ತಿಪಟೂರು: ತಿಪಟೂರು ರೋಟರಿ ಕ್ಲಬ್ ಹಾಗೂ ಎನ್.ಆರ್.ಪಿ.ಯು. ಅಕಾಡೆಮಿ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪೋಲಿಯೋ ದಿನದ ಅಂಗವಾಗಿ “ಪೋಲಿಯೋ ಮುಕ್ತ ಭಾರತ – ರೋಟರಿಯ ಸಂಕಲ್ಪ, ಎರಡು ಹನಿ ಪೋಲಿಯೋ ಅಂತ್ಯ” ಎಂಬ ಧ್ಯೇಯ ವಾಕ್ಯದೊಂದಿಗೆ ಜಾಗೃತಿ ಕಾರ್ಯಕ್ರಮವನ್ನು ಎನ್.ಆರ್.ಪಿ.ಯು. ಕಾಲೇಜಿನ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಗಿಡಕ್ಕೆ ನೀರುಣಿಸುವ ಮೂಲಕ ಸಂಪ್ರದಾಯಬದ್ಧವಾಗಿ ಉದ್ಘಾಟಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ತಿಪಟೂರು ರೋಟರಿ ಕ್ಲಬ್ ಅಧ್ಯಕ್ಷ ಪ್ರಕಾಶ್ ಕೆ. ಅವರು, “ರೋಟರಿ ಇಂಟರ್ ನ್ಯಾಷನಲ್ ಸಂಸ್ಥೆಯು ಜಾಗತಿಕ ಮಟ್ಟದಲ್ಲಿ ಪೋಲಿಯೋ ನಿರ್ಮೂಲನೆಗಾಗಿ ಮಹತ್ವದ ಕೊಡುಗೆ ನೀಡಿದೆ. 1979ರಲ್ಲಿ ಫಿಲಿಪೈನ್ಸ್ ನಲ್ಲಿ ತನ್ನ ಮೊದಲ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಪ್ರಾರಂಭಿಸಿದ ರೋಟರಿ, 1985ರಲ್ಲಿ ‘ಪೋಲಿಯೋ ಪ್ಲಸ್’ ಕಾರ್ಯಕ್ರಮವನ್ನು ಆರಂಭಿಸಿತು. ನಂತರ 1988ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ (WHO), ಯುನಿಸೆಫ್ (UNICEF) ಹಾಗೂ ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳೊಂದಿಗೆ (CDC) ಸೇರಿ ‘ಜಾಗತಿಕ ಪೋಲಿಯೋ ನಿರ್ಮೂಲನಾ ಉಪಕ್ರಮ’ (GPEI) ಸ್ಥಾಪಕ ಪಾಲುದಾರವಾಯಿತು” ಎಂದು ವಿವರಿಸಿದರು.
ಮುಂದುವರಿದು ಮಾತನಾಡಿದ ಅವರು, ವಿಶ್ವದ ಮಕ್ಕಳನ್ನು ಪೋಲಿಯೋ ಮಹಾಮಾರಿಯಿಂದ ರಕ್ಷಿಸುವ ನಿಟ್ಟಿನಲ್ಲಿ ರೋಟರಿ ಸಂಸ್ಥೆಯು ನಿರಂತರವಾಗಿ ಶ್ರಮಿಸುತ್ತಿದ್ದು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಸುಮಾರು 70ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಎನ್.ಆರ್.ಪಿ.ಯು. ಅಕಾಡೆಮಿಯ ವ್ಯವಸ್ಥಾಪಕ ನಿರ್ದೇಶಕ ರಮೇಶ್ ಅವರು, “ಇಲ್ಲಿ ಸೇರಿರುವ ಎಲ್ಲಾ ವಿದ್ಯಾರ್ಥಿಗಳು ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದು, ಪೋಲಿಯೋ ನಿರ್ಮೂಲನೆಯ ಮಹತ್ವವನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ಪೋಲಿಯೋವನ್ನು ಜಗತ್ತಿನಿಂದ ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಉದ್ದೇಶದಿಂದ ರೋಟರಿ ಸಂಸ್ಥೆಯು ಕೈಗೊಂಡಿರುವ ಶ್ರಮ ಶ್ಲಾಘನೀಯ. ಇಂತಹ ಜಾಗೃತಿ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಕಳಕಳಿ ಮತ್ತು ಆರೋಗ್ಯದ ಬಗ್ಗೆ ಅರಿವು ಮೂಡಿಸುತ್ತವೆ” ಎಂದರು.
ಈ ಜಾಗೃತಿ ಕಾರ್ಯಕ್ರಮದಲ್ಲಿ ತಿಪಟೂರು ರೋಟರಿ ಕ್ಲಬ್ ಅಧ್ಯಕ್ಷ ಪ್ರಕಾಶ್ ಕೆ., ಪಬ್ಲಿಕ್ ಇಮೇಜ್ ನಿರ್ದೇಶಕ ರೇಣುಕಮೂರ್ತಿ, ನಿರ್ದೇಶಕ ಪವನ್ ಕುಮಾರ್, ಎನ್.ಆರ್.ಪಿ.ಯು. ಅಕಾಡೆಮಿಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ರೋಟರಿ ಸದಸ್ಯ ರಮೇಶ್, 70ಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ವರದಿ: ಆನಂದ್, ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
