ಕಮಲನಗರ (ಬೀದರ್): ತಾಲೂಕಿನ ಸೋನಾಳ ಗ್ರಾಮ ಪಂಚಾಯತಿಯಲ್ಲಿ 2026-27ನೇ ಸಾಲಿನ ಸಾಮಾಜಿಕ ಪರಿಶೋಧನೆ, ನರೇಗಾ ಯೋಜನೆ ಹಾಗೂ 15ನೇ ಹಣಕಾಸು ಮತ್ತು ರಾಜ್ಯ ಹಣಕಾಸು ಆಯೋಗದ ಅನುದಾನದ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮ ಸಭೆಯನ್ನು ಗ್ರಾಮದ ಹಿರಿಯ ನಾಗರಿಕರಾದ ಮಾಧವರಾವ ಭೀಮರಾವ ಅವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆಸಲಾಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಾಮಾಜಿಕ ಪರಿಶೋಧನೆಯ ತಾಲೂಕು ಸಂಪನ್ಮೂಲ ವ್ಯಕ್ತಿ ಸೂರ್ಯಕಾಂತ ಎಕಲಾರ ಅವರು, “ಗ್ರಾಮೀಣ ಭಾಗದ ಜನರು ಉದ್ಯೋಗ ಅರಸಿ ನಗರಗಳಿಗೆ ವಲಸೆ ಹೋಗದೇ ನಿಮ್ಮ ಸ್ವಂತ ಊರಿನಲ್ಲೇ ಉಳಿದು ಕೆಲಸ ನಿರ್ವಹಿಸಿ. ತೆರೆದ ಬಾವಿ, ಗಿಡ ನೆಡುವುದು, ದನದ ಕೊಟ್ಟಿಗೆ ಹಾಗೂ ಜಮೀನಿಗೆ ಸಂಬಂಧಪಟ್ಟ ವಿವಿಧ ವೈಯಕ್ತಿಕ ಕಾಮಗಾರಿಗಳ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಿ. ಜೊತೆಗೆ ಸಮುದಾಯ ಕಾಮಗಾರಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಆರ್ಥಿಕವಾಗಿ ಸಬಲರಾಗಿ,” ಎಂದು ಕರೆ ನೀಡಿದರು.
ಮುಂದುವರಿದು ಮಾತನಾಡಿದ ಅವರು, ಈ ಎಲ್ಲಾ ಯೋಜನೆಗಳ ಲಾಭ ಪಡೆಯಲು ಪ್ರತಿಯೊಬ್ಬರೂ ಅಗತ್ಯ ದಾಖಲೆಗಳನ್ನು ಗ್ರಾಮ ಪಂಚಾಯತಿಗೆ ಸಲ್ಲಿಸಿ ಉದ್ಯೋಗ ಚೀಟಿ (ಜಾಬ್ ಕಾರ್ಡ್) ಪಡೆದುಕೊಳ್ಳಬೇಕು ಎಂದು ತಿಳಿಸಿದರು. 2026-27ನೇ ಸಾಲಿನ ನರೇಗಾ, 15ನೇ ಹಣಕಾಸು ಹಾಗೂ ರಾಜ್ಯ ಹಣಕಾಸು ಆಯೋಗದ ಅನುದಾನಿತ ಕಾಮಗಾರಿಗಳು ಮತ್ತು ಇಲಾಖಾವಾರು ಯೋಜನಾ ವರದಿಗಳನ್ನು ಸಭೆಯ ಮುಂದೆ ಮಂಡಿಸಲಾಯಿತು.
ಇದೇ ವೇಳೆ ಜುಲೈ 01ರಿಂದ ಜಾರಿಗೆ ಬಂದಿರುವ ‘ವಿಕಸಿತ ಭಾರತ-ಗ್ಯಾರಂಟಿ ಫಾರ್ ರೋಜಗಾರ ಅಂಡ್ ಆಜೀವಿಕ ಮಿಷನ್-ಗ್ರಾಮೀಣ’ (ವಿಬಿ-ಜಿ ರಾಮ್ ಜಿ) ಯೋಜನೆಯ ಉದ್ದೇಶ ಹಾಗೂ ಸದುದ್ದೇಶ ಈಡೇರಿಕೆಯ ಕುರಿತು ವಿವರ ನೀಡಿದರು. ಈ ಯೋಜನೆಯಡಿ ಪ್ರತಿ ಕುಟುಂಬಕ್ಕೆ ವರ್ಷಕ್ಕೆ 125 ದಿನಗಳ ಕಡ್ಡಾಯ ಕೂಲಿ ಕೆಲಸ ದೊರೆಯಲಿದ್ದು, ಮಹಿಳೆ ಮತ್ತು ಪುರುಷ ಕಾರ್ಮಿಕರಿಗೆ ದಿನಕ್ಕೆ ರೂ. 382 ಸಮಾನ ಕೂಲಿ ನಿಗದಿಪಡಿಸಲಾಗಿದೆ.
ಸಭೆಯಲ್ಲಿ ಗ್ರಾಮಸ್ಥರು ಸಾಮಾಜಿಕ ಪರಿಶೋಧನೆಯ ವರದಿಯ ಕುರಿತು ವಿಸ್ತೃತವಾಗಿ ಚರ್ಚಿಸಿದರು. ಸಭೆಯು ನಾಡಗೀತೆಯೊಂದಿಗೆ ಆರಂಭವಾಗಿ, ಕೊನೆಯಲ್ಲಿ ರಾಷ್ಟ್ರಗೀತೆಯೊಂದಿಗೆ ಮುಕ್ತಾಯಗೊಂಡಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಮಾಜಿ ಸದಸ್ಯರು, ಸಿಬ್ಬಂದಿಗಳು, ಕೂಲಿಕಾರರು, ಗ್ರಾಮಸ್ಥರು ಹಾಗೂ ಸಾಮಾಜಿಕ ಪರಿಶೋಧನಾ ತಂಡದ ಶೇಷರಾವ್ ವಿಠಲ್, ಸುನಿಲ್ ವಿಠಲ್, ಸಂಗೀತಾ ನರ್ಸಿಂಗ್ ಮತ್ತು ಪ್ರಶಾಂತ್ ಮಣಿಗೆಂಪುರೆ ಉಪಸ್ಥಿತರಿದ್ದರು.
ವರದಿ: ಅರವಿಂದ ಮಲ್ಲೀಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
