ಕೊರಟಗೆರೆ: ತಾಲೂಕಿನ ಹೊಳವನಹಳ್ಳಿ ಹೋಬಳಿಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕ್ಯಾಮೇನಹಳ್ಳಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ರಾಜಗೋಪುರ ನಿರ್ಮಾಣಕ್ಕೆ ಕೊರಟಗೆರೆಯ ಸಮಾಜಸೇವಕ ಎಂ.ಎನ್.ಜೆ. ಮಂಜುನಾಥ್ ಅವರು 5 ಲಕ್ಷ ರೂ. ದೇಣಿಗೆ ನೀಡಿದ್ದಾರೆ.
ಶನಿವಾರ ದೇವಸ್ಥಾನಕ್ಕೆ ಭೇಟಿ ನೀಡಿದ ಅವರು, ಜೀರ್ಣೋದ್ಧಾರ ಸಮಿತಿ ಸದಸ್ಯ ಎಲ್. ರಾಜಣ್ಣ ಅವರಿಗೆ ಹಿರಿಯರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ 5 ಲಕ್ಷ ರೂ. ನಗದು ಹಸ್ತಾಂತರಿಸಿದರು. ಬಳಿಕ ಶ್ರೀ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಂ.ಎನ್.ಜೆ. ಮಂಜುನಾಥ್, ರಾಜಗೋಪುರ ನಿರ್ಮಾಣ ಸಮಿತಿಗೆ ನೀಡಿದ್ದ ಭರವಸೆಯಂತೆ ದೇಣಿಗೆ ನೀಡಿದ್ದೇನೆ. ಜೀರ್ಣೋದ್ಧಾರ ಸಮಿತಿಯ ಸದಸ್ಯನಾಗಿ ದೇವಸ್ಥಾನದ ಅಭಿವೃದ್ಧಿಗೆ ಮುಂದೆಯೂ ಸಹಕಾರ ನೀಡುತ್ತೇನೆ. ರಾಜಗೋಪುರ ನಿರ್ಮಾಣ ಪೂರ್ಣಗೊಳ್ಳಲು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇಣಿಗೆ ನೀಡಬೇಕು ಎಂದು ಮನವಿ ಮಾಡಿದರು.
2 ಕೋಟಿ ರೂ. ವೆಚ್ಚದಲ್ಲಿ ರಾಜಗೋಪುರ ನಿರ್ಮಾಣ
ಜೀರ್ಣೋದ್ಧಾರ ಸಮಿತಿ ಸದಸ್ಯ ಎಲ್. ರಾಜಣ್ಣ ಮಾತನಾಡಿ, ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ರಾಜಗೋಪುರ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಭಕ್ತರ ಸಹಕಾರದಿಂದ ಈಗಾಗಲೇ ಶೇ.75ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಉಳಿದ ಕಾಮಗಾರಿ ಪೂರ್ಣಗೊಳಿಸಲು ಮತ್ತಷ್ಟು ಸಹಕಾರ ಅಗತ್ಯವಿದೆ. ದೇಣಿಗೆ ನೀಡಿದ ಎಂ.ಎನ್.ಜೆ. ಮಂಜುನಾಥ್ ಅವರಿಗೆ ಸಮಿತಿಯ ಪರವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಅರ್ಚಕ ರಾಮಚಾರ್, ವೀರಶೈವ ಸೇವಾ ಸಮಿತಿ ಅಧ್ಯಕ್ಷ ಮಂಜುನಾಥ್, ಮುಖಂಡರಾದ ಎಲ್.ವಿ. ಪ್ರಕಾಶ್, ಓಬಳರಾಜು, ಚಂದ್ರಶೇಖರ್, ಉಮಾಶಂಕರ್, ಬಸವರಾಜು, ವೆಂಕಟಾರೆಡ್ಡಿ, ರಾಮಕೃಷ್ಣ, ಮರುಡಪ್ಪ, ರಂಗಣ್ಣ, ಲೋಕೇಶ್, ಸುರೇಶ್, ಕಾಳಿಚರಣ್, ಭಾನುಪ್ರಕಾಶ್, ಅಬ್ಬಾಸ್, ದಿಲೀಪ್, ಮಹೇಶ್, ನವೀನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
