ಮಧುಗಿರಿ: ಗ್ರಾಮೀಣ ರಂಗಭೂಮಿ ಪರಂಪರೆಯನ್ನು ಉಳಿಸಿ ಬೆಳೆಸುವ ಹಾಗೂ ಮಹಿಳಾ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ತಾಲ್ಲೂಕಿನ ಕಸಬಾ ಹೋಬಳಿಯ ಸಿದ್ದಾಪುರ ಗ್ರಾಮದಲ್ಲಿ ‘ಸಂಕ್ಷಿಪ್ತ ಮಹಾಭಾರತ — ಭೀಮ–ದುರ್ಯೋಧನರ ಗದಾಯುದ್ಧ’ ಎಂಬ ಪೌರಾಣಿಕ ನಾಟಕ ಪ್ರದರ್ಶನವನ್ನು ಆಯೋಜಿಸಲಾಗಿದೆ.
ಗ್ರಾಮದ ಶ್ರೀ ವೀರಾಂಜನೇಯಸ್ವಾಮಿ ಕೃಪಾ ಪೋಷಿತ ಮಹಿಳಾ ನಾಟಕ ಮಂಡಳಿ ವತಿಯಿಂದ ನವೆಂಬರ್ 15, ಭಾನುವಾರ ರಾತ್ರಿ 8:00 ಗಂಟೆಗೆ ಈ ಅದ್ಧೂರಿ ರಂಗ ಪ್ರಯೋಗ ನಡೆಯಲಿದೆ.
ಈ ನಾಟಕದ ಅತ್ಯಂತ ವಿಶೇಷ ಸಂಗತಿಯೆಂದರೆ, ಮಹಾಭಾರತದ ಎಲ್ಲಾ ಪ್ರಮುಖ ಪೌರಾಣಿಕ ಪಾತ್ರಗಳಿಗೆ ಗ್ರಾಮೀಣ ಭಾಗದ ಮಹಿಳಾ ಕಲಾವಿದರೇ ಬಣ್ಣ ಹಚ್ಚಲಿದ್ದಾರೆ. ಪ್ರಮುಖವಾಗಿ ‘ಸವ್ಯಸಾಚಿ 2ನೇ ಅರ್ಜುನ’ ಹಾಗೂ ‘ನರ್ತಕಿ’ ಪಾತ್ರದಲ್ಲಿ ಪುಷ್ಪಲತಾ ಕಾರ್ತಿಕ್ ಅವರು ಅಭಿನಯಿಸಲಿದ್ದು, ಭೀಮ, ದುರ್ಯೋಧನ, ದ್ರೌಪದಿ, ಸಹದೇವ ಸೇರಿದಂತೆ ಹಲವು ಪ್ರಮುಖ ಪಾತ್ರಗಳಿಗೆ ಮಹಿಳಾ ಕಲಾವಿದರು ಜೀವ ತುಂಬಲಿದ್ದಾರೆ.
ನಾಟಕಕ್ಕೆ ಕೋಡಿಹಳ್ಳಿ ಶಿವಸ್ಥಾನದ ಮಠದ ಹಾರ್ಮೋನಿಯಂ ಮಾಸ್ಟರ್ ಶ್ರೀ ವೀರಭದ್ರಯ್ಯ ಅವರು ನಿರ್ದೇಶನ ಹಾಗೂ ಸಂಗೀತ ಸಂಯೋಜನೆ ಮಾಡಿದ್ದಾರೆ. ಪ್ರದರ್ಶನಕ್ಕೆ ಮತ್ತಷ್ಟು ಮೆರುಗು ನೀಡಲು ತುಮಕೂರಿನ ಹೆಸರಾಂತ ‘ಶ್ರೀ ಬಾಲವೀರೇಶ್ವರ ಎಲ್.ಇ.ಡಿ. ಡ್ರಾಮಾ ಸೀನರಿ’ ವತಿಯಿಂದ ಆಕರ್ಷಕ ದೃಶ್ಯಾವಳಿ ಹಾಗೂ ರಂಗಸಜ್ಜಿಕೆ ಇರಲಿದೆ. ‘ದುರ್ಗಾ ಮ್ಯೂಸಿಕ್’ ತಂಡವು ವಾದ್ಯಗೋಷ್ಠಿ, ರಂಗಾಲಂಕಾರ ಹಾಗೂ ವಿದ್ಯುತ್ ದೀಪಾಲಂಕಾರದ ಜವಾಬ್ದಾರಿ ಹೊತ್ತಿದೆ.
ಈ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸ್ಥಳೀಯ ಜನಪ್ರತಿನಿಧಿಗಳು, ಮಾಜಿ ಶಾಸಕರು, ಹಿರಿಯ ರಂಗಭೂಮಿ ಕಲಾವಿದರು ಹಾಗೂ ಗ್ರಾಮದ ಮುಖಂಡರು ಸಾಕ್ಷಿಯಾಗಲಿದ್ದಾರೆ. ಗ್ರಾಮೀಣ ಮಹಿಳಾ ಕಲಾವಿದರ ಪ್ರತಿಭೆಯನ್ನು ಪ್ರೋತ್ಸಾಹಿಸಲು ಕಲಾಭಿಮಾನಿಗಳು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನಾಟಕವನ್ನು ಯಶಸ್ವಿಗೊಳಿಸಬೇಕೆಂದು ಮಂಡಳಿಯ ಪದಾಧಿಕಾರಿಗಳು ಹಾಗೂ ಸಿದ್ದಾಪುರ ಗ್ರಾಮಸ್ಥರು ಪ್ರಕಟಣೆಯಲ್ಲಿ ಕೋರಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
