ಹಾಸನ: ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ಭಾಗ್ಯ ಕರುಣಿಸುವ ಹಾಸನದ ವಿಶ್ವಪ್ರಸಿದ್ಧ ಹಾಸನಾಂಬಾ ದೇವಿಯ ಗರ್ಭಗುಡಿ ಬಾಗಿಲನ್ನು ಇಂದು (ನವೆಂಬರ್ 11) ಮಧ್ಯಾಹ್ನ ಶಾಸ್ತ್ರೋಕ್ತವಾಗಿ ಮುಚ್ಚಲಾಯಿತು. ಇದರೊಂದಿಗೆ ಅಕ್ಟೋಬರ್ 30ರಿಂದ ಆರಂಭಗೊಂಡಿದ್ದ 11 ದಿನಗಳ ಅದ್ದೂರಿ ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೆ ತೆರೆ ಬಿದ್ದಿದೆ.
ಇಂದು ಮಧ್ಯಾಹ್ನ 12.00 ರಿಂದ 1.30ರವರೆಗೆ ರಾಹುಕಾಲ ಇದ್ದಿದ್ದರಿಂದ, ಈ ಬಾರಿ ಕೊಂಚ ತಡವಾಗಿ ಗರ್ಭಗುಡಿಯ ಬಾಗಿಲನ್ನು ಮುಚ್ಚಲಾಯಿತು. ಬಾಗಿಲು ಮುಚ್ಚುವ ಪೂರ್ವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ.ಶಿವಲಿಂಗೇಗೌಡ, ಸಂಸದ ಶ್ರೇಯಸ್ ಪಟೇಲ್, ಶಾಸಕ ಹೆಚ್.ಪಿ.ಸ್ವರೂಪ್ಪ್ರಕಾಶ್ ಹಾಗೂ ಅವರ ಪತ್ನಿ ಶ್ವೇತಾ, ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ, ಎಸ್ಪಿ ಶುಭನ್ವಿತಾ, ಆಡಳಿತಾಧಿಕಾರಿ ಜಗದೀಶ್ ಗಂಗಣ್ಣನವರ್, ತಹಶೀಲ್ದಾರ್ ಗೀತಾ ಮತ್ತು ಎಸಿ ಹುಲ್ಲಮನಿ ತಿಮ್ಮಣ್ಣ ಅವರು ಗರ್ಭಗುಡಿಗೆ ತೆರಳಿ ದೇವಿಯ ಅಂತಿಮ ದರ್ಶನ ಪಡೆದರು.
ವಿಶೇಷ ದರ್ಶನದ ಬಳಿಕ ಅರ್ಚಕರು ಹಾಸನಾಂಬೆಗೆ ಮಾಡಲಾಗಿದ್ದ ಆಕರ್ಷಕ ಅಲಂಕಾರವನ್ನು ತೆರವುಗೊಳಿಸಿ, ದೇವಿಯ ಆಭರಣಗಳನ್ನು ಹೊರತೆಗೆದರು. ನಂತರ ಅಲಂಕಾರ ವಿಸರ್ಜನೆ ಪೂಜೆ ನೆರವೇರಿಸಿ, ನಂದಾದೀಪಕ್ಕೆ ಎಣ್ಣೆ ಎರೆಯಲಾಯಿತು. ಅಂತಿಮವಾಗಿ ಪ್ರಧಾನ ಅರ್ಚಕ ನಾಗರಾಜ್ ಅವರ ಸಮ್ಮುಖದಲ್ಲಿ ಗರ್ಭಗುಡಿ ಬಾಗಿಲಿಗೆ ಶಾಸ್ತ್ರೋಕ್ತವಾಗಿ ಬೀಗ ಹಾಕಿ ಮುದ್ರೆ ಒತ್ತಲಾಯಿತು.
ಮುಂದಿನ ವರ್ಷ ಅಕ್ಟೋಬರ್ 21 ರಿಂದ ಅಕ್ಟೋಬರ್ 31 ರವರೆಗೆ ಹಾಸನಾಂಬ ದೇವಿಯ ದರ್ಶನೋತ್ಸವ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
