ಮಧುಗಿರಿ: ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಕರೊಂದಿಗೆ ಸೌಜನ್ಯದಿಂದ ನಡೆದುಕೊಳ್ಳಬೇಕಾದ ಸರ್ಕಾರಿ ನೌಕರನೊಬ್ಬ, ಕರ್ತವ್ಯದ ವೇಳೆ ಪ್ರಯಾಣಿಕರೊಬ್ಬರೊಂದಿಗೆ ಅಸಭ್ಯವಾಗಿ ವರ್ತಿಸಿ, ನಿಂದಿಸಿರುವ ಘಟನೆ ಬೆಳಕಿಗೆ ಬಂದಿದೆ. ಕುಣಿಗಲ್ನಿಂದ ಮೈಸೂರಿಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ (KSRTC) ಬಸ್ನ ನಿರ್ವಾಹಕನ ವಿರುದ್ಧ ಮಧುಗಿರಿ ಡಿಪೋ ಮ್ಯಾನೇಜರ್ ಗೆ ಅಧಿಕೃತವಾಗಿ ದೂರು ದಾಖಲಾಗಿದೆ.
ದಿನಾಂಕ 23 ಅಕ್ಟೋಬರ್ 2026ರಂದು ಸಂಜೆ ಸುಮಾರು 4:57ರ ವೇಳೆಗೆ, ಕುಣಿಗಲ್ ನಿಂದ ಮೈಸೂರಿಗೆ ತೆರಳುತ್ತಿದ್ದ KSRTC ಬಸ್ (ನೋಂದಣಿ ಸಂಖ್ಯೆ: KA06 F 1264) ನಲ್ಲಿ ಈ ಘಟನೆ ಸಂಭವಿಸಿದೆ.
ಪ್ರಯಾಣಿಕರಾದ ಪ್ರಸನ್ನ ಕುಮಾರ್.ಎಚ್.ಪಿ (ಬಿಂದುಶ್ರೀ.ಎಚ್.ಪಿ.) ಅವರು ಕುಣಿಗಲ್ ನಿಲ್ದಾಣದಿಂದ ಸದರಿ ಬಸ್ ಹತ್ತಿ ಪ್ರಯಾಣಿಸುತ್ತಿದ್ದರು. ಮಾರ್ಗಮಧ್ಯೆ ನಿಲ್ಲಿಸಬೇಕಾಗಿದ್ದ ಅಧಿಕೃತ ನಿಲ್ದಾಣದಲ್ಲಿ ಬಸ್ ನಿಲ್ಲಿಸದೆ, ಮುಂದಿನ ನಿಲ್ದಾಣದಲ್ಲಿ ನಿಲ್ಲಿಸಲಾಗಿದೆ. ಈ ವೇಳೆ ಪ್ರಯಾಣಿಕರು ಟಿಕೆಟ್ ಪಡೆಯುವ ಸಂಬಂಧ ವಿಚಾರಿಸಲು ಹೋದಾಗ, ನಿರ್ವಾಹಕ ಏಕಾಏಕಿ ಆಕ್ರೋಶಗೊಂಡು ಆವಾಚ್ಯ ಶಬ್ದಗಳಿಂದ ಬೈದು ಅವಮಾನಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
“ನೀವೆಲ್ಲ ಯಾಕೆ ಬಸ್ಸಿಗೆ ಬರ್ತೀರಾ?” ಎಂದು ಹೀಯಾಳಿಸಿ, ಇತರ ಪ್ರಯಾಣಿಕರ ಸಮ್ಮುಖದಲ್ಲೇ ತೇಜೋವಧೆ ಮಾಡಿರುವ ಗಂಭೀರ ಆರೋಪ ನಿರ್ವಾಹಕನ ಮೇಲಿದೆ.
ಶಿಸ್ತು ಕ್ರಮಕ್ಕೆ ಸಾರ್ವಜನಿಕರ ಒತ್ತಾಯ
ಸರ್ಕಾರಿ ಸ್ವಾಮ್ಯದ ಸಾರಿಗೆ ಸಂಸ್ಥೆಯಲ್ಲಿ ಪ್ರತಿನಿತ್ಯ ಸಾವಿರಾರು ಸಾರ್ವಜನಿಕರು ಪ್ರಯಾಣಿಸುತ್ತಾರೆ. ಇಂತಹ ಜವಾಬ್ದಾರಿಯುತ ಸೇವೆಯಲ್ಲಿರುವ ಸಿಬ್ಬಂದಿಯಿಂದ ಸಾರ್ವಜನಿಕರ ಮೇಲೆ ನಡೆಯುವ ದುರ್ವರ್ತನೆ ಹಾಗೂ ಕರ್ತವ್ಯಲೋಪವನ್ನು ಪ್ರಯಾಣಿಕರು ತೀವ್ರವಾಗಿ ಖಂಡಿಸಿದ್ದಾರೆ.
ಘಟನೆ ಕುರಿತು ಕೆಎಸ್ಆರ್ಟಿಸಿ ಹಿರಿಯ ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ, ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥ ನಿರ್ವಾಹಕನ ವಿರುದ್ಧ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳು ಬಲವಾಗಿ ಆಗ್ರಹಿಸಿವೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
