಾರ ಸಂಕೇತಗಳು, ರಸ್ತೆ ನಿಯಮಗಳು, ಅಪಘಾತ ಸಂಭವಿಸಿದಾಗ ಚಾಲಕನ ಜವಾಬ್ದಾರಿ ಹಾಗೂ ವಾಹನ ಚಲಾಯಿಸುವಾಗ ಕಡ್ಡಾಯವಾಗಿ ಹೊಂದಿರಬೇಕಾದ ದಾಖಲೆಗಳ ಕುರಿತು ಮಾಹಿತಿ ನೀಡಲಾಗುತ್ತದೆ.
ಡ್ರೈವಿಂಗ್ ಲೈಸೆನ್ಸ್ ನಲ್ಲಿನ ಹೆಸರು ಅಥವಾ ಇತರ ವೈಯಕ್ತಿಕ ವಿವರಗಳನ್ನು ಬದಲಾಯಿಸಲು ಪ್ರಸ್ತುತ ವಿಧಿಸಲಾಗುವ ₹200 ಶುಲ್ಕವನ್ನು ರದ್ದುಪಡಿಸಲು ಸರ್ಕಾರ ಪ್ರಸ್ತಾಪಿಸಿದೆ. ಹಾಗೆಯೇ, ಲೈಸೆನ್ಸ್ನಲ್ಲಿನ ವಿಳಾಸ ಬದಲಾವಣೆ ಹಾಗೂ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ ನವೀಕರಣಕ್ಕೂ ಶುಲ್ಕ ವಿಧಿಸದಿರುವ ಪ್ರಸ್ತಾವನೆ ಇದೆ.ಆಧಾರ್ ದೃಢೀಕರಣದ ಮೂಲಕ ಆನ್ಲೈನ್ನಲ್ಲಿ ಪಡೆಯುವ ಕೆಲವು ಲೈಸೆನ್ಸ್ ಸೇವೆಗಳಿಗೂ ಶುಲ್ಕ ವಿನಾಯಿತಿ ನೀಡಲು ಉದ್ದೇಶಿಸಲಾಗಿದೆ. ಈ ಪ್ರಸ್ತಾವನೆಗಳು ಅಂತಿಮಗೊಂಡರೆ, ಲೈಸೆನ್ಸ್ನ ವಿವರಗಳನ್ನು ನವೀಕರಿಸುವವರಿಗೆ ಆರ್ಥಿಕ ಹೊರೆ ಕಡಿಮೆಯಾಗಲಿದೆ.
ಲೈಸೆನ್ಸ್ ನಲ್ಲಿನ ವೈಯಕ್ತಿಕ ವಿವರಗಳನ್ನು ಬದಲಾಯಿಸಲು ಸಲ್ಲಿಸುವ ಅರ್ಜಿಗಳನ್ನು 15 ದಿನಗಳೊಳಗೆ ಅಂಗೀಕರಿಸಬೇಕು ಅಥವಾ ತಿರಸ್ಕರಿಸಬೇಕು ಎಂದು ಪ್ರಸ್ತಾವಿಸಲಾಗಿದೆ. ಅರ್ಜಿಯನ್ನು ತಿರಸ್ಕರಿಸಿದರೆ ಅದಕ್ಕೆ ಕಾರಣಗಳನ್ನು ದಾಖಲಿಸಿ ಅರ್ಜಿದಾರರಿಗೆ ತಿಳಿಸಬೇಕು.ವಿಳಾಸ ಬದಲಾವಣೆಗೆ ಸಲ್ಲಿಸಿದ ಅರ್ಜಿಯನ್ನು 30 ದಿನಗಳೊಳಗೆ ಅಂಗೀಕರಿಸದಿದ್ದರೆ ಅಥವಾ ತಿರಸ್ಕರಿಸದಿದ್ದರೆ, ಅದನ್ನು ಅಂಗೀಕರಿಸಲಾಗಿದೆ ಎಂದು ಪರಿಗಣಿಸುವ ವ್ಯವಸ್ಥೆಯನ್ನೂ ಪ್ರಸ್ತಾಪಿಸಲಾಗಿದೆ.
ಡ್ರೈವಿಂಗ್ ಲೈಸೆನ್ಸ್ ಪಡೆಯಲು ಅಥವಾ ವಿವರಗಳನ್ನು ಬದಲಾಯಿಸಲು ಸಲ್ಲಿಸಬಹುದಾದ ದಾಖಲೆಗಳ ಪಟ್ಟಿಯಲ್ಲೂ ಬದಲಾವಣೆ ತರಲು ಪ್ರಸ್ತಾವಿಸಲಾಗಿದೆ. ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಾಸ್ಪೋರ್ಟ್, ಇ-ರೇಷನ್ ಕಾರ್ಡ್ ಹಾಗೂ ಕೆಲವು ಸರ್ಕಾರಿ ಗುರುತಿನ ಚೀಟಿಗಳನ್ನು ವಿಳಾಸದ ಪುರಾವೆಯಾಗಿ ಪರಿಗಣಿಸಲು ಉದ್ದೇಶಿಸಲಾಗಿದೆ.
ಇದಲ್ಲದೆ, ಅರ್ಜಿ ಸಲ್ಲಿಸುವ ದಿನಾಂಕದಿಂದ ಮೂರು ತಿಂಗಳಿಗಿಂತ ಹಳೆಯದಾಗಿರದ ವಿದ್ಯುತ್ ಬಿಲ್ ಮತ್ತು ಮನೆಯ ಗ್ಯಾಸ್ ಬಿಲ್ ಗಳನ್ನು ವಿಳಾಸದ ಪುರಾವೆಯಾಗಿ ಸ್ವೀಕರಿಸುವ ಪ್ರಸ್ತಾವನೆಯೂ ಇದೆ. ವಯಸ್ಸಿನ ಪುರಾವೆಗೆ ಜನನ ಪ್ರಮಾಣಪತ್ರ, ಪಾಸ್ ಪೋರ್ಟ್ ಹಾಗೂ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳ ಅಂಕಪಟ್ಟಿಗಳನ್ನು ಪರಿಗಣಿಸುವುದಕ್ಕೂ ಅವಕಾಶ ಕಲ್ಪಿಸಲಾಗಿದೆ.
ಡ್ರೈವಿಂಗ್ ಲೈಸೆನ್ಸ್ ಪಡೆಯುವ ಪ್ರಕ್ರಿಯೆಯನ್ನು ಹೆಚ್ಚು ಸುರಕ್ಷಿತಗೊಳಿಸುವುದು, ಆನ್ ಲೈನ್ ಸೇವೆಗಳನ್ನು ಸರಳಗೊಳಿಸುವುದು ಮತ್ತು ಅರ್ಜಿಗಳ ವಿಲೇವಾರಿಯಲ್ಲಿ ವಿಳಂಬ ತಪ್ಪಿಸುವುದು ಈ ಪ್ರಸ್ತಾವನೆಗಳ ಪ್ರಮುಖ ಉದ್ದೇಶವಾಗಿದೆ.ಆದರೆ, ಈ ಬದಲಾವಣೆಗಳು ಸದ್ಯಕ್ಕೆ ಪ್ರಸ್ತಾವಿತ ನಿಯಮಗಳಾಗಿವೆ. ಹೀಗಾಗಿ ಹೊಸ ನಿಯಮಗಳು ಈಗಾಗಲೇ ಜಾರಿಯಾಗಿವೆ ಎಂದು ಭಾವಿಸಬಾರದು. ಕೇಂದ್ರ ಸರ್ಕಾರದ ಅಂತಿಮ ಅಧಿಸೂಚನೆ ಪ್ರಕಟವಾದ ನಂತರವೇ ಅವುಗಳ ಜಾರಿಗೆ ಸಂಬಂಧಿಸಿದ ಸ್ಪಷ್ಟತೆ ದೊರೆಯಲಿದೆ.
ಅಧಿಕೃತ ಮಾಹಿತಿ: https://morth.nic.in/
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
