ಹೆಣ್ಣುಮಕ್ಕಳ ಭವಿಷ್ಯಕ್ಕೆ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಮುಖ ಉಳಿತಾಯ ಯೋಜನೆಗಳಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Yojana – SSY) ಕೂಡ ಒಂದು. ಮಗಳ ಶಿಕ್ಷಣ, ಮದುವೆ ಸೇರಿದಂತೆ ಭವಿಷ್ಯದ ಅಗತ್ಯಗಳಿಗಾಗಿ ಪೋಷಕರು ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಬಹುದು. ಸರ್ಕಾರದ ಬೆಂಬಲ ಹೊಂದಿರುವ ಈ ಯೋಜನೆಯಲ್ಲಿ ಆಕರ್ಷಕ ಬಡ್ಡಿ ದರದ ಜೊತೆಗೆ ಆದಾಯ ತೆರಿಗೆ ವಿನಾಯಿತಿಯ ಸೌಲಭ್ಯವೂ ಇದೆ.
ಸಾಮಾನ್ಯವಾಗಿ ಈ ಯೋಜನೆಯ ಖಾತೆ ತೆರೆದ ದಿನದಿಂದ 21 ವರ್ಷಗಳ ನಂತರ ಮೆಚ್ಯೂರಿಟಿ ಆಗುತ್ತದೆ. ಆದರೆ ಮಗಳ ಮದುವೆ 21 ವರ್ಷಗಳ ಅವಧಿ ಪೂರ್ಣಗೊಳ್ಳುವ ಮೊದಲೇ ನಿಗದಿಯಾದರೆ ಖಾತೆಯಲ್ಲಿರುವ ಹಣವನ್ನು ಪಡೆಯಲು ಸಾಧ್ಯವೇ ಎಂಬ ಪ್ರಶ್ನೆ ಪೋಷಕರಲ್ಲಿ ಮೂಡುತ್ತದೆ. ಇದಕ್ಕೆ ಯೋಜನೆಯ ನಿಯಮಗಳಲ್ಲಿ ಅವಕಾಶ ಕಲ್ಪಿಸಲಾಗಿದೆ. ಆದರೆ ಅದಕ್ಕೆ ಕೆಲವು ಷರತ್ತುಗಳನ್ನು ಪಾಲಿಸುವುದು ಕಡ್ಡಾಯ.
ಸುಕನ್ಯಾ ಸಮೃದ್ಧಿ ಖಾತೆದಾರಳಿಗೆ 18 ವರ್ಷ ಪೂರ್ಣಗೊಂಡಿದ್ದು, ಆಕೆಯ ಮದುವೆ ನಿಗದಿಯಾಗಿದ್ದರೆ 21 ವರ್ಷಗಳ ಮೆಚ್ಯೂರಿಟಿ ಅವಧಿಗೂ ಮೊದಲೇ ಖಾತೆಯನ್ನು ಮುಚ್ಚಲು ಅವಕಾಶವಿದೆ. ಈ ಸಂದರ್ಭದಲ್ಲಿ ಖಾತೆಯಲ್ಲಿರುವ ಬಾಕಿ ಮೊತ್ತ ಹಾಗೂ ಯೋಜನೆಯ ನಿಯಮಗಳ ಪ್ರಕಾರ ಅನ್ವಯವಾಗುವ ಬಡ್ಡಿಯನ್ನು ಪಡೆಯಬಹುದು.
ಆದರೆ ಮದುವೆಯ ಕಾರಣಕ್ಕೆ ಖಾತೆ ಮುಚ್ಚುವ ಪ್ರಕ್ರಿಯೆಗೆ ನಿರ್ದಿಷ್ಟ ಕಾಲಮಿತಿ ಇದೆ. ಮದುವೆಯ ದಿನಾಂಕಕ್ಕೆ ಒಂದು ತಿಂಗಳಿಗಿಂತ ಮುಂಚಿತವಾಗಿ ಖಾತೆ ಮುಚ್ಚಲು ಸಾಧ್ಯವಿಲ್ಲ. ಹಾಗೆಯೇ ಮದುವೆಯಾದ ಮೂರು ತಿಂಗಳ ನಂತರವೂ ಈ ಸೌಲಭ್ಯ ಪಡೆಯಲು ಅವಕಾಶ ಇರುವುದಿಲ್ಲ.
ಯಾವ ದಾಖಲೆಗಳನ್ನು ಸಲ್ಲಿಸಬೇಕು?
ಖಾತೆಯನ್ನು ಅವಧಿಗೂ ಮುನ್ನ ಮುಚ್ಚಲು ಬಯಸಿದರೆ, ಖಾತೆ ತೆರೆದಿರುವ ಅಂಚೆ ಕಚೇರಿ ಅಥವಾ ಬ್ಯಾಂಕ್ ಅನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬೇಕು. ಖಾತೆದಾರಳ ವಯಸ್ಸನ್ನು ದೃಢೀಕರಿಸುವ ದಾಖಲೆ ಹಾಗೂ ಮದುವೆಗೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಬೇಕು.ಇದರೊಂದಿಗೆ ಮದುವೆಯ ಉದ್ದೇಶಕ್ಕಾಗಿ ಖಾತೆ ಮುಚ್ಚುವಂತೆ ಖಾತೆದಾರಳೇ ಅರ್ಜಿ ಸಲ್ಲಿಸಬೇಕು. ನೋಟರಿ ದೃಢೀಕರಿಸಿದ ನಾನ್-ಜುಡಿಷಿಯಲ್ ಸ್ಟಾಂಪ್ ಪೇಪರ್ ಮೇಲಿನ ಘೋಷಣಾ ಪತ್ರವನ್ನು ಸಲ್ಲಿಸುವುದು ಕಡ್ಡಾಯ. ಮದುವೆಯ ದಿನದಂದು ಖಾತೆದಾರಳಿಗೆ ಕನಿಷ್ಠ 18 ವರ್ಷ ವಯಸ್ಸಾಗಿರುತ್ತದೆ ಎಂಬುದನ್ನು ದೃಢೀಕರಿಸುವ ವಯಸ್ಸಿನ ದಾಖಲೆಯನ್ನೂ ನೀಡಬೇಕು.
ಅರ್ಜಿ ಮತ್ತು ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಬ್ಯಾಂಕ್ ಅಥವಾ ಅಂಚೆ ಕಚೇರಿಯ ಅಧಿಕಾರಿಗಳು ನಿಯಮಾನುಸಾರ ಖಾತೆ ಮುಚ್ಚುವ ಪ್ರಕ್ರಿಯೆ ಕೈಗೊಳ್ಳುತ್ತಾರೆ. ನಂತರ ಖಾತೆಯಲ್ಲಿರುವ ಬಾಕಿ ಮೊತ್ತ ಮತ್ತು ಅನ್ವಯವಾಗುವ ಬಡ್ಡಿಯನ್ನು ಖಾತೆದಾರಳಿಗೆ ಪಾವತಿಸಲಾಗುತ್ತದೆ.
ಯೋಜನೆಯ ಅವಧಿ ಮತ್ತು ಅರ್ಹತೆ
10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣುಮಕ್ಕಳ ಹೆಸರಿನಲ್ಲಿ ಸುಕನ್ಯಾ ಸಮೃದ್ಧಿ ಖಾತೆ ತೆರೆಯಬಹುದು. ಖಾತೆ ತೆರೆದ ದಿನದಿಂದ 21 ವರ್ಷಗಳ ನಂತರ ಯೋಜನೆ ಮೆಚ್ಯೂರಿಟಿ ತಲುಪುತ್ತದೆ. ಸಾಮಾನ್ಯವಾಗಿ ಮೊದಲ 15 ವರ್ಷಗಳವರೆಗೆ ಖಾತೆಗೆ ಹಣ ಜಮೆ ಮಾಡಬಹುದು. ಆ ಬಳಿಕ ಹೊಸದಾಗಿ ಹಣ ಜಮೆ ಮಾಡದಿದ್ದರೂ ನಿಯಮಾನುಸಾರ ಬಡ್ಡಿ ಮುಂದುವರಿಯುತ್ತದೆ. ಉದಾಹರಣೆಗೆ, ಮಗಳಿಗೆ ಏಳು ವರ್ಷ ವಯಸ್ಸಿದ್ದಾಗ ಖಾತೆ ತೆರೆದರೆ, ಖಾತೆ ತೆರೆದ ದಿನದಿಂದ 21 ವರ್ಷಗಳ ನಂತರ, ಅಂದರೆ ಮಗಳಿಗೆ 28 ವರ್ಷ ತುಂಬುವ ವೇಳೆಗೆ ಖಾತೆ ಮೆಚ್ಯೂರಿಟಿ ಆಗುತ್ತದೆ. ಆದರೆ ಆಕೆಗೆ 18 ವರ್ಷ ತುಂಬಿದ ಬಳಿಕ ಮದುವೆ ನಿಗದಿಯಾದರೆ, ಮೇಲಿನ ಷರತ್ತುಗಳನ್ನು ಪೂರೈಸಿ ಅವಧಿಗೂ ಮುನ್ನ ಖಾತೆ ಮುಚ್ಚುವ ಅವಕಾಶವಿದೆ.ಹೀಗಾಗಿ, ಮಗಳ ಭವಿಷ್ಯಕ್ಕಾಗಿ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆ ಮಾಡುವ ಪೋಷಕರು ಅದರ ಮೆಚ್ಯೂರಿಟಿ ಅವಧಿ ಮಾತ್ರವಲ್ಲದೆ, ಶಿಕ್ಷಣ ಮತ್ತು ಮದುವೆಯಂತಹ ಅಗತ್ಯಗಳಿಗೆ ಸಂಬಂಧಿಸಿದ ಹಣ ಹಿಂಪಡೆಯುವ ನಿಯಮಗಳನ್ನೂ ತಿಳಿದುಕೊಳ್ಳುವುದು ಮುಖ್ಯ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
