ಗುಬ್ಬಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸಿ.ಎಸ್. ಪುರ ಹೋಬಳಿಯ ಚನ್ನೇನಹಳ್ಳಿ ಗ್ರಾಮದ ವಾತ್ಸಲ್ಯ ಯೋಜನೆಯ ಫಲಾನುಭವಿ ಗುಡ್ಡಮ್ಮ ಅವರಿಗೆ ನೂತನವಾಗಿ ನಿರ್ಮಿಸಲಾದ ವಾತ್ಸಲ್ಯ ಮನೆಯನ್ನು ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ನಿರ್ದೇಶಕ ಸತೀಶ್ ಸುವರ್ಣ ಮಾತನಾಡಿ, ಗ್ರಾಮೀಣ ಪ್ರದೇಶಗಳ ಜನರ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಗಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಹಲವು ಜನಪರ ಕಾರ್ಯಕ್ರಮಗಳನ್ನು ನಿರಂತರವಾಗಿ ಅನುಷ್ಠಾನಗೊಳಿಸುತ್ತಿದೆ. ನಮ್ಮ ಊರು ನಮ್ಮ ಕೆರೆ, ಪರಿಸರ ಸಂರಕ್ಷಣೆ ಸೇರಿದಂತೆ ವಿವಿಧ ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುತ್ತಿದೆ ಎಂದರು.
ಸಮಾಜದಲ್ಲಿ ಸಂಕಷ್ಟಕ್ಕೆ ಸಿಲುಕಿ, ಸ್ವಂತ ಸೂರಿಲ್ಲದೆ ಜೀವನ ನಡೆಸುತ್ತಿರುವ ನಿರ್ಗತಿಕರನ್ನು ಗುರುತಿಸಿ ನೆರವು ನೀಡುವ ಉದ್ದೇಶದಿಂದ ವಾತ್ಸಲ್ಯ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಈ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಮನೆ ನಿರ್ಮಿಸಿಕೊಡುವುದರ ಜೊತೆಗೆ ಪ್ರತಿ ತಿಂಗಳು ₹1,000 ಮಾಸಾಶನ, ವಾತ್ಸಲ್ಯ ಕಿಟ್, ಬಟ್ಟೆ, ಪಾತ್ರೆಗಳು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಆ ಮೂಲಕ ಅಸಹಾಯಕ ಕುಟುಂಬಗಳ ಬದುಕಿನಲ್ಲಿ ಹೊಸ ಭರವಸೆ ಮೂಡಿಸುವ ಕಾರ್ಯವನ್ನು ಸಂಸ್ಥೆ ಮಾಡುತ್ತಿದೆ ಎಂದು ತಿಳಿಸಿದರು.
ನೊಂದವರ ಸೇವೆ ಮಾಡುವುದೇ ಮಂಜುನಾಥ ಸ್ವಾಮಿಯ ಸೇವೆ ಮಾಡಿದಂತೆ ಎಂಬ ಭಾವನೆಯೊಂದಿಗೆ ಅಸಹಾಯಕರಿಗೆ ನೆರವಾಗುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ ಶ್ಲಾಘನೀಯವಾಗಿದೆ. ವಾತ್ಸಲ್ಯ ಮನೆಯ ಫಲಾನುಭವಿ ಗುಡ್ಡಮ್ಮ ಅವರು ನೂತನ ಮನೆಯಲ್ಲಿ ನೆಮ್ಮದಿಯ ಜೀವನ ನಡೆಸುವಂತಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಗುಬ್ಬಿ ಯೋಜನಾಧಿಕಾರಿ ಜಯಂತಿ, ಒಕ್ಕೂಟದ ಅಧ್ಯಕ್ಷ ರಮೇಶ್, ಮಣಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಗಂಗಣ್ಣ, ಸೋಮಣ್ಣ, ಪದಾಧಿಕಾರಿ ಮಮತಾ, ವಲಯ ಮೇಲ್ವಿಚಾರಕ ಅರುಣ್ ಕುಮಾರ್, ಜ್ಞಾನ ಸಮನ್ವಯಾಧಿಕಾರಿ ಜಯಲಕ್ಷ್ಮಿ, ಸೇವಾ ಪ್ರತಿನಿಧಿಗಳಾದ ಮಾಯಮ್ಮ, ನಳಿನಿ, ಸ್ವಸಹಾಯ ಸಂಘದ ಸದಸ್ಯರು, ಗ್ರಾಮದ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
