ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಪ್ರಸಿದ್ಧ ಮಂಡಲ ಪೂಜೆ ಮತ್ತು ಮಕರ ಜ್ಯೋತಿ ದರ್ಶನಕ್ಕಾಗಿ ಭಕ್ತರು ಕಾತರದಿಂದ ಕಾಯುತ್ತಿದ್ದಾರೆ. 41 ದಿನಗಳ ಕಾಲ ನಡೆಯಲಿರುವ ಈ ವರ್ಷದ ಮಂಡಲ ತೀರ್ಥಯಾತ್ರೆ ಋತುವಿಗೆ ನವೆಂಬರ್ 16ರಂದು ಚಾಲನೆ ದೊರೆಯಲಿದೆ. ಅಂದು ಸಂಜೆ 5 ಗಂಟೆಗೆ ಶಬರಿಮಲೆ ದೇವಸ್ಥಾನದ ಬಾಗಿಲು ತೆರೆಯಲಾಗುತ್ತದೆ.ಬಳಿಕ ಡಿಸೆಂಬರ್ 27ರಂದು ಮಂಡಲ ಪೂಜೆ ನೆರವೇರಿದ ನಂತರ ದೇವಾಲಯವನ್ನು ಮುಚ್ಚಲಾಗುತ್ತದೆ. ಈ ಹಿನ್ನೆಲೆಯಲ್ಲಿ ಯಾತ್ರೆಗೆ ತೆರಳುವ ಭಕ್ತರ ಅನುಕೂಲಕ್ಕಾಗಿ ವಸತಿ ವ್ಯವಸ್ಥೆಯ ಆನ್ಲೈನ್ ಕೊಠಡಿ ಕಾಯ್ದಿರಿಸುವ ಪ್ರಕ್ರಿಯೆ ಆರಂಭವಾಗಲಿದೆ.
ನವೆಂಬರ್ 11ರ ಸಂಜೆ 5ರಿಂದ ರೂಮ್ ಬುಕಿಂಗ್
ಶಬರಿಮಲೆ ಸನ್ನಿಧಾನದಲ್ಲಿ ವಾಸ್ತವ್ಯ ಹೂಡಲು ಬಯಸುವ ಭಕ್ತರು ನವೆಂಬರ್ 11ರ ಸಂಜೆ 5 ಗಂಟೆಯಿಂದ ಆನ್ಲೈನ್ ಮೂಲಕ ಕೊಠಡಿಗಳನ್ನು ಕಾಯ್ದಿರಿಸಬಹುದು. ತಿರುವಾಂಕೂರು ದೇವಸ್ವಂ ಮಂಡಳಿಯ ಅಧಿಕೃತ ವೆಬ್ಸೈಟ್ www.onlinetdb.com ಮೂಲಕ ಮಾತ್ರ ರೂಮ್ ಬುಕಿಂಗ್ ಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಲಾಗಿದೆ.
ಮೊದಲ ಹಂತದಲ್ಲಿ 15 ದಿನಗಳ ಅವಧಿಗೆ ಅವಕಾಶ
ಬುಕಿಂಗ್ ಆರಂಭವಾದ ದಿನದಂದು ಮುಂದಿನ 15 ದಿನಗಳ ಅವಧಿಗೆ ಮಾತ್ರ ಕೊಠಡಿಗಳನ್ನು ಕಾಯ್ದಿರಿಸಲು ಅವಕಾಶವಿರುತ್ತದೆ. ನಂತರದ ದಿನಗಳಲ್ಲಿ ಭಕ್ತರು ತಾವು ಉಳಿದುಕೊಳ್ಳಲು ಉದ್ದೇಶಿಸಿರುವ ದಿನಾಂಕಕ್ಕಿಂತ 15 ದಿನಗಳ ಮುಂಚಿತವಾಗಿ, ಮಧ್ಯರಾತ್ರಿಯಿಂದಲೇ ಆನ್ಲೈನ್ನಲ್ಲಿ ಕೊಠಡಿ ಕಾಯ್ದಿರಿಸಬಹುದು. ಅಧಿಕೃತ ವೆಬ್ಸೈಟ್ ಮೂಲಕವೇ ಬುಕಿಂಗ್ ಮಾಡಿಕೊಳ್ಳುವಂತೆ ಭಕ್ತರಿಗೆ ಸೂಚಿಸಲಾಗಿದೆ.
41 ದಿನಗಳ ವ್ರತಾಚರಣೆ, 18 ಪವಿತ್ರ ಮೆಟ್ಟಿಲುಗಳ ದರ್ಶನ
ದಕ್ಷಿಣ ಭಾರತದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಶಬರಿಮಲೆಗೆ ಪ್ರತಿವರ್ಷ ಲಕ್ಷಾಂತರ ಭಕ್ತರು ಭೇಟಿ ನೀಡಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯುತ್ತಾರೆ. ಯಾತ್ರೆಗೆ ತೆರಳುವ ಭಕ್ತರು ಸಾಮಾನ್ಯವಾಗಿ 41 ದಿನಗಳ ಕಾಲ ವ್ರತಾಚರಣೆ ಕೈಗೊಂಡು, ನಿಯಮ-ನಿಷ್ಠೆಗಳನ್ನು ಪಾಲಿಸುತ್ತಾರೆ. ಬಳಿಕ ಇರುಮುಡಿ ಹೊತ್ತು ಶಬರಿಮಲೆಗೆ ತೆರಳಿ, ಪವಿತ್ರ 18 ಮೆಟ್ಟಿಲುಗಳನ್ನು ಏರಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯುತ್ತಾರೆ. ಮಂಡಲ ಪೂಜೆ ಹಾಗೂ ಮಕರ ಜ್ಯೋತಿ ದರ್ಶನದ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗುವುದರಿಂದ ಯಾತ್ರೆಗೆ ಮುನ್ನವೇ ವಸತಿ ವ್ಯವಸ್ಥೆ ಕಾಯ್ದಿರಿಸಿಕೊಳ್ಳುವುದು ಅನುಕೂಲಕರವಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
