ಹುಬ್ಬಳ್ಳಿ: ದೀಪಾವಳಿ ಸಂಭ್ರಮದ ಆಚರಣೆಯೊಂದು ಕಷ್ಟಪಟ್ಟು ಬೆಳೆದ ರೈತನ ಬಾಳಿನಲ್ಲಿ ಕತ್ತಲು ಕವಿಯುವಂತೆ ಮಾಡಿದೆ. ಆಕಾಶದಲ್ಲಿ ಹಾರಿಬಿಟ್ಟ ಆಕಾಶಬುಟ್ಟಿಯೊಂದು (ಸ್ಕೈ ಲ್ಯಾಂಟರ್ನ್) ಬಿದ್ದು, ಕಟಾವಿಗೆ ಬಂದಿದ್ದ ಬರೋಬ್ಬರಿ 7 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿಯಾಗಿರುವ ದಾರುಣ ಘಟನೆ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ತಿಮ್ಮಸಾಗರ ಗ್ರಾಮದಲ್ಲಿ ನಡೆದಿದೆ.
ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಕೆಲವರು ಆಕಾಶಬುಟ್ಟಿಗಳನ್ನು ಹಾರಿಬಿಡುವುದುಂಟು. ಅಂತೆಯೇ ಹುಬ್ಬಳ್ಳಿಯಲ್ಲಿ ಹಾರಿಬಿಟ್ಟಿದ್ದ ಆಕಾಶಬುಟ್ಟಿಯೊಂದು ರೈತ ಶಂಕರಲಿಂಗ ಅವರ ಕಬ್ಬಿನ ಗದ್ದೆಗೆ ಬಂದು ಬಿದ್ದಿದೆ. ಇದರ ಪರಿಣಾಮವಾಗಿ ಕಬ್ಬಿನ ಗದ್ದೆಗೆ ಬೆಂಕಿ ಹೊತ್ತಿಕೊಂಡಿದ್ದು, ನೋಡನೋಡುತ್ತಿದ್ದಂತೆ ಬೆಂಕಿ ಇಡೀ ಗದ್ದೆಗೆ ವ್ಯಾಪಿಸಿದೆ.
ಬೆಂಕಿ ಬಿದ್ದಿರುವುದನ್ನು ಗಮನಿಸಿದ ರೈತ ಶಂಕರಲಿಂಗ ಮತ್ತು ಗ್ರಾಮಸ್ಥರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ವಿಷಯ ತಿಳಿದು ಅಗ್ನಿಶಾಮಕ ದಳದ ಸಿಬ್ಬಂದಿಯೂ ಕೂಡ ಸ್ಥಳಕ್ಕಾಗಮಿಸಿ ಕಾರ್ಯಾಚರಣೆ ನಡೆಸಿದ್ದಾರೆ. ಆದರೆ, ಅಷ್ಟರಲ್ಲಾಗಲೇ 4 ರಿಂದ 7 ಎಕರೆಯಷ್ಟು ಪ್ರದೇಶದಲ್ಲಿದ್ದ ಕಟಾವಿಗೆ ಬಂದ ಕಬ್ಬು ಸಂಪೂರ್ಣ ಸುಟ್ಟು ಭಸ್ಮವಾಗಿದೆ.
ಸಾವಿರಾರು ರೂಪಾಯಿ ಖರ್ಚು ಮಾಡಿ, ಬರಗಾಲದ ನಡುವೆಯೂ ಕಷ್ಟಪಟ್ಟು ಕಬ್ಬು ಬೆಳೆಸಿದ್ದ ರೈತ ಶಂಕರಲಿಂಗ, ಹಬ್ಬ ಮುಗಿದ ತಕ್ಷಣವೇ ಕಟಾವು ಮಾಡಲು ಸಿದ್ಧತೆ ನಡೆಸಿದ್ದರು. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದ್ದು, ಲಕ್ಷಾಂತರ ರೂಪಾಯಿ ಆದಾಯದ ನಿರೀಕ್ಷೆಯಲ್ಲಿದ್ದ ರೈತನಿಗೆ ಈ ಘಟನೆ ತೀವ್ರ ಆಘಾತ ತಂದಿದೆ.
ಹುಬ್ಬಳ್ಳಿ ಸುತ್ತಮುತ್ತ ಈ ರೀತಿಯ ಘಟನೆಗಳು ಮರುಕಳಿಸುತ್ತಿದ್ದು, ಆಕಾಶಬುಟ್ಟಿಗಳು ರೈತರ ಜಮೀನುಗಳಲ್ಲಿ ಬಿದ್ದು ಅಪಾರ ಬೆಳೆ ಹಾನಿಯಾಗುತ್ತಿದೆ. ಯಾರೋ ಮಾಡುವ ಆಚರಣೆಯ ಸಂಭ್ರಮಕ್ಕೆ ರೈತರು ತಮ್ಮ ಜೀವಮಾನದ ಕಷ್ಟವನ್ನು ಕಳೆದುಕೊಳ್ಳುವಂತಾಗಿದೆ. ಹೀಗಾಗಿ, ಸಾರ್ವಜನಿಕರು ದಯವಿಟ್ಟು ಆಕಾಶ ಬುಟ್ಟಿಗಳನ್ನು ಬಿಡುವುದನ್ನು ನಿಲ್ಲಿಸಬೇಕೆಂದು ರೈತರು ಕಣ್ಣೀರಿನ ಮನವಿ ಮಾಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
