ಕೊರಟಗೆರೆ : ರಾಜ್ಯದ ನಾಲ್ಕು ವಿಧಾನ ಪರಿಷತ್ ಕ್ಷೇತ್ರಗಳ ಚುನಾವಣೆಯಲ್ಲಿ ಎನ್ ಡಿಎ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಕೊರಟಗೆರೆಯಲ್ಲಿ ಬಿಜೆಪಿ–ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ವಿಜಯೋತ್ಸವ ಆಚರಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹಾಗೂ ಜೆಡಿಎಸ್ ಮುಖಂಡ ಪಿ.ಎನ್. ಕೃಷ್ಣಮೂರ್ತಿ ಮಾತನಾಡಿ, ನಾಲ್ಕು ಕ್ಷೇತ್ರಗಳಲ್ಲಿ ಎನ್‌ಡಿಎ ಅಭ್ಯರ್ಥಿಗಳು ಗೆಲುವು ಸಾಧಿಸಿರುವುದು ಪಕ್ಷದ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಮೂಡಿಸಿದೆ. ಮುಂಬರುವ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿಯೂ ಉತ್ತಮ ಸಾಧನೆ ಮಾಡುವ ವಿಶ್ವಾಸವಿದೆ. 2028ರ ವಿಧಾನಸಭಾ ಚುನಾವಣೆಯಲ್ಲಿಯೂ ಗೆಲುವು ಸಾಧಿಸಿ ಎನ್‌ಡಿಎ ಸರ್ಕಾರ ರಚಿಸುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಕಾಮರಾಜು ಮಾತನಾಡಿ, ವಿಧಾನ ಪರಿಷತ್‌ನ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ ಚುನಾವಣೆಯಲ್ಲಿ ಎನ್ ಡಿಎ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂಬ ವಿಶ್ವಾಸ ಮೊದಲಿನಿಂದಲೂ ಇತ್ತು. ಅದರಂತೆ ನಾಲ್ಕು ಕ್ಷೇತ್ರಗಳಲ್ಲಿ ಜಯ ಸಾಧಿಸಿರುವುದು ಸಂತಸ ತಂದಿದೆ. ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಕಾಂಗ್ರೆಸ್ ಸರ್ಕಾರ ಪ್ರಚಾರ ಮಾಡುತ್ತಿದ್ದರೂ, ಪ್ರಜ್ಞಾವಂತ ಮತದಾರರು ತಮ್ಮ ತೀರ್ಪಿನ ಮೂಲಕ ಆಡಳಿತ ಪಕ್ಷಕ್ಕೆ ಉತ್ತರ ನೀಡಿದ್ದಾರೆ ಎಂದು ಹೇಳಿದರು.
ತಾಲೂಕು ಬಿಜೆಪಿ ಅಧ್ಯಕ್ಷ ರುದ್ರೇಶ್ ಮಾತನಾಡಿ, ಪಶ್ಚಿಮ ಪದವೀಧರ ಕ್ಷೇತ್ರದಿಂದ ಎಸ್.ವಿ. ಸಂಕನೂರು, ಆಗ್ನೇಯ ಪದವೀಧರ ಕ್ಷೇತ್ರದಿಂದ ಕೆ.ಎಂ. ಸುರೇಶ್, ಈಶಾನ್ಯ ಶಿಕ್ಷಕರ ಕ್ಷೇತ್ರದಿಂದ ಕಶೀಲ್ ಜಿ. ನಮೋಶಿ ಹಾಗೂ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಎ.ಪಿ. ರಂಗನಾಥ್ ಅವರು ಗೆಲುವು ಸಾಧಿಸಿದ್ದಾರೆ. ವಿದ್ಯಾವಂತ ಪದವೀಧರರು ಹಾಗೂ ಶಿಕ್ಷಕರು ಎನ್‌ಡಿಎ ಅಭ್ಯರ್ಥಿಗಳನ್ನು ಬೆಂಬಲಿಸಿರುವುದು ಪಕ್ಷಕ್ಕೆ ಬಲ ತಂದಿದೆ. ಮುಂಬರುವ ಚುನಾವಣೆಗಳಲ್ಲಿಯೂ ಜನರು ಅಭಿವೃದ್ಧಿಪರ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಚುನಾವಣೆಯಲ್ಲಿನ ಗೆಲುವನ್ನು ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ರಾಜಕೀಯ ಬಲವಾಗಿ ಪರಿಗಣಿಸಿರುವ ಬಿಜೆಪಿ–ಜೆಡಿಎಸ್ ಮುಖಂಡರು, ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.
ವಿಜಯೋತ್ಸವದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮುಖಂಡರಾದ ದೊಡ್ಡಯ್ಯ, ವೀರಕ್ಯಾತರಾಯ, ಮಂಜುನಾಥ್, ಕಾಕಿ ಮಲ್ಲಯ್ಯ, ಲಕ್ಷ್ಮೀನಾರಾಯಣ್, ಪುಟ್ಟನರಸಪ್ಪ, ಲಕ್ಷ್ಮಣ್, ವೆಂಕಟೇಶ್, ರಂಗಣ್ಣ, ಅಶ್ವತ್ಥನಾರಾಯಣರಾಜು, ಲಕ್ಷ್ಮೀಶ್, ಶ್ರೀಧರ, ರಾಜಣ್ಣ, ಸಿದ್ದರಾಜು, ಹನುಮಂತರಾಜು, ಆನಂದ್, ಕೃಷ್ಣನಾಯ್ಕ್, ಬಸವರಾಜು, ಹನುಮಂತಣ್ಣ, ರಮೇಶ್, ಮುಕ್ಕಣ್ಣಯ್ಯ ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
