ಮಧುಗಿರಿ : ಹೈನುಗಾರರ ಹಿತ ಕಾಪಾಡುವುದು ಮತ್ತು ಅವರ ಆರ್ಥಿಕ ಅಭಿವೃದ್ಧಿಗೆ ನೆರವಾಗುವುದೇ ಹಾಲು ಒಕ್ಕೂಟದ ಪ್ರಮುಖ ಉದ್ದೇಶವಾಗಿದೆ ಎಂದು ತುಮಕೂರು ಹಾಲು ಒಕ್ಕೂಟದ (ತುಮುಲ್) ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್ ತಿಳಿಸಿದರು.
ಪಟ್ಟಣದ ಹಾಲು ಶಿಥಲೀಕರಣ ಕೇಂದ್ರದಲ್ಲಿ ಹಾಲು ಉತ್ಪಾದಕರಿಗೆ ಮೇವು ಕತ್ತರಿಸುವ ಯಂತ್ರ, ಹಾಲು ಕರೆಯುವ ಯಂತ್ರ, ಹಸು ಎತ್ತುವ ಉಪಕರಣ ಹಾಗೂ ಮೃತಪಟ್ಟ ರಾಸುಗಳಿಗೆ ವಿಮಾ ಪರಿಹಾರದ ಚೆಕ್ಗಳನ್ನು ವಿತರಿಸಿ ಅವರು ಮಾತನಾಡಿದರು.
ಹತ್ತು ವರ್ಷಗಳ ಹಿಂದೆ ತುಮಕೂರು ಜಿಲ್ಲೆಯಲ್ಲಿ ಮಧುಗಿರಿ ತಾಲೂಕು ಅತಿ ಹೆಚ್ಚು ಹಾಲು ಉತ್ಪಾದಿಸುವ ಪ್ರದೇಶವಾಗಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಮಳೆ ಅಭಾವದಿಂದ ಹಾಲಿನ ಉತ್ಪಾದನೆ ಕಡಿಮೆಯಾಗಿದೆ. ಹೈನುಗಾರಿಕೆಯನ್ನೇ ನಂಬಿ ಬದುಕುತ್ತಿರುವ ಅನೇಕ ಕುಟುಂಬಗಳಿದ್ದು, ಹಾಲು ಒಕ್ಕೂಟವು ಸದಾ ರೈತರ ಬೆನ್ನೆಲುಬಾಗಿ ನಿಲ್ಲಲಿದೆ ಎಂದು ಹೇಳಿದರು.
ಒಕ್ಕೂಟದಿಂದ ಪ್ರತಿ ತಿಂಗಳು ಸುಮಾರು ₹130 ಕೋಟಿಯಿಂದ ₹145 ಕೋಟಿ ವರೆಗೆ ಹಾಲಿನ ಬಟವಾಡೆ ಮಾಡಲಾಗುತ್ತಿದೆ. ರೈತ ಕಲ್ಯಾಣ ಟ್ರಸ್ಟ್ ಮೂಲಕ ಹಾಲು ಉತ್ಪಾದಕರಿಗೆ ಹಲವು ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಹಾಲು ಉತ್ಪಾದಕರ ಮಕ್ಕಳ ಶಿಕ್ಷಣಕ್ಕೆ ಸಹಾಯಧನ, ಹಾಸ್ಟೆಲ್ ಸೌಲಭ್ಯ, ಮೃತಪಟ್ಟ ರಾಸುಗಳಿಗೆ ವಿಮಾ ಪರಿಹಾರ ಹಾಗೂ ಹಾಲು ಉತ್ಪಾದಕರು ಮೃತಪಟ್ಟ ಸಂದರ್ಭದಲ್ಲಿ ₹50 ಸಾವಿರ ಪರಿಹಾರ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು.
ಬರಪೀಡಿತ ಮಧುಗಿರಿ ತಾಲೂಕಿನಲ್ಲಿ ಶಾಶ್ವತ ನೀರಾವರಿ ಯೋಜನೆ ಅತ್ಯಗತ್ಯವಾಗಿದೆ. ಮುಂದಿನ ದಿನಗಳಲ್ಲಿ ಸ್ಥಳೀಯರಿಗೆ ರಾಜಕೀಯ ಸ್ಥಾನಮಾನ ಮತ್ತು ಅವಕಾಶಗಳು ದೊರೆತರೆ, ತಾಲೂಕಿನ ನೀರಾವರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹೋರಾಟ ನಡೆಸಲು ಸಾಧ್ಯವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ತಾಲೂಕಿನ ಹಾಲು ಉತ್ಪಾದಕರಿಗೆ ಮೇವು ಕತ್ತರಿಸುವ ಯಂತ್ರ, ಹಾಲು ಕರೆಯುವ ಯಂತ್ರ ಹಾಗೂ ಹಸು ಎತ್ತುವ ಉಪಕರಣಗಳನ್ನು ವಿತರಿಸಲಾಯಿತು. ಅಲ್ಲದೆ, ಮೃತಪಟ್ಟ ರಾಸುಗಳಿಗೆ ವಿಮಾ ಪರಿಹಾರ ಸೇರಿದಂತೆ ಒಟ್ಟು ₹63 ಲಕ್ಷ ಮೊತ್ತದ ಸೌಲಭ್ಯ ಮತ್ತು ಪರಿಹಾರ ಚೆಕ್ಗಳನ್ನು ವಿತರಿಸಲಾಯಿತು.
ಪುರಸಭೆ ಮಾಜಿ ಸದಸ್ಯ ಎಂ.ಆರ್. ಜಗನ್ನಾಥ್ ಮಾತನಾಡಿ, ಮಧುಗಿರಿ ತಾಲೂಕಿನಲ್ಲಿ ಹೈನುಗಾರಿಕೆಯನ್ನು ಪ್ರೋತ್ಸಾಹಿಸಲು ಹಾಲು ಒಕ್ಕೂಟವು ವಿವಿಧ ಸೌಲಭ್ಯಗಳನ್ನು ಒದಗಿಸುತ್ತಿರುವುದು ಸಂತಸದ ವಿಚಾರವಾಗಿದೆ. ರೈತರ ಏಳ್ಗೆಗೆ ಒಕ್ಕೂಟದ ಪರವಾಗಿ ಶ್ರಮಿಸುತ್ತಿರುವ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್ ಅವರಿಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ರಾಜಕೀಯ ಶಕ್ತಿ ದೊರೆಯಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಗುಟ್ಟೆ ವೀರೇಂದ್ರ, ಡಿ.ಆರ್. ಕಾಂತರಾಜು, ನಾರಾಯಣ್, ವನಜಾಕ್ಷಿ ದಾಸೇಗೌಡ, ಬೋರ್ವೆಲ್ ಕುಮಾರ್, ಸುರೇಶ್, ರಂಗಯ್ಯ, ಸುಮುಖ್ ಕೊಂಡವಾಡಿ, ಸಾತೇನಹಳ್ಳಿ ಲೋಕೇಶ್, ತಾಲೂಕು ಉಪಕೇಂದ್ರದ ಮುಖ್ಯಸ್ಥ ನಾಗರಾಜು, ವಿಸ್ತರಣಾಧಿಕಾರಿ ದಿವಾಕರ್, ವ್ಯವಸ್ಥಾಪಕ ಲಕ್ಷ್ಮೀಕಾಂತ್, ವೈದ್ಯರಾದ ಅಭಿಲಾಶ್ ಮತ್ತು ಶಿಲ್ಪ, ಸಿಬ್ಬಂದಿಗಳಾದ ಧರ್ಮವೀರ್ ಹಾಗೂ ಮಾರೇಗೌಡ ಸೇರಿದಂತೆ ಕಚೇರಿ ಸಿಬ್ಬಂದಿ, ಹಾಲು ಉತ್ಪಾದಕ ಸಂಘಗಳ ಕಾರ್ಯದರ್ಶಿಗಳು ಮತ್ತು ಹೈನುಗಾರರು ಉಪಸ್ಥಿತರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
