ದೀಪಾವಳಿ ಹಬ್ಬ ಸಮೀಪಿಸುತ್ತಿದ್ದಂತೆ ಸಂಭ್ರಮದ ಸಿದ್ಧತೆಗಳು ಆರಂಭವಾಗಿವೆ. ಮನೆಮನೆಗಳಲ್ಲಿ ದೀಪಗಳನ್ನು ಬೆಳಗಿಸಿ, ಸಿಹಿ ಹಂಚಿಕೊಂಡು, ಪಟಾಕಿಗಳನ್ನು ಸಿಡಿಸುವ ಮೂಲಕ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಪಟಾಕಿ ಸಿಡಿಸುವುದನ್ನು ಆನಂದಿಸುತ್ತಾರೆ.ಆದರೆ ಪಟಾಕಿ ಸಿಡಿಸುವಾಗ ಸ್ವಲ್ಪ ಅಜಾಗರೂಕತೆ ವಹಿಸಿದರೂ ಗಂಭೀರ ಅವಘಡಗಳು ಸಂಭವಿಸಬಹುದು. ಪಟಾಕಿಗಳಿಂದ ಹೊರಹೊಮ್ಮುವ ಕಿಡಿ, ಹೊಗೆ ಮತ್ತು ದೊಡ್ಡ ಶಬ್ದವು ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ವಿಶೇಷವಾಗಿ ಮಕ್ಕಳು, ವೃದ್ಧರು, ಉಸಿರಾಟದ ಸಮಸ್ಯೆ ಇರುವವರು ಹಾಗೂ ಸಾಕುಪ್ರಾಣಿಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಹಬ್ಬದ ಸಂಭ್ರಮಕ್ಕೆ ಯಾವುದೇ ಧಕ್ಕೆಯಾಗದಂತೆ ಪಟಾಕಿ ಸಿಡಿಸುವಾಗ ಕೆಲವು ಸುರಕ್ಷತಾ ಕ್ರಮಗಳನ್ನು ಪಾಲಿಸುವುದು ಅತ್ಯಗತ್ಯ.
ಪಟಾಕಿ ಖರೀದಿಸುವಾಗ ಇರಲಿ ಎಚ್ಚರ
ಪಟಾಕಿಗಳನ್ನು ಖರೀದಿಸುವಾಗ ಅವುಗಳ ಗುಣಮಟ್ಟವನ್ನು ಪರಿಶೀಲಿಸಬೇಕು. ಸರ್ಕಾರದ ನಿಯಮಾನುಸಾರ ಪರವಾನಗಿ ಪಡೆದ ಮಾರಾಟಗಾರರಿಂದಲೇ ಪಟಾಕಿಗಳನ್ನು ಖರೀದಿಸಬೇಕು. ಅಕ್ರಮವಾಗಿ ಮಾರಾಟ ಮಾಡುವ ಅಥವಾ ಕಡಿಮೆ ಗುಣಮಟ್ಟದ ಪಟಾಕಿಗಳನ್ನು ಖರೀದಿಸುವುದರಿಂದ ಅಪಘಾತಗಳ ಅಪಾಯ ಹೆಚ್ಚಾಗಬಹುದು. ಲೇಬಲ್ ಇಲ್ಲದ ಹಾಗೂ ತೆರೆದ ಪಟಾಕಿಗಳನ್ನು ಖರೀದಿಸಬಾರದು. ಪರಿಸರ ಮಾಲಿನ್ಯವನ್ನು ಕಡಿಮೆ ಮಾಡುವ ಉದ್ದೇಶದಿಂದ ಹಸಿರು ಪಟಾಕಿಗಳಿಗೆ ಆದ್ಯತೆ ನೀಡಬಹುದು.
ಕೈಯಲ್ಲಿ ಹಿಡಿದು ಪಟಾಕಿ ಹಚ್ಚಬೇಡಿ
ಕೆಲವರು ಪಟಾಕಿಗಳನ್ನು ಕೈಯಲ್ಲಿ ಹಿಡಿದು ಹಚ್ಚಿ ಎಸೆಯುವ ಅಭ್ಯಾಸ ಹೊಂದಿರುತ್ತಾರೆ. ಇದು ಅತ್ಯಂತ ಅಪಾಯಕಾರಿ. ಪಟಾಕಿ ಕೈಯಲ್ಲೇ ಸಿಡಿಯುವ ಸಾಧ್ಯತೆಯಿದ್ದು, ಗಂಭೀರ ಗಾಯಗಳಾಗಬಹುದು. ಅಲ್ಲದೆ, ಎಸೆದ ಪಟಾಕಿ ಬೇರೆಯವರ ಮೇಲೆ ಬಿದ್ದರೂ ಅಪಾಯ ಎದುರಾಗಬಹುದು. ಆದ್ದರಿಂದ ಪಟಾಕಿಗಳನ್ನು ಸದಾ ನೆಲದ ಮೇಲೆ ಇಟ್ಟು ಸುರಕ್ಷಿತ ಅಂತರ ಕಾಯ್ದುಕೊಂಡು ಹಚ್ಚಬೇಕು.
ತೆರೆದ ಜಾಗದಲ್ಲೇ ಪಟಾಕಿ ಸಿಡಿಸಿ
ಪಟಾಕಿಗಳನ್ನು ಸಿಡಿಸಲು ವಿಶಾಲವಾದ ತೆರೆದ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಿ. ಮನೆಯ ಒಳಗೆ, ಬಾಲ್ಕನಿಯಲ್ಲಿ, ಮೆಟ್ಟಿಲುಗಳಲ್ಲಿ ಅಥವಾ ಮುಚ್ಚಿದ ಜಾಗಗಳಲ್ಲಿ ಪಟಾಕಿ ಸಿಡಿಸುವುದು ಅಪಾಯಕಾರಿ. ಮರಗಳು, ವಾಹನಗಳು, ಕಟ್ಟಡಗಳು ಹಾಗೂ ಸುಲಭವಾಗಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳಿಂದ ದೂರವಿರುವ ಸ್ಥಳದಲ್ಲಿ ಪಟಾಕಿ ಸಿಡಿಸಬೇಕು. ಸಿಡಿಯದೆ ಉಳಿದ ಪಟಾಕಿಗಳನ್ನು ಮಕ್ಕಳ ಕೈಗೆ ಸಿಗದಂತೆ ಸುರಕ್ಷಿತವಾಗಿ ಇರಿಸಿ. ಅವುಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು.
ಮಕ್ಕಳ ಮೇಲೆ ಸದಾ ನಿಗಾ ಇರಲಿ
ಮಕ್ಕಳನ್ನು ಯಾವುದೇ ಕಾರಣಕ್ಕೂ ಒಬ್ಬರೇ ಪಟಾಕಿ ಸಿಡಿಸಲು ಬಿಡಬಾರದು. ವಯಸ್ಕರ ಮೇಲ್ವಿಚಾರಣೆಯಲ್ಲಿ ಮಾತ್ರ ಪಟಾಕಿ ಸಿಡಿಸಲು ಅವಕಾಶ ನೀಡಬೇಕು. ಮಕ್ಕಳ ವಯಸ್ಸು ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಸೂಕ್ತವಾದ ಪಟಾಕಿಗಳನ್ನು ಆಯ್ಕೆ ಮಾಡಬೇಕು. ಪಟಾಕಿ ಹಚ್ಚುವ ವಿಧಾನವನ್ನು ತಿಳಿಸಿಕೊಟ್ಟು, ಮಕ್ಕಳು ಸಿಡಿಸುವಾಗ ಅವರ ಜೊತೆ ದೊಡ್ಡವರು ಕಡ್ಡಾಯವಾಗಿ ಇರಬೇಕು.
ಪಟಾಕಿ ಸಿಡಿಸುವಾಗ ಬಟ್ಟೆಗಳ ಆಯ್ಕೆಯೂ ಮುಖ್ಯ
ದೀಪಾವಳಿ ಸಂಭ್ರಮದಲ್ಲಿ ಪಟಾಕಿ ಸಿಡಿಸುವಾಗ ಸಿಂಥೆಟಿಕ್, ನೈಲಾನ್, ಸ್ಯಾಟಿನ್, ವೆಲ್ವೆಟ್, ರೇಷ್ಮೆ ಹಾಗೂ ಜಾರ್ಜೆಟ್ ಬಟ್ಟೆಗಳನ್ನು ಧರಿಸುವುದನ್ನು ತಪ್ಪಿಸುವುದು ಉತ್ತಮ. ಇಂತಹ ಬಟ್ಟೆಗಳು ಸುಲಭವಾಗಿ ಬೆಂಕಿ ಹೊತ್ತಿಕೊಳ್ಳಬಹುದು ಅಥವಾ ಕರಗಿ ಚರ್ಮಕ್ಕೆ ಅಂಟಿಕೊಳ್ಳಬಹುದು. ಆದ್ದರಿಂದ ಪಟಾಕಿ ಸಿಡಿಸುವಾಗ ಮೈಗೆ ಹೊಂದಿಕೊಳ್ಳುವ, ಸಡಿಲವಾಗಿ ತೂಗಾಡದ ಹತ್ತಿ ಬಟ್ಟೆಗಳನ್ನು ಧರಿಸುವುದು ಸುರಕ್ಷಿತ.
ನೀರು ಮತ್ತು ಪ್ರಥಮ ಚಿಕಿತ್ಸಾ ಕಿಟ್ ಸಿದ್ಧವಾಗಿರಲಿ
ಪಟಾಕಿ ಸಿಡಿಸುವ ಸ್ಥಳದ ಸಮೀಪದಲ್ಲಿ ನೀರು, ಮರಳು ಅಥವಾ ಅಗ್ನಿಶಾಮಕ ಸಾಧನಗಳನ್ನು ಸಿದ್ಧವಾಗಿಟ್ಟುಕೊಳ್ಳಿ. ಜೊತೆಗೆ ಪ್ರಥಮ ಚಿಕಿತ್ಸಾ ಕಿಟ್ ಕೂಡ ಇರಲಿ. ಸಣ್ಣಪುಟ್ಟ ಗಾಯಗಳಾದರೆ ತಕ್ಷಣ ಪ್ರಾಥಮಿಕ ಚಿಕಿತ್ಸೆ ನೀಡಲು ಇದು ಸಹಾಯ ಮಾಡುತ್ತದೆ. ಬೆಂಕಿ ಅಥವಾ ಅವಘಡ ಸಂಭವಿಸಿದರೆ ತಕ್ಷಣ ಅಗತ್ಯ ಕ್ರಮ ಕೈಗೊಳ್ಳಲು ಸಿದ್ಧರಾಗಿರಬೇಕು.
ಕಣ್ಣುಗಳ ಸುರಕ್ಷತೆಗೆ ಆದ್ಯತೆ ನೀಡಿ
ಪಟಾಕಿ ಸಿಡಿಸುವಾಗ ಕಣ್ಣುಗಳಿಗೆ ಕಿಡಿ ತಗುಲುವ ಅಪಾಯವಿರುತ್ತದೆ. ಆದ್ದರಿಂದ ಪಟಾಕಿ ಸಿಡಿಸುವ ಸ್ಥಳದಿಂದ ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು. ಮಕ್ಕಳನ್ನು ಪಟಾಕಿಗಳ ಹತ್ತಿರ ಹೋಗದಂತೆ ನೋಡಿಕೊಳ್ಳಿ. ಪಟಾಕಿ ಸಿಡಿಸಿದ ನಂತರ ಕೈಗಳನ್ನು ಸೋಪು ಮತ್ತು ನೀರಿನಿಂದ ಚೆನ್ನಾಗಿ ತೊಳೆದ ಬಳಿಕವೇ ಕಣ್ಣು ಅಥವಾ ಮುಖವನ್ನು ಮುಟ್ಟಬೇಕು. ಕಣ್ಣಿಗೆ ಕಿಡಿ ಅಥವಾ ಪಟಾಕಿಯ ಅವಶೇಷಗಳು ತಗುಲಿದರೆ ಕಣ್ಣನ್ನು ಉಜ್ಜದೆ ತಕ್ಷಣ ವೈದ್ಯಕೀಯ ನೆರವು ಪಡೆಯಬೇಕು.
ಆರೋಗ್ಯದ ಬಗ್ಗೆಯೂ ಇರಲಿ ಕಾಳಜಿ
ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ದೊಡ್ಡ ಶಬ್ದಕ್ಕೆ ಹೆಚ್ಚು ಸೂಕ್ಷ್ಮವಾಗಿರಬಹುದು. ಶಬ್ದದಿಂದ ರಕ್ಷಿಸಲು ಅವರನ್ನು ಪಟಾಕಿ ಸಿಡಿಸುವ ಸ್ಥಳದಿಂದ ದೂರವಿಡುವುದು ಉತ್ತಮ. ಅಗತ್ಯವಿದ್ದರೆ ಸೂಕ್ತವಾದ ಕಿವಿ ರಕ್ಷಣಾ ಸಾಧನಗಳನ್ನು ಬಳಸಬಹುದು. ಮಕ್ಕಳಿಗೆ ಉಸಿರಾಟದ ಸಮಸ್ಯೆ ಅಥವಾ ಇತರ ಆರೋಗ್ಯ ಸಮಸ್ಯೆಗಳಿದ್ದರೆ ಹೊಗೆ ತುಂಬಿದ ಪ್ರದೇಶಗಳಿಂದ ದೂರವಿಡಬೇಕು.
ಪಟಾಕಿಯಿಂದ ಸುಟ್ಟಗಾಯಗಳಾದರೆ ತಕ್ಷಣ ಗಾಯದ ಭಾಗಕ್ಕೆ ಸುಮಾರು 20 ನಿಮಿಷಗಳ ಕಾಲ ತಂಪಾದ ಹರಿಯುವ ನೀರನ್ನು ಹಾಕಬೇಕು. ಐಸ್, ಎಣ್ಣೆ, ಟೂತ್‌ಪೇಸ್ಟ್ ಅಥವಾ ಇತರ ಮನೆಮದ್ದುಗಳನ್ನು ಬಳಸಬಾರದು. ಗಂಭೀರ ಸುಟ್ಟಗಾಯಗಳಾದರೆ ತಕ್ಷಣ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬೇಕು.
ದೀಪಾವಳಿ ಸಂತೋಷ ಮತ್ತು ಬೆಳಕಿನ ಹಬ್ಬ. ಹೀಗಾಗಿ ಸಂಭ್ರಮದ ಜೊತೆಗೆ ಸುರಕ್ಷತೆಗೂ ಆದ್ಯತೆ ನೀಡಿ. ಅಗತ್ಯ ಮುನ್ನೆಚ್ಚರಿಕೆಗಳನ್ನು ಪಾಲಿಸುವ ಮೂಲಕ ನಿಮ್ಮ ಕುಟುಂಬದವರೊಂದಿಗೆ ಸುರಕ್ಷಿತವಾಗಿ ದೀಪಾವಳಿಯನ್ನು ಆಚರಿಸಿ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
