ತಿಪಟೂರು: ಕೇಂದ್ರದ ಎನ್ ಡಿಎ ಸರ್ಕಾರ ಹಾಗೂ ಚುನಾವಣಾ ಆಯೋಗದ ನೀತಿಗಳನ್ನು ವಿರೋಧಿಸಿ ನವೆಂಬರ್ 1 ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ‘ಮತ ಬಚಾವೋ ದೇಶ ಬಚಾವೋ’ (Vote Bachao Desh Bachao) ಅಭಿಯಾನಕ್ಕೆ ಚಾಲನೆ ನೀಡಲಾಗುವುದು ಎಂದು ಕಾಂಗ್ರೆಸ್ ಪಕ್ಷದ ವಕ್ತಾರ ಬಾಲಕೃಷ್ಣ ಸ್ವಾಮಿ ಯಾದವ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ ನಿರ್ದೇಶನದಂತೆ ಎಐಸಿಸಿ, ಕೆಪಿಸಿಸಿ ಹಾಗೂ ಮೈತ್ರಿಕೂಟದ ಸಹಭಾಗಿತ್ವದಲ್ಲಿ ನವೆಂಬರ್ 1 ರಿಂದ 26 ರವರೆಗೆ ದೇಶಾದ್ಯಂತ ಈ ಅಭಿಯಾನ ನಡೆಯಲಿದೆ. ಕೇಂದ್ರ ಮಟ್ಟದಿಂದ ಹಿಡಿದು ಜಿಲ್ಲೆ, ತಾಲೂಕು, ಗ್ರಾಮ ಹಾಗೂ ಬೂತ್ ಮಟ್ಟದವರೆಗೆ ಕಾರ್ಯಕ್ರಮಗಳನ್ನು ವಿಸ್ತರಿಸಿ, ಸಾರ್ವಜನಿಕರಲ್ಲಿ ಮತದಾನದ ಮಹತ್ವ ಮತ್ತು ಮತದಾರರ ಹಕ್ಕುಗಳ ಕುರಿತು ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.
ಸ್ವತಂತ್ರ ಸಂಸ್ಥೆಯಾಗಿ ಕಾರ್ಯನಿರ್ವಹಿಸಬೇಕಾದ ಚುನಾವಣಾ ಆಯೋಗವನ್ನು ಎನ್ ಡಿಎ ಸರ್ಕಾರವು ತನ್ನ ಹಿಡಿತದಲ್ಲಿ ಇಟ್ಟುಕೊಂಡು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ ಎಂದು ಅವರು ಕಿಡಿಕಾರಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕೆ. ಷಡಕ್ಷರಿ ಅವರು, “ಅರ್ಹ ಮತದಾರರನ್ನು ಅನರ್ಹಗೊಳಿಸುವ ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗ ತೊಡಗಿದೆ. ದೇಶದ ಪ್ರತಿಯೊಬ್ಬ ಅರ್ಹ ನಾಗರಿಕನಿಗೂ ಮತದಾನದ ಹಕ್ಕು ಸಿಗಬೇಕು ಎಂಬ ಉದ್ದೇಶದಿಂದ ಈ ವ್ಯಾಪಕ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ” ಎಂದು ಆರೋಪಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಡೆನೂರು ಕಾಂತರಾಜ್, ನಗರ ಕಾಂಗ್ರೆಸ್ ಅಧ್ಯಕ್ಷ ತರಕಾರಿ ಪ್ರಕಾಶ್ ಸೇರಿದಂತೆ ಹಲವು ಪ್ರಮುಖ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.
ವರದಿ: ಆನಂದ್, ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
