ವ್ಯಕ್ತಿಯೊಬ್ಬರು ವಿಲ್ (ಉಯಿಲು) ಬರೆಯದೆ ಮೃತಪಟ್ಟರೆ, ಅವರ ಆಸ್ತಿ ಸಾಮಾನ್ಯವಾಗಿ ಕಾನೂನುಬದ್ಧ ಉತ್ತರಾಧಿಕಾರಿಗಳಿಗೆ ಸೇರುತ್ತದೆ. ಆದರೆ ಮೃತ ವ್ಯಕ್ತಿಗೆ ಯಾವುದೇ ಕಾನೂನುಬದ್ಧ ವಾರಸುದಾರರು ಇಲ್ಲದಿದ್ದರೆ ಆಸ್ತಿ ಯಾರ ಪಾಲಾಗುತ್ತದೆ? ಸರ್ಕಾರ ಅದನ್ನು ವಶಪಡಿಸಿಕೊಳ್ಳಬಹುದೇ? ಈ ಕುರಿತು 1956ರ ಹಿಂದೂ ಉತ್ತರಾಧಿಕಾರ ಕಾಯ್ದೆಯಲ್ಲಿ ಸ್ಪಷ್ಟ ನಿಯಮಗಳನ್ನು ರೂಪಿಸಲಾಗಿದೆ.
ಹಿಂದೂ ಉತ್ತರಾಧಿಕಾರ ಕಾಯ್ದೆಯ ಸೆಕ್ಷನ್ 29ರ ಪ್ರಕಾರ, ವ್ಯಕ್ತಿಯೊಬ್ಬರು ವಿಲ್ ಮಾಡದೆ ಮೃತಪಟ್ಟಿದ್ದು, ಅವರಿಗೆ ಯಾವುದೇ ಅರ್ಹ ಕಾನೂನುಬದ್ಧ ಉತ್ತರಾಧಿಕಾರಿಗಳು ಇಲ್ಲದಿದ್ದರೆ ಅವರ ಆಸ್ತಿ ಸರ್ಕಾರದ ಪಾಲಾಗುತ್ತದೆ. ಕಾನೂನಿನಲ್ಲಿ ಈ ಪ್ರಕ್ರಿಯೆಯನ್ನು ‘ಎಸ್ಚೀಟ್’ (Escheat) ಎಂದು ಕರೆಯಲಾಗುತ್ತದೆ. ಆದರೆ ಉತ್ತರಾಧಿಕಾರಿಗಳು ಇಲ್ಲವೆಂದು ತಿಳಿದ ತಕ್ಷಣವೇ ಸರ್ಕಾರ ಆಸ್ತಿಯನ್ನು ತನ್ನ ವಶಕ್ಕೆ ಪಡೆಯಲು ಸಾಧ್ಯವಿಲ್ಲ. ಅದಕ್ಕೂ ಮೊದಲು ಹಲವು ಹಂತಗಳ ಪರಿಶೀಲನೆ ನಡೆಸಬೇಕಾಗುತ್ತದೆ.
ಆಸ್ತಿಯನ್ನು ಸರ್ಕಾರದ ವಶಕ್ಕೆ ಪಡೆಯುವ ಮೊದಲು ಮೃತ ವ್ಯಕ್ತಿಗೆ ಸಂಬಂಧಿಸಿದ ಕಾನೂನುಬದ್ಧ ವಾರಸುದಾರರು ಯಾರಾದರೂ ಇದ್ದಾರೆಯೇ ಎಂಬುದನ್ನು ಪರಿಶೀಲಿಸಲಾಗುತ್ತದೆ. ಮೊದಲಿಗೆ ಪತ್ನಿ, ಪುತ್ರ, ಪುತ್ರಿ ಮತ್ತು ತಾಯಿ ಸೇರಿದಂತೆ ಮೊದಲ ದರ್ಜೆಯ (Class I) ಉತ್ತರಾಧಿಕಾರಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತದೆ. ಇವರು ಇದ್ದರೆ ಆಸ್ತಿಯನ್ನು ಕಾನೂನಿನ ಪ್ರಕಾರ ಅವರಿಗೆ ಹಂಚಿಕೆ ಮಾಡಲಾಗುತ್ತದೆ.
ಮೊದಲ ದರ್ಜೆಯ ವಾರಸುದಾರರು ಇಲ್ಲದಿದ್ದರೆ ತಂದೆ, ಸಹೋದರ, ಸಹೋದರಿ ಸೇರಿದಂತೆ ಎರಡನೇ ದರ್ಜೆಯ (Class II) ಉತ್ತರಾಧಿಕಾರಿಗಳಿಗಾಗಿ ಹುಡುಕಾಟ ನಡೆಸಲಾಗುತ್ತದೆ.ಇವರೂ ಇಲ್ಲದಿದ್ದರೆ ತಂದೆಯ ಕಡೆಯ ಪುರುಷ ಸಂಬಂಧಿಕರಾದ ಅಗ್ನೇಟ್ಸ್ (Agnates) ಅವರನ್ನು ಪರಿಗಣಿಸಲಾಗುತ್ತದೆ. ಕೊನೆಯದಾಗಿ ತಾಯಿಯ ಕಡೆಯ ಸಂಬಂಧಿಕರಾದ ಕಾಗ್ನೇಟ್ಸ್ (Cognates) ಇದ್ದಾರೆಯೇ ಎಂಬುದನ್ನು ಪರಿಶೀಲಿಸಲಾಗುತ್ತದೆ.ಈ ಎಲ್ಲ ಹಂತಗಳಲ್ಲಿಯೂ ಅರ್ಹ ಉತ್ತರಾಧಿಕಾರಿಗಳು ಯಾರೂ ಇಲ್ಲ ಎಂಬುದು ಕಾನೂನುಬದ್ಧವಾಗಿ ದೃಢಪಟ್ಟ ಬಳಿಕವಷ್ಟೇ ಆಸ್ತಿಯನ್ನು ಸರ್ಕಾರದ ವಶಕ್ಕೆ ಪಡೆಯುವ ಪ್ರಕ್ರಿಯೆ ಆರಂಭವಾಗುತ್ತದೆ.
ಈ ಪ್ರಕ್ರಿಯೆಯಲ್ಲಿ ಗಮನಿಸಬೇಕಾದ ಮತ್ತೊಂದು ಪ್ರಮುಖ ಅಂಶವೆಂದರೆ, ಸರ್ಕಾರ ಕೇವಲ ಆಸ್ತಿಯನ್ನು ಮಾತ್ರ ಸ್ವೀಕರಿಸುವುದಿಲ್ಲ. ಆಸ್ತಿಗೆ ಸಂಬಂಧಿಸಿದ ಸಾಲಗಳು, ಅಡಮಾನಗಳು ಹಾಗೂ ಇತರ ಕಾನೂನುಬದ್ಧ ಹೊಣೆಗಾರಿಕೆಗಳನ್ನೂ ಪರಿಗಣಿಸಬೇಕಾಗುತ್ತದೆ. ಅಂದರೆ ಆಸ್ತಿಯ ಮೇಲಿರುವ ಬಾಧ್ಯತೆಗಳನ್ನು ನಿರ್ಲಕ್ಷಿಸಿ ಸರ್ಕಾರ ಅದನ್ನು ಸಂಪೂರ್ಣ ಹಕ್ಕಿನಿಂದ ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ.
ಆಸ್ತಿ ಸರ್ಕಾರದ ಪಾಲಾಗುವ ಪ್ರಕ್ರಿಯೆ ಹೇಗೆ ನಡೆಯುತ್ತದೆ?
ಉತ್ತರಾಧಿಕಾರಿಗಳು ಇಲ್ಲದ ಆಸ್ತಿಯನ್ನು ಸರ್ಕಾರದ ವಶಕ್ಕೆ ಪಡೆಯಲು ಕಂದಾಯ ಇಲಾಖೆಯ ಮೂಲಕ ಪರಿಶೀಲನೆ ನಡೆಸಲಾಗುತ್ತದೆ. ಆರಂಭದಲ್ಲಿ ಗ್ರಾಮ ಆಡಳಿತ ಅಧಿಕಾರಿ ಮತ್ತು ಕಂದಾಯ ನಿರೀಕ್ಷಕರು ಆಸ್ತಿಯ ಕುರಿತು ವರದಿ ಸಲ್ಲಿಸುತ್ತಾರೆ. ಈ ವರದಿಯ ಆಧಾರದ ಮೇಲೆ ತಹಸೀಲ್ದಾರ್ ಹೆಚ್ಚಿನ ತನಿಖೆ ನಡೆಸುತ್ತಾರೆ.ನಂತರ ಜಿಲ್ಲಾಧಿಕಾರಿ ಅಥವಾ ಉಪವಿಭಾಗಾಧಿಕಾರಿಗಳ ಮೂಲಕ ಜಿಲ್ಲಾ ಗೆಜೆಟ್ ಹಾಗೂ ಪ್ರಮುಖ ಪತ್ರಿಕೆಗಳಲ್ಲಿ ಸಾರ್ವಜನಿಕ ಪ್ರಕಟಣೆ ನೀಡುವ ಪ್ರಕ್ರಿಯೆ ಕೈಗೊಳ್ಳಲಾಗುತ್ತದೆ. ಈ ಪ್ರಕಟಣೆಯ ಮೂಲಕ ಆಸ್ತಿಯ ಮೇಲೆ ಹಕ್ಕು ಹೊಂದಿರುವವರು ಸೂಕ್ತ ದಾಖಲೆಗಳೊಂದಿಗೆ ಮುಂದೆ ಬರಲು ಅವಕಾಶ ನೀಡಲಾಗುತ್ತದೆ.
ನಿಗದಿತ ಅವಧಿಯಲ್ಲಿ ಯಾರೂ ಹಕ್ಕು ಪ್ರತಿಪಾದಿಸದಿದ್ದರೆ ಮತ್ತು ಉತ್ತರಾಧಿಕಾರಿಗಳು ಇಲ್ಲ ಎಂಬುದು ದೃಢಪಟ್ಟರೆ, ಸಂಬಂಧಪಟ್ಟ ಅಧಿಕಾರಿಗಳ ಆದೇಶದಂತೆ ಆಸ್ತಿಯನ್ನು ಸರ್ಕಾರಿ ಆಸ್ತಿಯೆಂದು ದಾಖಲೆಗಳಲ್ಲಿ ನಮೂದಿಸುವ ಪ್ರಕ್ರಿಯೆ ನಡೆಯುತ್ತದೆ.
ಸರ್ಕಾರದ ಪಾಲಾದ ಆಸ್ತಿಯನ್ನು ಏನು ಮಾಡಲಾಗುತ್ತದೆ?
ಹೀಗೆ ಸರ್ಕಾರದ ವಶಕ್ಕೆ ಬಂದ ಆಸ್ತಿಗಳನ್ನು ಸಾರ್ವಜನಿಕ ಹಿತಾಸಕ್ತಿಗಾಗಿ ಬಳಸಬಹುದಾಗಿದೆ. ಸರ್ಕಾರಿ ಶಾಲೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಅಂಗನವಾಡಿಗಳು ಸೇರಿದಂತೆ ಸಾರ್ವಜನಿಕ ಸೌಲಭ್ಯಗಳ ನಿರ್ಮಾಣಕ್ಕೆ ಇಂತಹ ಆಸ್ತಿಗಳನ್ನು ಬಳಸುವ ಸಾಧ್ಯತೆಯಿದೆ. ಸಾರ್ವಜನಿಕ ಉದ್ದೇಶಕ್ಕೆ ಅಗತ್ಯವಿಲ್ಲದ ಆಸ್ತಿಗಳನ್ನು ನಿಯಮಾನುಸಾರ ಹರಾಜು ಹಾಕಿ, ಅದರಿಂದ ಬಂದ ಹಣವನ್ನು ಸರ್ಕಾರಿ ಖಜಾನೆಗೆ ಜಮೆ ಮಾಡಬಹುದು.
ವ್ಯಕ್ತಿಯೊಬ್ಬರು ವಿಲ್ ಮಾಡದೆ ಮೃತಪಟ್ಟಾಗ ಅವರ ಆಸ್ತಿ ನೇರವಾಗಿ ಸರ್ಕಾರದ ಪಾಲಾಗುವುದಿಲ್ಲ. ಮೊದಲು ಕಾನೂನಿನಲ್ಲಿ ಗುರುತಿಸಿರುವ ಎಲ್ಲ ವರ್ಗಗಳ ಉತ್ತರಾಧಿಕಾರಿಗಳನ್ನು ಹುಡುಕಲಾಗುತ್ತದೆ. ಯಾರೂ ಇಲ್ಲ ಎಂಬುದು ಖಚಿತವಾದ ನಂತರವಷ್ಟೇ ಎಸ್ಚೀಟ್ ನಿಯಮದಡಿ ಆಸ್ತಿ ಸರ್ಕಾರದ ವಶಕ್ಕೆ ಹೋಗುತ್ತದೆ. ಹೀಗಾಗಿ ತಮ್ಮ ಆಸ್ತಿಯ ಹಂಚಿಕೆ ಕುರಿತು ಗೊಂದಲಗಳು ಉಂಟಾಗದಂತೆ ಮುಂಚಿತವಾಗಿಯೇ ಕಾನೂನುಬದ್ಧ ವಿಲ್ ಮಾಡಿಸಿಕೊಳ್ಳುವುದು ಸೂಕ್ತ.
ಸೂಚನೆ: ಈ ನಿಯಮಗಳು ಹಿಂದೂ ಉತ್ತರಾಧಿಕಾರ ಕಾಯ್ದೆಯ ವ್ಯಾಪ್ತಿಗೆ ಸಂಬಂಧಿಸಿದ್ದು, ಇತರ ವೈಯಕ್ತಿಕ ಕಾನೂನುಗಳಡಿ ಉತ್ತರಾಧಿಕಾರದ ನಿಯಮಗಳು ಭಿನ್ನವಾಗಿರಬಹುದು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
