ಕುಡಿದವರು ಯಾವಾಗಲೂ ಸತ್ಯವನ್ನೇ ಹೇಳುತ್ತಾರೆ ಎಂಬ ಮಾತು ಸಮಾಜದಲ್ಲಿ ಸಾಕಷ್ಟು ಪ್ರಚಲಿತದಲ್ಲಿದೆ. ಆದರೆ ಈ ನಂಬಿಕೆ ಸಂಪೂರ್ಣ ಸತ್ಯವಲ್ಲ. ಮದ್ಯವು ವ್ಯಕ್ತಿಯನ್ನು ಸತ್ಯ ಹೇಳಿಸುವ ಯಾವುದೇ ಮಾಂತ್ರಿಕ ಔಷಧವಲ್ಲ. ಬದಲಾಗಿ, ಮೆದುಳಿನ ನಿಯಂತ್ರಣ ಸಾಮರ್ಥ್ಯವನ್ನು ಕುಗ್ಗಿಸಿ, ವ್ಯಕ್ತಿಯ ಮನಸ್ಸಿನಲ್ಲಿರುವ ಭಾವನೆಗಳು ಮತ್ತು ಆಲೋಚನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸುವಂತೆ ಮಾಡಬಹುದು ಅಷ್ಟೇ.
ಮನೋವಿಜ್ಞಾನ ಮತ್ತು ನರವಿಜ್ಞಾನದ ಪ್ರಕಾರ, ಮದ್ಯ ಸೇವಿಸಿದಾಗ ವ್ಯಕ್ತಿಯ ಆಲೋಚನೆ, ಮಾತು ಹಾಗೂ ವರ್ತನೆಯಲ್ಲಿ ಹಲವು ಬದಲಾವಣೆಗಳು ಉಂಟಾಗುತ್ತವೆ. ಹಾಗಾದರೆ ಕುಡಿದಾಗ ವ್ಯಕ್ತಿ ಮಾತನಾಡುವ ಪ್ರತಿಯೊಂದು ಮಾತನ್ನೂ ಸತ್ಯವೆಂದು ಪರಿಗಣಿಸಬಹುದೇ? ಈ ಕುರಿತು ಕೆಲವು ಆಸಕ್ತಿದಾಯಕ ವಿಚಾರಗಳು ಇಲ್ಲಿವೆ.
ಮೆದುಳಿನ ನಿಯಂತ್ರಣ ಸಾಮರ್ಥ್ಯ ಕುಗ್ಗುತ್ತದೆ
ಮೆದುಳಿನ ಪ್ರೀಫ್ರಂಟಲ್ ಕಾರ್ಟೆಕ್ಸ್ ಭಾಗವು ನಿರ್ಧಾರ ತೆಗೆದುಕೊಳ್ಳುವುದು, ಭಾವನೆಗಳನ್ನು ನಿಯಂತ್ರಿಸುವುದು ಮತ್ತು ಮಾತನಾಡುವ ಮೊದಲು ಪರಿಣಾಮಗಳ ಬಗ್ಗೆ ಯೋಚಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಮದ್ಯ ಸೇವನೆಯಿಂದ ಈ ಭಾಗದ ಕಾರ್ಯಕ್ಷಮತೆ ಕುಗ್ಗುತ್ತದೆ. ಪರಿಣಾಮವಾಗಿ, ಸಾಮಾನ್ಯ ಸ್ಥಿತಿಯಲ್ಲಿ ಹೇಳಲು ಹಿಂಜರಿಯುವ ಮಾತುಗಳು, ಮುಚ್ಚಿಟ್ಟ ಭಾವನೆಗಳು ಅಥವಾ ಅಸಮಾಧಾನಗಳು ಯಾವುದೇ ಮುಲಾಜಿಲ್ಲದೆ ಹೊರಬರಬಹುದು. ಆದರೆ ಹೀಗೆ ಹೊರಬಂದ ಮಾತುಗಳೆಲ್ಲವೂ ಸತ್ಯವಾಗಿರುತ್ತವೆ ಎಂಬುದಕ್ಕೆ ಯಾವುದೇ ಖಚಿತತೆ ಇಲ್ಲ.
ಆಲ್ಕೋಹಾಲ್ ಮಯೋಪಿಯಾ ಸಿದ್ಧಾಂತ ಹೇಳುವುದೇನು?
ಮನೋವಿಜ್ಞಾನದಲ್ಲಿರುವ ‘ಆಲ್ಕೋಹಾಲ್ ಮಯೋಪಿಯಾ’ ಸಿದ್ಧಾಂತದ ಪ್ರಕಾರ, ಮದ್ಯದ ಅಮಲಿನಲ್ಲಿ ವ್ಯಕ್ತಿಯ ಗಮನ ಮತ್ತು ಆಲೋಚನಾ ವ್ಯಾಪ್ತಿ ಸೀಮಿತವಾಗುತ್ತದೆ. ಆ ಕ್ಷಣದಲ್ಲಿ ಕಣ್ಣಿಗೆ ಕಾಣುವ ಅಥವಾ ಮನಸ್ಸಿಗೆ ಹೆಚ್ಚು ಪ್ರಭಾವ ಬೀರುವ ಸಂಗತಿಗಳಿಗಷ್ಟೇ ವ್ಯಕ್ತಿ ಹೆಚ್ಚಿನ ಮಹತ್ವ ನೀಡುತ್ತಾನೆ. ಮಾತಿನ ಪರಿಣಾಮ, ಭವಿಷ್ಯದ ಸಮಸ್ಯೆಗಳು ಹಾಗೂ ಇತರರ ಭಾವನೆಗಳ ಬಗ್ಗೆ ಯೋಚಿಸುವ ಸಾಮರ್ಥ್ಯ ಕಡಿಮೆಯಾಗಬಹುದು.
ಇಂತಹ ಸಂದರ್ಭದಲ್ಲಿ ವ್ಯಕ್ತಿ ತನ್ನ ಮನಸ್ಸಿನಲ್ಲಿರುವುದನ್ನು ನೇರವಾಗಿ ಹೇಳಬಹುದು. ಆದರೆ ಸುಳ್ಳು ಹೇಳುವ ಸಾಮರ್ಥ್ಯ ಸಂಪೂರ್ಣ ನಾಶವಾಗುತ್ತದೆ ಎಂದರ್ಥವಲ್ಲ. ಮದ್ಯದ ಅಮಲಿನಲ್ಲಿಯೂ ವ್ಯಕ್ತಿ ಸುಳ್ಳು ಹೇಳಬಹುದು ಅಥವಾ ಸಂದರ್ಭಕ್ಕೆ ತಕ್ಕಂತೆ ಕಥೆಗಳನ್ನು ಕಟ್ಟಬಹುದು.
ಕುಡಿದವರ ಮಾತುಗಳೆಲ್ಲ ನಂಬಲು ಸಾಧ್ಯವಿಲ್ಲವೇಕೆ?
ಮದ್ಯ ಸೇವನೆಯಿಂದ ಭಾವನೆಗಳ ತೀವ್ರತೆ ಹೆಚ್ಚಾಗಬಹುದು. ಪ್ರೀತಿ, ಕೋಪ, ದುಃಖ, ಅಸಮಾಧಾನ ಅಥವಾ ಸಂತೋಷವನ್ನು ವ್ಯಕ್ತಪಡಿಸುವ ರೀತಿ ಸಾಮಾನ್ಯ ಸ್ಥಿತಿಗಿಂತ ಭಿನ್ನವಾಗಿರಬಹುದು. ಹೀಗಾಗಿ ಅಮಲಿನಲ್ಲಿ ವ್ಯಕ್ತಪಡಿಸುವ ಭಾವನೆಗಳು ಆ ಕ್ಷಣದ ಮನಸ್ಥಿತಿಯ ಪರಿಣಾಮವೂ ಆಗಿರಬಹುದು.
ಕೆಲವೊಮ್ಮೆ ವ್ಯಕ್ತಿಗಳು ತಮ್ಮ ತಪ್ಪುಗಳನ್ನು ಮುಚ್ಚಿಡಲು ಸುಳ್ಳು ಹೇಳಬಹುದು. ಅತಿಯಾದ ಮದ್ಯ ಸೇವನೆಯಿಂದ ನೆನಪಿನ ಮೇಲೆ ಪರಿಣಾಮ ಬೀರಬಹುದು. ಕೆಲವು ಸಂದರ್ಭಗಳಲ್ಲಿ ‘ಬ್ಲ್ಯಾಕ್ಔಟ್’ ಉಂಟಾಗಿ, ನಡೆದ ಘಟನೆಗಳ ನೆನಪೇ ಉಳಿಯದಿರಬಹುದು. ಇಂತಹ ಸಂದರ್ಭದಲ್ಲಿ ವ್ಯಕ್ತಿ ತನ್ನ ಕಲ್ಪನೆ ಅಥವಾ ಅಪೂರ್ಣ ನೆನಪುಗಳನ್ನೇ ನಿಜವೆಂದು ಭಾವಿಸಿ ಮಾತನಾಡುವ ಸಾಧ್ಯತೆಯೂ ಇದೆ.ಇನ್ನು ಮದ್ಯದ ಅಮಲಿನಲ್ಲಿ ವ್ಯಕ್ತಿಗೆ ಅತಿಯಾದ ಆತ್ಮವಿಶ್ವಾಸ ಮೂಡಬಹುದು. ಸಾಮಾನ್ಯ ಸ್ಥಿತಿಯಲ್ಲಿ ಮಾಡಲು ಸಾಧ್ಯವಿಲ್ಲದ ಕೆಲಸಗಳನ್ನೂ ಸುಲಭವಾಗಿ ಮಾಡುತ್ತೇನೆ ಎಂದು ಭರವಸೆ ನೀಡಬಹುದು. ಆದರೆ ಅಮಲು ಇಳಿದ ಬಳಿಕ ಆ ಮಾತುಗಳನ್ನು ಕಾರ್ಯರೂಪಕ್ಕೆ ತರುವ ಸಾಮರ್ಥ್ಯ ಅಥವಾ ಆಸಕ್ತಿ ಇರದೇ ಇರಬಹುದು.
ಅಮಲಿನಲ್ಲಿ ಆಡಿದ ಮಾತುಗಳಿಗೆ ಎಷ್ಟು ಮಹತ್ವ ನೀಡಬೇಕು?
ಕುಡಿದಾಗ ವ್ಯಕ್ತಿ ಮಾತನಾಡುವ ಮಾತುಗಳು ಕೆಲವೊಮ್ಮೆ ಅವರ ಮನಸ್ಸಿನಲ್ಲಿರುವ ನಿಜವಾದ ಭಾವನೆಗಳನ್ನು ಪ್ರತಿಬಿಂಬಿಸಬಹುದು. ಇನ್ನು ಕೆಲವು ಸಂದರ್ಭಗಳಲ್ಲಿ ಅವು ಕೇವಲ ಆ ಕ್ಷಣದ ಭಾವನಾತ್ಮಕ ಪ್ರತಿಕ್ರಿಯೆಯಾಗಿರಬಹುದು. ಆದ್ದರಿಂದ ಮದ್ಯದ ಅಮಲಿನಲ್ಲಿ ಆಡಿದ ಮಾತುಗಳನ್ನೇ ಆಧರಿಸಿ ವ್ಯಕ್ತಿಯ ವ್ಯಕ್ತಿತ್ವ, ಪ್ರೀತಿ ಅಥವಾ ಉದ್ದೇಶಗಳನ್ನು ನಿರ್ಧರಿಸುವುದು ಸರಿಯಲ್ಲ.
ಮದ್ಯವು ಸತ್ಯವನ್ನು ಹೊರತರುವ ಸಾಧನವಲ್ಲ; ಅದು ವ್ಯಕ್ತಿಯ ಆತ್ಮನಿಯಂತ್ರಣ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತದೆ. ಹೀಗಾಗಿ ಕುಡಿದಾಗ ಆಡಿದ ಮಾತುಗಳಿಗಿಂತಲೂ, ವ್ಯಕ್ತಿ ಸಹಜ ಸ್ಥಿತಿಯಲ್ಲಿರುವಾಗ ನಡೆದುಕೊಳ್ಳುವ ರೀತಿ ಮತ್ತು ಅವರ ನಿರಂತರ ವರ್ತನೆಗೆ ಹೆಚ್ಚಿನ ಮಹತ್ವ ನೀಡುವುದು ಜಾಣತನ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
