ಕುಣಿಗಲ್: ಮೇಯುತ್ತಿದ್ದ ಮೇಕೆಯನ್ನು ಬೆನ್ನಟ್ಟಿ ಏಕಾಏಕಿ ಮನೆಗೆ ನುಗ್ಗಿದ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸುಮಾರು 6 ಗಂಟೆಗಳ ನಿರಂತರ ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿ ಸೆರೆ ಹಿಡಿದಿರುವ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಸಮೀಪದ ಬಂದಿಗೌಡನಪಾಳ್ಯ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಚಿಕ್ಕ ಮರಿಯಪ್ಪ ಎಂಬವರ ಮನೆಗೆ ಸೋಮವಾರ ರಾತ್ರಿ ಸುಮಾರು 9 ಗಂಟೆ ವೇಳೆಗೆ ಈ ಚಿರತೆ ನುಗ್ಗಿದೆ. ಕಳೆದ ಒಂದು ತಿಂಗಳಿಂದ ಈ ಭಾಗದಲ್ಲಿ ಚಿರತೆ ಓಡಾಟ ಹೆಚ್ಚಾಗಿದ್ದು, ರಾತ್ರಿ ವೇಳೆಯಲ್ಲಿ ಆಹಾರ ಅರಸಿ ಬಂದಿಗೌಡನಪಾಳ್ಯ ಗ್ರಾಮದತ್ತ ಬಂದಿರಬಹುದು ಎಂದು ಸ್ಥಳೀಯರು ತಿಳಿಸಿದ್ದಾರೆ.
ಘಟನೆ ನಡೆದ ಸಮಯದಲ್ಲಿ ಮನೆಯಲ್ಲಿ ನರಸಮ್ಮ ಎಂಬುವವರು ಟಿವಿ ನೋಡುತ್ತ ಕುಳಿತಿದ್ದರು. ಈ ವೇಳೆ ಮೇಕೆಯನ್ನು ಬೇಟೆಯಾಡುತ್ತಾ ಏಕಾಏಕಿ ಚಿರತೆ ಮನೆಯೊಳಗೆ ನುಗ್ಗಿದ್ದನ್ನು ಕಂಡು ನರಸಮ್ಮ ತೀವ್ರ ಆತಂಕಗೊಂಡಿದ್ದಾರೆ. ತಕ್ಷಣವೇ ಸಮಯಪ್ರಜ್ಞೆ ಮೆರೆದ ಅವರು ಧೈರ್ಯದಿಂದ ಮನೆಯಿಂದ ಹೊರಗೆ ಓಡಿಬಂದು ಬಾಗಿಲು ಹಾಕಿ, ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾರೆ. ಬಳಿಕ ಸ್ಥಳೀಯರು ಅರಣ್ಯ ಇಲಾಖೆಗೆ ತುರ್ತು ಮಾಹಿತಿ ನೀಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಅರಣ್ಯ ಇಲಾಖಾಧಿಕಾರಿಗಳು ಮತ್ತು ಸಿಬ್ಬಂದಿ, ಬನ್ನೇರುಘಟ್ಟದಿಂದ ಆಗಮಿಸಿದ ಅರವಳಿಕೆ ತಜ್ಞ ಡಾ. ಕಿರಣ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ಆರಂಭಿಸಿದರು. ಮನೆಯಲ್ಲಿದ್ದ ಮಂಚದ ಅಡಿಯಲ್ಲಿ ಅಡಗಿಕುಳಿತಿದ್ದ ಚಿರತೆಗೆ ಸುರಕ್ಷಿತವಾಗಿ ಅರವಳಿಕೆ ಮದ್ದು (ಟ್ರಾಂಕ್ವಿಲೈಜರ್) ನೀಡಲಾಯಿತು. ಸುಮಾರು 6 ಗಂಟೆಗಳ ಸುದೀರ್ಘ ಕಾರ್ಯಾಚರಣೆಯ ಬಳಿಕ ಚಿರತೆಯನ್ನು ಯಶಸ್ವಿಯಾಗಿ ಬೋನಿಗೆ ಹಾಕಲಾಯಿತು.
ಚಿರತೆ ಸೆರೆಯಾಗುತ್ತಿದ್ದಂತೆ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿಯ ಕಾರ್ಯಾಚರಣೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
