ಮನೆ ಖರೀದಿ, ವಾಹನ ಖರೀದಿ, ಮಕ್ಕಳ ಶಿಕ್ಷಣ ಸೇರಿದಂತೆ ಹಲವು ಅಗತ್ಯಗಳಿಗಾಗಿ ಜನರು ಬ್ಯಾಂಕ್ ಗಳಿಂದ ಸಾಲ ಪಡೆಯುತ್ತಾರೆ. ಸಾಲ ಪಡೆದ ಬಳಿಕ ಅದನ್ನು ನಿಗದಿತ ಸಮಯಕ್ಕೆ ಮರುಪಾವತಿ ಮಾಡುವುದು ಗ್ರಾಹಕರ ಜವಾಬ್ದಾರಿ. ಆದರೆ ಸಾಲದ ಸಂಪೂರ್ಣ ಹಣವನ್ನು ತೀರಿಸಿದರೂ ಬ್ಯಾಂಕ್ ನ ನಿರ್ಲಕ್ಷ್ಯದಿಂದ ಗ್ರಾಹಕರೊಬ್ಬರು ವರ್ಷಗಳ ಕಾಲ ಸಂಕಷ್ಟ ಅನುಭವಿಸಿದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ಶಿಕ್ಷಣ ಸಾಲವನ್ನು ಸಂಪೂರ್ಣವಾಗಿ ಮರುಪಾವತಿ ಮಾಡಿದರೂ ಅಡಮಾನ ಇಟ್ಟಿದ್ದ ಮನೆಯ ಮೇಲಿನ ಸಾಲದ ಹೊಣೆಗಾರಿಕೆಯನ್ನು ಬ್ಯಾಂಕ್ ದಾಖಲೆಗಳಿಂದ ತೆರವುಗೊಳಿಸಿರಲಿಲ್ಲ. ಇದರಿಂದ ಮನೆ ಮಾರಾಟ ಮಾಡಲು ಸಾಧ್ಯವಾಗದೆ ತೊಂದರೆ ಅನುಭವಿಸಿದ ಗ್ರಾಹಕರಿಗೆ ಇದೀಗ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಒಟ್ಟು 40.30 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಬ್ಯಾಂಕ್ಗೆ ಆದೇಶಿಸಿದೆ.
ಏನಿದು ಪ್ರಕರಣ?
ಹೈದರಾಬಾದ್ ನಿವಾಸಿ 67 ವರ್ಷದ ರಾಮ್ ರೆಡ್ಡಿ ಅವರು 2013ರ ಡಿಸೆಂಬರ್ 21ರಂದು ತೆಲಂಗಾಣ ಗ್ರಾಮೀಣ ಬ್ಯಾಂಕ್ನಿಂದ ತಮ್ಮ ಮಗನ ಶಿಕ್ಷಣಕ್ಕಾಗಿ 8 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಈ ಸಾಲಕ್ಕೆ ಭದ್ರತೆಯಾಗಿ ತಮ್ಮ ಮನೆಯನ್ನು ಅಡಮಾನ ಇಟ್ಟು, ಆಸ್ತಿಯ ಮೂಲ ದಾಖಲೆಗಳನ್ನು ಬ್ಯಾಂಕ್ಗೆ ನೀಡಿದ್ದರು.ರಾಮ್ ರೆಡ್ಡಿ ಅವರು ಸಾಲದ ಕಂತುಗಳನ್ನು ಮರುಪಾವತಿ ಮಾಡುತ್ತಾ, ಕೇವಲ ಮೂರು ವರ್ಷಗಳಲ್ಲೇ ಅಂದರೆ 2016ರ ಸೆಪ್ಟೆಂಬರ್ 1ರಂದು ಸಂಪೂರ್ಣ ಸಾಲವನ್ನು ತೀರಿಸಿದ್ದರು. ಬಳಿಕ ಬ್ಯಾಂಕ್ ಅವರ ಮನೆಯ ಮೂಲ ದಾಖಲೆಗಳನ್ನೂ ಹಿಂದಿರುಗಿಸಿತ್ತು. ಆದರೆ ಆಸ್ತಿಯನ್ನು ಅಡಮಾನದಿಂದ ಮುಕ್ತಗೊಳಿಸಿರುವುದನ್ನು ದೃಢೀಕರಿಸುವ ಅಗತ್ಯ ದಾಖಲೆ ನೀಡುವಲ್ಲಿ ಬ್ಯಾಂಕ್ ವಿಫಲವಾಗಿತ್ತು.
ಸಾಲ ಮರುಪಾವತಿಯಾದ ಬಳಿಕವೂ ಬ್ಯಾಂಕ್ ನ ದಾಖಲೆಗಳಲ್ಲಿ ರಾಮ್ ರೆಡ್ಡಿ ಅವರ ಮನೆ ಅಡಮಾನದಲ್ಲೇ ಇರುವುದಾಗಿ ದಾಖಲಾಗಿತ್ತು. 2018ರಲ್ಲಿ ಅವರು ತಮ್ಮ ಮನೆಯನ್ನು ಮಾರಾಟ ಮಾಡಲು ಮುಂದಾದಾಗ ಈ ಸಮಸ್ಯೆ ಬೆಳಕಿಗೆ ಬಂದಿದೆ. ಬ್ಯಾಂಕ್ ನ ದಾಖಲೆಗಳಲ್ಲಿ ಆಸ್ತಿ ಅಡಮಾನದಲ್ಲಿರುವುದಾಗಿ ತೋರಿಸುತ್ತಿದ್ದ ಕಾರಣ ಮನೆ ಮಾರಾಟದ ನೋಂದಣಿ ಪ್ರಕ್ರಿಯೆಗೆ ಅಡ್ಡಿಯಾಯಿತು.
ಈ ಸಮಸ್ಯೆ ಬಗೆಹರಿಸುವಂತೆ ರಾಮ್ ರೆಡ್ಡಿ ಅವರು ಹಲವು ಬಾರಿ ಬ್ಯಾಂಕ್ ಗೆ ಭೇಟಿ ನೀಡಿ ಮನವಿ ಮಾಡಿದ್ದರು. ಆದರೂ ಸೂಕ್ತ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ 2025ರ ಸೆಪ್ಟೆಂಬರ್ 11ರಂದು ಬ್ಯಾಂಕ್ ನ ಪೋರ್ಟಲ್ ನಲ್ಲಿ ದೂರು ದಾಖಲಿಸಿದರು.
ಇದಾದ ಬಳಿಕ ಬ್ಯಾಂಕ್ ಅಧಿಕಾರಿಗಳು ಅಡಮಾನ ಬಿಡುಗಡೆ ಮಾಡುವುದಾಗಿ ತಿಳಿಸಿ, ಇಬ್ಬರು ಸಾಕ್ಷಿಗಳೊಂದಿಗೆ ಶಾಖೆಗೆ ಬರುವಂತೆ ಸೂಚಿಸಿದ್ದರು. ಅಗತ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವುದರ ಜೊತೆಗೆ ಅದಕ್ಕೆ ತಗಲುವ ವೆಚ್ಚವನ್ನೂ ಗ್ರಾಹಕರೇ ಭರಿಸಬೇಕು ಎಂದು ತಿಳಿಸಿದ್ದರು. ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಸಮಯ ಕಾಯ್ದಿರಿಸುವಂತೆಯೂ ಸೂಚಿಸಿದ್ದರು. ಬ್ಯಾಂಕ್ ನಿಂದ ನಿರಂತರ ತೊಂದರೆ ಅನುಭವಿಸಿದ ರಾಮ್ ರೆಡ್ಡಿ ಅವರು ಕೊನೆಗೆ ಹೈದರಾಬಾದ್ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಮೊರೆ ಹೋದರು. ಬ್ಯಾಂಕ್ ನ ನಿರ್ಲಕ್ಷ್ಯದಿಂದ ತಮಗಾದ ನಷ್ಟಕ್ಕೆ 39.75 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಮನವಿ ಸಲ್ಲಿಸಿದರು.
ಭಾರತೀಯ ರಿಸರ್ವ್ ಬ್ಯಾಂಕ್ (RBI) 2023ರ ಸೆಪ್ಟೆಂಬರ್ 13ರಂದು ಹೊರಡಿಸಿದ್ದ ಮಾರ್ಗಸೂಚಿಯ ಪ್ರಕಾರ, ಸಾಲದ ಸಂಪೂರ್ಣ ಮರುಪಾವತಿ ಅಥವಾ ಇತ್ಯರ್ಥದ ಬಳಿಕ ಬ್ಯಾಂಕ್ ಗಳು ಗ್ರಾಹಕರ ಮೂಲ ಆಸ್ತಿ ದಾಖಲೆಗಳನ್ನು ಹಿಂದಿರುಗಿಸಬೇಕು ಮತ್ತು ನೋಂದಾಯಿತ ಅಡಮಾನವನ್ನು ಬಿಡುಗಡೆ ಮಾಡಬೇಕು. ಈ ಪ್ರಕ್ರಿಯೆಯಲ್ಲಿ ವಿಳಂಬವಾದರೆ, ವಿಳಂಬದ ಅವಧಿಗೆ ಪ್ರತಿದಿನ 5,000 ರೂಪಾಯಿ ಪರಿಹಾರ ನೀಡಬೇಕೆಂಬ ನಿಯಮವಿದೆ.
ಈ ಮಾರ್ಗಸೂಚಿಯ ಆಧಾರದ ಮೇಲೆ 2023ರ ಅಕ್ಟೋಬರ್ 13ರಿಂದ 795 ದಿನಗಳ ವಿಳಂಬವಾಗಿದೆ ಎಂದು ಲೆಕ್ಕ ಹಾಕಿದ ರಾಮ್ ರೆಡ್ಡಿ, 39.75 ಲಕ್ಷ ರೂಪಾಯಿ ಪರಿಹಾರ ಕೋರಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ವಕ್ಕಂಟಿ ನರಸಿಂಹ ರಾವ್ ಹಾಗೂ ಸದಸ್ಯರಾದ ಪಿ.ವಿ.ಟಿ.ಆರ್. ಜವಾಹರ್ ಬಾಬು ಮತ್ತು ಸುಮಾ ವಾಲಾ ಅವರು ಬ್ಯಾಂಕ್ನ ನಿರ್ಲಕ್ಷ್ಯವನ್ನು ಗುರುತಿಸಿದ್ದಾರೆ. ಸಾಲದ ಸಂಪೂರ್ಣ ಮೊತ್ತ ಮರುಪಾವತಿಯಾದ ಬಳಿಕವೂ ಆಸ್ತಿಯನ್ನು ಅಡಮಾನದಿಂದ ಮುಕ್ತಗೊಳಿಸದಿರುವುದು ಸೇವಾ ನ್ಯೂನತೆ ಎಂದು ಆಯೋಗ ಅಭಿಪ್ರಾಯಪಟ್ಟಿದೆ.
ಹೀಗಾಗಿ ಬ್ಯಾಂಕ್ ಮತ್ತು ಸಂಬಂಧಪಟ್ಟ ಶಾಖಾ ವ್ಯವಸ್ಥಾಪಕರು ರಾಮ್ ರೆಡ್ಡಿ ಅವರಿಗೆ ಒಟ್ಟು 40.30 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಲಾಗಿದೆ. ಇದರಲ್ಲಿ ವಿಳಂಬಕ್ಕಾಗಿ 39.75 ಲಕ್ಷ ರೂಪಾಯಿ, ಮಾನಸಿಕ ತೊಂದರೆಗಾಗಿ 50,000 ರೂಪಾಯಿ ಹಾಗೂ ಕಾನೂನು ಹೋರಾಟದ ವೆಚ್ಚವಾಗಿ 5,000 ರೂಪಾಯಿ ಸೇರಿವೆ.
ಸಾಲವನ್ನು ಸಂಪೂರ್ಣವಾಗಿ ತೀರಿಸಿದ ಬಳಿಕವೂ ಬ್ಯಾಂಕ್ನ ದಾಖಲೆಗಳಲ್ಲಿನ ತಪ್ಪಿನಿಂದ ಗ್ರಾಹಕರು ಎಷ್ಟು ದೊಡ್ಡ ಸಮಸ್ಯೆ ಎದುರಿಸಬಹುದು ಎಂಬುದಕ್ಕೆ ಈ ಪ್ರಕರಣ ಉದಾಹರಣೆಯಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
