ಪಾವಗಡ : ತಾಲ್ಲೂಕಿನ ಸಿ.ಕೆ.ಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊತ್ತೂರು ಮಜರೆ ಹನುಮಸಾಗರ ಗ್ರಾಮದ ಸಮೀಪ ಶನಿವಾರ ಮಧ್ಯಾಹ್ನ ಸುಮಾರು 1.30ರ ವೇಳೆಯಲ್ಲಿ ಸಂಭವಿಸಿದ ವಿದ್ಯುತ್ ಅವಘಡದಿಂದ ರೈತನ ತೋಟಕ್ಕೆ ಬೆಂಕಿ ತಗುಲಿ, 60ಕ್ಕೂ ಹೆಚ್ಚು ತೆಂಗಿನ ಮರಗಳು ಸೇರಿದಂತೆ ಹಲವು ಬೆಲೆಬಾಳುವ ಮರಗಿಡಗಳು ಸುಟ್ಟು ಕರಕಲಾಗಿರುವ ಘಟನೆ ನಡೆದಿದೆ.
ತೋಟದ ಪಕ್ಕದಲ್ಲಿ ಹಾದುಹೋಗಿರುವ ವಿದ್ಯುತ್ ಮಾರ್ಗದ ಡಬಲ್ ಪೋಲ್ ಸ್ಟ್ರಕ್ಚರ್ ನಲ್ಲಿರುವ ಜಿಒಎಸ್ (GOS) ಸ್ವಿಚ್ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿರುವುದೇ ಬೆಂಕಿ ಅವಘಡಕ್ಕೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಬೆಂಕಿಯ ತೀವ್ರತೆಗೆ ತೋಟದಲ್ಲಿದ್ದ ಸುಮಾರು 60ಕ್ಕೂ ಹೆಚ್ಚು ತೆಂಗಿನ ಮರಗಳು, ಹಲಸು, ಶ್ರೀಗಂಧ, ಮಹಾಗಣಿ ಸೇರಿದಂತೆ ಹಲವು ಮರಗಿಡಗಳು ಸುಟ್ಟು ನಾಶವಾಗಿವೆ. ಅಲ್ಲದೆ, ನೀರಾವರಿಗೆ ಅಳವಡಿಸಿದ್ದ ಲ್ಯಾಟರಲ್ ಪೈಪ್ ಕೂಡ ಬೆಂಕಿಗೆ ಆಹುತಿಯಾಗಿದ್ದು, ರೈತ ಚಿಕ್ಕರಂಗಪ್ಪ ಅವರಿಗೆ ಅಪಾರ ಆರ್ಥಿಕ ನಷ್ಟ ಸಂಭವಿಸಿದೆ.
ಈ ಕುರಿತು ಮಾತನಾಡಿದ ರೈತ ಚಿಕ್ಕರಂಗಪ್ಪ, ವರ್ಷಗಳ ಕಾಲ ಕಷ್ಟಪಟ್ಟು ಬೆಳೆಸಿದ್ದ ತೆಂಗಿನ ಮರಗಳು ಹಾಗೂ ಬೆಲೆಬಾಳುವ ಗಿಡಮರಗಳು ವಿದ್ಯುತ್ ಅವಘಡದಿಂದ ನಾಶವಾಗಿವೆ. ತೋಟದ ಪಕ್ಕದಲ್ಲೇ ವಿದ್ಯುತ್ ಮಾರ್ಗ ಹಾದುಹೋಗಿರುವುದರಿಂದ ಇಂತಹ ಅನಾಹುತ ಸಂಭವಿಸಿದೆ. ಈಗಾಗಲೇ ಬೆಳೆಸಿದ್ದ ಮರಗಿಡಗಳ ನಷ್ಟದ ಜೊತೆಗೆ ನೀರಾವರಿ ಪೈಪ್ ಕೂಡ ಸುಟ್ಟುಹೋಗಿದ್ದು, ಜೀವನಾಧಾರವಾಗಿದ್ದ ತೋಟಕ್ಕೆ ದೊಡ್ಡ ಹೊಡೆತ ಬಿದ್ದಿದೆ ಎಂದು ನೋವು ತೋಡಿಕೊಂಡರು.
ಅಧಿಕಾರಿಗಳಿಗೆ ರೈತನ ಆಗ್ರಹ:
ಬೆಸ್ಕಾಂ ಇಲಾಖೆಯ ಜೆ.ಇ. ಚೌಡಪ್ಪ ಅವರು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ತೋಟದ ಪಕ್ಕದಲ್ಲಿರುವ ಅಪಾಯಕಾರಿ ವಿದ್ಯುತ್ ಮಾರ್ಗವನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು. ಬೆಂಕಿಯಿಂದ ನಾಶವಾಗಿರುವ ಮರಗಿಡಗಳು ಹಾಗೂ ಲ್ಯಾಟರಲ್ ಪೈಪ್ ಗೆ ಸೂಕ್ತ ನಷ್ಟ ಪರಿಹಾರ ಒದಗಿಸಬೇಕು. ಮುಂದಿನ ದಿನಗಳಲ್ಲಿ ಇಂತಹ ಅವಘಡಗಳು ಮರುಕಳಿಸದಂತೆ ವಿದ್ಯುತ್ ಇಲಾಖೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ರೈತ ಚಿಕ್ಕರಂಗಪ್ಪ ಒತ್ತಾಯಿಸಿದ್ದಾರೆ.
ವಿದ್ಯುತ್ ಇಲಾಖೆಯ ನಿರ್ಲಕ್ಷ್ಯದಿಂದ ಇಂತಹ ಅವಘಡ ಸಂಭವಿಸಿದೆಯೇ ಎಂಬುದರ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಿ, ನಷ್ಟ ಅನುಭವಿಸಿರುವ ರೈತನಿಗೆ ನ್ಯಾಯಯುತ ಪರಿಹಾರ ಒದಗಿಸಬೇಕೆಂಬುದು ಸ್ಥಳೀಯರ ಒತ್ತಾಯವಾಗಿದೆ.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
