ರಾತ್ರಿ ವೇಳೆ ವಾಹನ ಚಾಲನೆ ಮಾಡುವುದು ಹಗಲಿಗಿಂತ ಹೆಚ್ಚು ಎಚ್ಚರಿಕೆ ಮತ್ತು ಜಾಗರೂಕತೆಯನ್ನು ಬಯಸುತ್ತದೆ. ಅದರಲ್ಲೂ ಎದುರುಗಡೆಯಿಂದ ಬರುವ ವಾಹನಗಳ ಹೆಡ್‌ಲೈಟ್‌ನ ಹೈ ಬೀಮ್ ಬೆಳಕು ಚಾಲಕರಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತದೆ. ತೀಕ್ಷ್ಣವಾದ ಬೆಳಕು ನೇರವಾಗಿ ಕಣ್ಣಿಗೆ ಬೀಳುವುದರಿಂದ ಕೆಲ ಕ್ಷಣಗಳ ಕಾಲ ರಸ್ತೆ ಸ್ಪಷ್ಟವಾಗಿ ಕಾಣಿಸದೆ ಚಾಲಕರು ತಬ್ಬಿಬ್ಬಾಗುತ್ತಾರೆ. ಇದರಿಂದ ವಾಹನದ ಮೇಲಿನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸುವ ಅಪಾಯವೂ ಹೆಚ್ಚಾಗುತ್ತದೆ.
ವೈದ್ಯಕೀಯ ಪರಿಭಾಷೆಯಲ್ಲಿ ಈ ಸ್ಥಿತಿಯನ್ನು ‘ಟೆಂಪರರಿ ಗ್ಲೇರ್ ಬ್ಲೈಂಡ್‌ನೆಸ್’ ಎಂದು ಕರೆಯಲಾಗುತ್ತದೆ. ಅಂದರೆ, ಅತಿಯಾದ ಬೆಳಕಿನಿಂದಾಗಿ ಕಣ್ಣುಗಳಿಗೆ ತಾತ್ಕಾಲಿಕವಾಗಿ ದೃಷ್ಟಿ ಮಸುಕಾಗುವುದು. ಇಂತಹ ಸಂದರ್ಭದಲ್ಲಿ ಗಾಬರಿಯಾಗದೆ ಕೆಲವು ಮುನ್ನೆಚ್ಚರಿಕೆಗಳನ್ನು ಅನುಸರಿಸಿದರೆ ಅಪಾಯವನ್ನು ಕಡಿಮೆ ಮಾಡಬಹುದು.
ರಸ್ತೆಯ ಎಡಭಾಗದ ಗುರುತಿನ ರೇಖೆಯತ್ತ ಗಮನಹರಿಸಿ
ಎದುರಿನಿಂದ ವಾಹನ ಬರುತ್ತಿರುವಾಗ ಅದರ ಹೆಡ್ ಲೈಟ್ ಗಳನ್ನು ನೇರವಾಗಿ ನೋಡುವುದನ್ನು ತಪ್ಪಿಸಿ. ಬದಲಾಗಿ ರಸ್ತೆಯ ಎಡಭಾಗದಲ್ಲಿರುವ ಬಿಳಿ ಅಥವಾ ಹಳದಿ ಅಂಚಿನ ರೇಖೆಯತ್ತ ಗಮನಹರಿಸಿ. ಇದರಿಂದ ಕಣ್ಣಿಗೆ ನೇರವಾಗಿ ಬೀಳುವ ತೀಕ್ಷ್ಣ ಬೆಳಕಿನ ಪರಿಣಾಮವನ್ನು ಕಡಿಮೆ ಮಾಡಬಹುದು. ಪಾರ್ಶ್ವ ದೃಷ್ಟಿಯ ಮೂಲಕ ರಸ್ತೆಯ ದಿಕ್ಕನ್ನು ಗಮನಿಸುತ್ತಾ ವಾಹನವನ್ನು ನಿಯಂತ್ರಿಸಲು ಸಹಾಯವಾಗುತ್ತದೆ.
ವಿಂಡ್ ಶೀಲ್ಡ್ ಮತ್ತು ಕನ್ನಡಿಗಳನ್ನು ಸ್ವಚ್ಛವಾಗಿಡಿ
ರಾತ್ರಿ ಪ್ರಯಾಣಿಸುವಾಗ ಕಾರಿನ ಮುಂಭಾಗದ ಗಾಜು (ವಿಂಡ್ ಶೀಲ್ಡ್) ಹಾಗೂ ಹಿಂಬದಿ ಕನ್ನಡಿಗಳು ಸ್ವಚ್ಛವಾಗಿರುವುದು ಬಹಳ ಮುಖ್ಯ. ಗಾಜಿನ ಮೇಲಿರುವ ಧೂಳು, ಕೊಳೆ ಮತ್ತು ಗೀರುಗಳು ಬೆಳಕನ್ನು ಚದುರಿಸಿ ದೃಷ್ಟಿಗೆ ಅಡ್ಡಿಯಾಗಬಹುದು. ಆದ್ದರಿಂದ ಪ್ರಯಾಣಕ್ಕೂ ಮುನ್ನ ಗಾಜು ಮತ್ತು ಕನ್ನಡಿಗಳನ್ನು ಸ್ವಚ್ಛಗೊಳಿಸಿಕೊಳ್ಳಿ. ಪ್ರತಿಫಲನ ಕಡಿಮೆ ಮಾಡುವ ಗುಣವಿರುವ ಕನ್ನಡಕಗಳನ್ನು ಬಳಸುವ ಬಗ್ಗೆಯೂ ಪರಿಗಣಿಸಬಹುದು.
ಕ್ಯಾಬಿನ್ ದೀಪಗಳನ್ನು ಆಫ್ ಮಾಡಿ
ರಾತ್ರಿ ವಾಹನ ಚಲಾಯಿಸುವಾಗ ಕಾರಿನ ಒಳಗಿನ ಕ್ಯಾಬಿನ್ ದೀಪಗಳನ್ನು ಆಫ್ ಮಾಡಿಡಿ. ಒಳಗಿನ ಬೆಳಕು ಚಾಲಕನ ದೃಷ್ಟಿಗೆ ಅಡ್ಡಿಯಾಗಬಹುದು. ಅಲ್ಲದೆ, ಕಾರಿನ ಒಳಭಾಗದ ಹಿಂಬದಿ ನೋಟ ಕನ್ನಡಿಯಾದ ಐಆರ್‌ವಿಎಂ (IRVM) ಅನ್ನು ನೈಟ್ ಮೋಡ್‌ಗೆ ಹೊಂದಿಸಿಕೊಳ್ಳಿ. ಇದರಿಂದ ಹಿಂಬದಿಯಿಂದ ಬರುವ ವಾಹನಗಳ ಹೆಡ್‌ಲೈಟ್ ಬೆಳಕಿನ ತೀವ್ರತೆ ಕಡಿಮೆಯಾಗುತ್ತದೆ.
ಹೈ ಬೀಮ್ ಬಳಸುವ ಚಾಲಕರಿಗೆ ಎಚ್ಚರಿಕೆ ನೀಡಿ
ಎದುರಿನಿಂದ ಬರುವ ವಾಹನದ ಚಾಲಕರು ನಿರಂತರವಾಗಿ ಹೈ ಬೀಮ್ ಬಳಸುತ್ತಿದ್ದರೆ, ಸುರಕ್ಷಿತವಾಗಿ ಮತ್ತು ಅಗತ್ಯವಿದ್ದಲ್ಲಿ ಡಿಪ್ಪರ್ ಮೂಲಕ ಅವರಿಗೆ ಸೂಚನೆ ನೀಡಬಹುದು. ಆದರೆ ಪ್ರತಿಯಾಗಿ ನೀವೂ ಹೈ ಬೀಮ್ ಬಳಸುವುದು ಅಥವಾ ಪದೇಪದೇ ಬೆಳಕು ಮಿನುಗಿಸುವುದು ಅಪಾಯಕಾರಿ. ಸಾಧ್ಯವಾದಷ್ಟು ಲೋ ಬೀಮ್‌ನಲ್ಲಿಯೇ ವಾಹನ ಚಲಾಯಿಸುವುದು ಉತ್ತಮ.
ಕಣ್ಣಿನ ಆಯಾಸವಾದರೆ ವಾಹನ ನಿಲ್ಲಿಸಿ ವಿಶ್ರಾಂತಿ ಪಡೆಯಿರಿ
ದೀರ್ಘ ಪ್ರಯಾಣದ ವೇಳೆ ಕಣ್ಣುಗಳಲ್ಲಿ ಉರಿ, ಆಯಾಸ ಅಥವಾ ದೃಷ್ಟಿ ಮಸುಕಾಗುವ ಲಕ್ಷಣಗಳು ಕಂಡುಬಂದರೆ ನಿರ್ಲಕ್ಷಿಸಬೇಡಿ. ಸುರಕ್ಷಿತ ಸ್ಥಳದಲ್ಲಿ ವಾಹನ ನಿಲ್ಲಿಸಿ ಸ್ವಲ್ಪ ಸಮಯ ವಿಶ್ರಾಂತಿ ಪಡೆಯಿರಿ. ಅಗತ್ಯವಿದ್ದರೆ ಶುದ್ಧ ನೀರಿನಿಂದ ಕಣ್ಣುಗಳನ್ನು ತೊಳೆಯಬಹುದು. ದೃಷ್ಟಿ ಸಹಜ ಸ್ಥಿತಿಗೆ ಮರಳಿದ ನಂತರವೇ ಮತ್ತೆ ಪ್ರಯಾಣ ಮುಂದುವರಿಸಿ. ದೃಷ್ಟಿ ಮಸುಕಾಗುವುದು ಮುಂದುವರಿದರೆ ಚಾಲನೆ ಮಾಡದೆ ವೈದ್ಯಕೀಯ ಸಲಹೆ ಪಡೆಯಿರಿ.
ರಾತ್ರಿ ವಾಹನ ಚಾಲನೆ ಮಾಡುವಾಗ ವೇಗ ನಿಯಂತ್ರಣ, ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು ಮತ್ತು ಎದುರಿನ ವಾಹನಗಳ ಬೆಳಕಿಗೆ ತಕ್ಕಂತೆ ಎಚ್ಚರಿಕೆ ವಹಿಸುವುದು ಅತ್ಯಗತ್ಯ. ಕೆಲವು ಕ್ಷಣಗಳ ನಿರ್ಲಕ್ಷ್ಯವೂ ದೊಡ್ಡ ಅಪಘಾತಕ್ಕೆ ಕಾರಣವಾಗಬಹುದು. ಆದ್ದರಿಂದ ಸುರಕ್ಷಿತ ಚಾಲನೆಯೇ ಮೊದಲ ಆದ್ಯತೆಯಾಗಿರಲಿ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
