ಮಧುಗಿರಿ : ತಾಲೂಕಿನ ಕೊಡಿಗೇನಹಳ್ಳಿ ಹೋಬಳಿಯ ತೆರೆಯೂರು ಗ್ರಾಮದ ರೈತರ ಅಡಿಕೆ ತೋಟಗಳಿಗೆ ಮಧುಗಿರಿ ತೋಟಗಾರಿಕೆ ಇಲಾಖೆಯ ಅಧಿಕಾರಿ ಶಶಿಧರ್ ವಿ. ಹಾಗೂ ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಪ್ರಶಾಂತ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗ್ರಾಮದ ವಿವಿಧ ರೈತರ ಅಡಿಕೆ ತೋಟಗಳಲ್ಲಿ ಸುಳಿ ತಿಗಣಿ ಕೀಟ ಹಾಗೂ ಸುಳಿಕೊಳೆ ರೋಗದ ಬಾಧೆಯಿಂದ ಅಡಿಕೆ ಗಿಡಗಳು ಹಾನಿಗೊಳಗಾಗಿರುವುದನ್ನು ಅಧಿಕಾರಿಗಳು ಗಮನಿಸಿದರು. ಬಳಿಕ ರೋಗ ಮತ್ತು ಕೀಟಗಳ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು ಹಾಗೂ ಸೂಕ್ತ ಔಷಧೋಪಚಾರಗಳ ಕುರಿತು ರೈತರಿಗೆ ಮಾಹಿತಿ ನೀಡಿದರು.
ರೋಗ ನಿಯಂತ್ರಣಕ್ಕೆ ಅಧಿಕಾರಿಗಳ ಸಲಹೆ:
ಮೊದಲ ಹಂತದಲ್ಲಿ ಥಯಾಮೆಥಾಕ್ಸಮ್ (Thiamethoxam) 0.5 ಗ್ರಾಂ ಅನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಅಡಿಕೆ ಗಿಡದ ಸುಳಿಗೆ ಸಿಂಪಡಿಸಬೇಕು. ನಂತರ ಹೆಕ್ಸಾಕೋನಜೋಲ್ (Hexaconazole) 2 ಮಿ.ಲೀ. ಹಾಗೂ ಕಾಪರ್ ಹೈಡ್ರಾಕ್ಸೈಡ್ (Copper Hydroxide) 2 ಗ್ರಾಂ ಅನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸುಳಿಗೆ ಸಿಂಪಡಿಸುವುದರ ಜೊತೆಗೆ ಗಿಡದ ಬುಡಕ್ಕೆ 5 ಲೀಟರ್ ದ್ರಾವಣ ಹಾಕಬೇಕು ಎಂದು ತಿಳಿಸಿದರು.
ಇದಲ್ಲದೆ, ಪ್ರತಿ ಎಕರೆಗೆ 200 ಕೆ.ಜಿ. ಸುಣ್ಣವನ್ನು ಮಣ್ಣಿನ ಮೇಲೆ ಎರಚಬೇಕು. ಪ್ರತಿ ಅಡಿಕೆ ಗಿಡಕ್ಕೆ ಪೊಟ್ಯಾಷ್ 230 ಗ್ರಾಂ, ಬೋರಾಕ್ಸ್ 30 ಗ್ರಾಂ, ಜಿಂಕ್ ಸಲ್ಫೇಟ್ 20 ಗ್ರಾಂ ಹಾಗೂ ಬೇವಿನ ಹಿಂಡಿ 2 ಕೆ.ಜಿ. ನೀಡುವಂತೆ ಸಲಹೆ ನೀಡಿದರು.
ಈ ಕ್ರಮಗಳನ್ನು ಕೈಗೊಂಡ 20 ದಿನಗಳ ನಂತರ ಪ್ರತಿ ಲೀಟರ್ ನೀರಿಗೆ ಟ್ರೈಕೋಡರ್ಮಾ (Trichoderma) 20 ಗ್ರಾಂ ಹಾಗೂ ಎಎಂಸಿ (AMC) 20 ಗ್ರಾಂ ಬೆರೆಸಿ, ಪ್ರತಿ ಗಿಡದ ಬುಡಕ್ಕೆ 3 ಲೀಟರ್ ದ್ರಾವಣ ಹಾಕುವ ಮೂಲಕ ಗಿಡಗಳ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಅಧಿಕಾರಿಗಳು ವಿವರಿಸಿದರು.
ಅಡಿಕೆ ಬೆಳೆಗಾರರು ರೋಗದ ಲಕ್ಷಣಗಳು ಕಂಡುಬಂದ ತಕ್ಷಣ ತೋಟಗಾರಿಕೆ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಸೂಕ್ತ ಮಾರ್ಗದರ್ಶನ ಪಡೆಯಬೇಕು. ವೈಜ್ಞಾನಿಕ ಪದ್ಧತಿಯಲ್ಲಿ ನಿರ್ವಹಣೆ ಮಾಡುವ ಮೂಲಕ ಬೆಳೆ ಹಾನಿ ತಡೆಗಟ್ಟಲು ಮುಂದಾಗಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಧಿಕಾರಿ ಉದಯಕುಮಾರ್, ರೈತರಾದ ಲಕ್ಷ್ಮಿನರಸಿಂಹೇಗೌಡ, ಗೋಪಾಲ್, ನಾರಾಯಣರೆಡ್ಡಿ, ನಂಜೇಗೌಡ, ರಾಮಕೃಷ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
