ಅರಸೀಕೆರೆ / ಮುದುಡಿ: ಅರಸೀಕೆರೆ ತಾಲೂಕಿನ ಗಂಡಸಿ ಹೋಬಳಿಯ ಮುದುಡಿ ಗ್ರಾಮದ ಐತಿಹಾಸಿಕ ಕೋಟೆ ಮಾರಮ್ಮನ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ 1.50 ಲಕ್ಷ ರೂಪಾಯಿ ಅನುದಾನ ಬಿಡುಗಡೆಯಾಗಿದ್ದು, ಅದರ ಚೆಕ್ಅನ್ನು ದೇವಸ್ಥಾನ ಸಮಿತಿಗೆ ಅಧಿಕೃತವಾಗಿ ಹಸ್ತಾಂತರಿಸಲಾಯಿತು.
ಕ್ಷೇತ್ರದ ಯೋಜನಾಧಿಕಾರಿ ಅಕ್ಷಿತಾ ರೈ ಅವರು ದೇವಸ್ಥಾನ ಸಮಿತಿಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಖಜಾಂಚಿ ಸಿದ್ದೇಶ್ ಅವರ ಸಮ್ಮುಖದಲ್ಲಿ ಈ ಧನಸಹಾಯದ ಚೆಕ್ ಅನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಯೋಜನಾಧಿಕಾರಿ ಅಕ್ಷಿತಾ ರೈ, “ಶ್ರೀ ಕ್ಷೇತ್ರ ಧರ್ಮಸ್ಥಳವು ಧಾರ್ಮಿಕ ಕೇಂದ್ರ ಮಾತ್ರವಲ್ಲದೆ ಸಮಾಜಮುಖಿ ಕಾರ್ಯಗಳ ಮೂಲಕ ನೊಂದವರ ಕಣ್ಣೀರು ಒರೆಸುವ ಪುಣ್ಯಕ್ಷೇತ್ರವಾಗಿದೆ. ದೇವಸ್ಥಾನಗಳ ಜೀರ್ಣೋದ್ಧಾರ ಮಾತ್ರವಲ್ಲದೆ ಕೆರೆಗಳ ಹೂಳೆತ್ತುವುದು, ರುದ್ರಭೂಮಿ ಅಭಿವೃದ್ಧಿ, ಬಡವರಿಗೆ ವಾತ್ಸಲ್ಯ ಮನೆಗಳ ನಿರ್ಮಾಣ, ರೈತರಿಗೆ ಆಧುನಿಕ ಕೃಷಿ ಯಂತ್ರೋಪಕರಣಗಳ ವಿತರಣೆ, ಕೃಷಿ ತರಬೇತಿ ಮತ್ತು ಹೈನುಗಾರಿಕೆಗೆ ಆರ್ಥಿಕ ಬೆಂಬಲ ಸೇರಿದಂತೆ ಹತ್ತು ಹಲವು ಜನಪರ ಯೋಜನೆಗಳನ್ನು ಸಮರ್ಥವಾಗಿ ಅನುಷ್ಠಾನಗೊಳಿಸುತ್ತಿದೆ. ಈ ಎಲ್ಲ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುವಂತೆ ಮಾಡುವುದು ಯೋಜನೆಯ ಮೂಲ ಉದ್ದೇಶ,” ಎಂದು ತಿಳಿಸಿದರು.
ಚೆಕ್ ಸ್ವೀಕರಿಸಿ ಮಾತನಾಡಿದ ಸಮಿತಿಯ ಪದಾಧಿಕಾರಿಗಳು ಹಾಗೂ ಗ್ರಾಮದ ಮುಖಂಡರು, “ಕಷ್ಟದ ಸಮಯದಲ್ಲಿ ನೆರವಾಗುತ್ತಾ ಬಂದಿರುವ ಧರ್ಮಸ್ಥಳ ಕ್ಷೇತ್ರವು ದುರ್ಬಲ ವರ್ಗದವರ ಬದುಕಿಗೆ ದಾರಿದೀಪವಾಗಿದೆ. ನಮ್ಮ ಗ್ರಾಮದ ದೇವಸ್ಥಾನದ ಪುನರುತ್ಥಾನಕ್ಕೆ ನೆರವು ನೀಡಿದ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಗೆ ಸಮಸ್ತ ಮುದುಡಿ ಗ್ರಾಮಸ್ಥರ ಪರವಾಗಿ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ,” ಎಂದು ಸಂತಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ದೇವಸ್ಥಾನ ಸಮಿತಿಯ ಪದಾಧಿಕಾರಿಗಳು, ಗ್ರಾಮದ ಹಿರಿಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
