ಮಧುಗಿರಿ: ಪಟ್ಟಣದಲ್ಲಿ ಈಗಾಗಲೇ ನಾಲ್ಕೂ ದಿಕ್ಕುಗಳಲ್ಲಿ ಬಾರ್ ಗಳ ಸಂಖ್ಯೆ ಹೆಚ್ಚಾಗಿದ್ದು, ಇದರಿಂದ ರಸ್ತೆ ಅಪಘಾತಗಳು ಸೇರಿದಂತೆ ವಿವಿಧ ಸಾಮಾಜಿಕ ಸಮಸ್ಯೆಗಳು ಉಂಟಾಗುತ್ತಿವೆ. ಇಂತಹ ಸಂದರ್ಭದಲ್ಲಿ ಮತ್ತೆ ಹೊಸ ಬಾರ್ಗಳಿಗೆ ಅನುಮತಿ ನೀಡಲು ಮುಂದಾಗಿರುವುದು ಸರಿಯಲ್ಲ. ಪ್ರಸ್ತಾವಿತ ಹೊಸ ಬಾರ್ ಗಳಿಗೆ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹಾಗೂ ತಾಲ್ಲೂಕು ರೆಡ್ಡಿ ಜನಸಂಘದ ಅಧ್ಯಕ್ಷ ಡಾ. ಕೆ.ಎಸ್. ಪಾಂಡುರಂಗಾರೆಡ್ಡಿ ಆಗ್ರಹಿಸಿದ್ದಾರೆ.
ಈ ಸಂಬಂಧ ಉಪವಿಭಾಗಾಧಿಕಾರಿಗಳು ಹಾಗೂ ಜಿಲ್ಲಾ ಅಬಕಾರಿ ಆಯುಕ್ತರಿಗೆ ಮನವಿ ಸಲ್ಲಿಸಿರುವ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಪೂಜ್ಯ ಡಾ. ವೀರೇಂದ್ರ ಹೆಗ್ಗಡೆಯವರು ಎರಡು ಸಾವಿರಕ್ಕೂ ಹೆಚ್ಚು ಮದ್ಯವರ್ಜನ ಶಿಬಿರಗಳನ್ನು ಆಯೋಜಿಸಿ, ಮದ್ಯಪಾನದ ದುಷ್ಪರಿಣಾಮಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಮದ್ಯಮುಕ್ತ ಸಮಾಜ ನಿರ್ಮಾಣದ ಆಶಯದೊಂದಿಗೆ ಇಂತಹ ಸಮಾಜಮುಖಿ ಕಾರ್ಯಗಳು ನಡೆಯುತ್ತಿರುವುದು ಶ್ಲಾಘನೀಯ ಎಂದರು.
ಮಹಾತ್ಮ ಗಾಂಧೀಜಿಯವರ ಮದ್ಯಪಾನ ರಹಿತ ಸಮಾಜದ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಸರ್ಕಾರವೂ ಕಾರ್ಯಪ್ರವೃತ್ತವಾಗಬೇಕು. ಮಧುಗಿರಿ ಪಟ್ಟಣದ ಅಭಿವೃದ್ಧಿಗೆ ಹಾಗೂ ಯುವಕರಿಗೆ ಉದ್ಯೋಗ ಕಲ್ಪಿಸುವ ಕೈಗಾರಿಕೆಗಳ ಸ್ಥಾಪನೆಗೆ ಆದ್ಯತೆ ನೀಡಬೇಕೇ ಹೊರತು ಹೊಸ ಮದ್ಯದಂಗಡಿಗಳಿಗೆ ಅವಕಾಶ ಕಲ್ಪಿಸುವುದು ಸೂಕ್ತವಲ್ಲ. ಆದ್ದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಪ್ರಸ್ತಾವಿತ ಹೊಸ ಬಾರ್ ಗಳಿಗೆ ತಕ್ಷಣ ಅನುಮತಿ ನಿರಾಕರಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಮಂಜುನಾಥ್, ಯುವ ಮೋರ್ಚಾ ಅಧ್ಯಕ್ಷ ಚೇತನ್, ಕಾರ್ಯದರ್ಶಿ ಕೃಷ್ಣಮೂರ್ತಿ, ಗಂಗಾಧರ್, ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಅಶ್ವತ್ಥರೆಡ್ಡಿ, ಕೃಷ್ಣ ಬಂಗಾರಿ, ಸದಾಶಿವಯ್ಯ, ಕೃಷ್ಣಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
