ಸ್ಮಾರ್ಟ್ಫೋನ್ ಬಳಕೆ ಹೆಚ್ಚಾದಂತೆ ಗೂಗಲ್ ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದೆ. ಬೆಳಗ್ಗೆ ಎದ್ದ ತಕ್ಷಣ ಮೊಬೈಲ್ನಲ್ಲಿ ಏನಾದರೂ ಹುಡುಕುವುದರಿಂದ ಹಿಡಿದು, ಹೋಟೆಲ್ ವಿಳಾಸ ತಿಳಿದುಕೊಳ್ಳುವುದು, ಹೊಸ ಸ್ಥಳಕ್ಕೆ ಹೋಗಲು ಮಾರ್ಗ ಹುಡುಕುವುದು ಹಾಗೂ ವಾಯ್ಸ್ ಸರ್ಚ್ ಮೂಲಕ ಪ್ರಶ್ನೆ ಕೇಳುವವರೆಗೆ ಪ್ರತಿಯೊಂದು ಕೆಲಸಕ್ಕೂ ಗೂಗಲ್ ಬಳಸುತ್ತೇವೆ. ಆದರೆ ಈ ರೀತಿ ಹುಡುಕುವಾಗ ನಮ್ಮ ವೈಯಕ್ತಿಕ ಮಾಹಿತಿಯೂ ಗೂಗಲ್ ಖಾತೆಯಲ್ಲಿ ಸಂಗ್ರಹವಾಗಬಹುದು ಎಂಬುದು ಅನೇಕರಿಗೆ ತಿಳಿದಿಲ್ಲ.
ನೀವು ಯಾವ ವಿಷಯವನ್ನು ಹುಡುಕಿದ್ದೀರಿ? ಯಾವ ಸ್ಥಳಗಳಿಗೆ ಭೇಟಿ ನೀಡಿದ್ದೀರಿ? ವಾಯ್ಸ್ ಸರ್ಚ್ನಲ್ಲಿ ಏನು ಮಾತನಾಡಿದ್ದೀರಿ? ಇಂತಹ ಕೆಲವು ವಿವರಗಳು ನಿಮ್ಮ Google ಖಾತೆಯಲ್ಲಿರಬಹುದು. ಖಾತೆಯಲ್ಲಿನ ಗೌಪ್ಯತೆ ಸೆಟ್ಟಿಂಗ್ಗಳು ಮತ್ತು ನೀವು ನೀಡಿರುವ ಅನುಮತಿಗಳನ್ನು ಆಧರಿಸಿ ಈ ಮಾಹಿತಿ ಸಂಗ್ರಹವಾಗುತ್ತದೆ. ಆದರೆ ಚಿಂತಿಸುವ ಅಗತ್ಯವಿಲ್ಲ. ನಿಮ್ಮ ಖಾತೆಯಲ್ಲಿ ಯಾವ ಮಾಹಿತಿ ಉಳಿದಿದೆ ಎಂಬುದನ್ನು ಪರಿಶೀಲಿಸುವುದರ ಜೊತೆಗೆ, ಅನಗತ್ಯ ಮಾಹಿತಿಯನ್ನು ಅಳಿಸುವ ಮತ್ತು ಮುಂದಿನ ದಿನಗಳಲ್ಲಿ ಮಾಹಿತಿ ಸಂಗ್ರಹವಾಗುವುದನ್ನು ನಿಯಂತ್ರಿಸುವ ಅವಕಾಶವೂ ಇದೆ.ಹಾಗಾದರೆ ಗೂಗಲ್ನಲ್ಲಿ ಸಂಗ್ರಹವಾಗಿರುವ ಮಾಹಿತಿಯನ್ನು ಪರಿಶೀಲಿಸುವುದು ಹೇಗೆ? ಅದನ್ನು ಅಳಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ.
ಗೂಗಲ್ ಸರ್ಚ್ ಹಿಸ್ಟರಿ ಅಳಿಸುವುದು ಹೇಗೆ?
ನೀವು ಗೂಗಲ್ನಲ್ಲಿ ಹುಡುಕುವ ವಿಷಯಗಳ ವಿವರಗಳು ಖಾತೆಯ ಸೆಟ್ಟಿಂಗ್ಗಳನ್ನು ಅವಲಂಬಿಸಿ ‘My Activity’ ವಿಭಾಗದಲ್ಲಿ ಸಂಗ್ರಹವಾಗಿರಬಹುದು. ಹಳೆಯ ಸರ್ಚ್ ಹಿಸ್ಟರಿಯನ್ನು ಇಲ್ಲಿ ಪರಿಶೀಲಿಸಿ, ಅಗತ್ಯವಿಲ್ಲದಿದ್ದರೆ ಅಳಿಸಬಹುದು.
ಇದಕ್ಕಾಗಿ ಮೊಬೈಲ್ನಲ್ಲಿ ಬ್ರೌಸರ್ ತೆರೆದು https://myactivity.google.com ವೆಬ್ಸೈಟ್ಗೆ ಭೇಟಿ ನೀಡಿ. ನಿಮ್ಮ Google ಖಾತೆಯ ಮೂಲಕ ಲಾಗಿನ್ ಆದ ಬಳಿಕ ವಿವಿಧ ಚಟುವಟಿಕೆಗಳ ವಿವರಗಳನ್ನು ನೋಡಬಹುದು. ಅಲ್ಲಿ Delete ಆಯ್ಕೆ ಕ್ಲಿಕ್ ಮಾಡಿ, All time ಆಯ್ಕೆ ಮಾಡಿಕೊಂಡರೆ ಲಭ್ಯವಿರುವ ಸಂಪೂರ್ಣ ಚಟುವಟಿಕೆ ಇತಿಹಾಸವನ್ನು ಅಳಿಸಬಹುದು.
ನಿಮ್ಮ ಧ್ವನಿಯೂ ಗೂಗಲ್ನಲ್ಲಿ ಉಳಿದಿರಬಹುದೇ?
ಮೊಬೈಲ್ನಲ್ಲಿ ಟೈಪ್ ಮಾಡುವ ಬದಲು ಮೈಕ್ ಬಟನ್ ಒತ್ತಿ ಮಾತನಾಡುವ ಮೂಲಕ ಮಾಹಿತಿ ಹುಡುಕುವ ಅಭ್ಯಾಸ ಅನೇಕರಿಗಿದೆ. ನೀವು Voice and Audio Activity ಸಂಗ್ರಹಿಸಲು ಅನುಮತಿ ನೀಡಿದ್ದರೆ, ಕೆಲವು ವಾಯ್ಸ್ ಸರ್ಚ್ಗಳ ಆಡಿಯೋ ರೆಕಾರ್ಡಿಂಗ್ಗಳೂ ನಿಮ್ಮ ಖಾತೆಯಲ್ಲಿ ಉಳಿದಿರಬಹುದು.
ಇದನ್ನು ಪರಿಶೀಲಿಸಲು Google Account ಸೆಟ್ಟಿಂಗ್ಸ್ಗೆ ಹೋಗಿ Data and Privacy ವಿಭಾಗ ತೆರೆಯಿರಿ. ನಂತರ History Settings ಅಡಿಯಲ್ಲಿ Web and App Activity ಆಯ್ಕೆಮಾಡಿ. ಅಲ್ಲಿ Include voice and audio activity ಆಯ್ಕೆಯನ್ನು ಪರಿಶೀಲಿಸಬಹುದು. My Activity ವಿಭಾಗಕ್ಕೆ ತೆರಳಿ ಸಂಬಂಧಿತ ವಾಯ್ಸ್ ಆಕ್ಟಿವಿಟಿಯನ್ನು ಗುರುತಿಸಿ ಅಳಿಸುವ ಅವಕಾಶವಿದೆ. ಮುಂದೆ ಇಂತಹ ಮಾಹಿತಿ ಸಂಗ್ರಹವಾಗಬಾರದು ಎಂದಾದರೆ ಸಂಬಂಧಿತ ಸೆಟ್ಟಿಂಗ್ ಅನ್ನು ಆಫ್ ಮಾಡಬಹುದು.
ನೀವು ಯಾವ ದಿನ ಯಾವ ಸ್ಥಳಕ್ಕೆ ಭೇಟಿ ನೀಡಿದ್ದೀರಿ? ಎಲ್ಲಿಂದ ಎಲ್ಲಿಗೆ ಪ್ರಯಾಣಿಸಿದ್ದೀರಿ? ಎಂಬ ವಿವರಗಳು Google Maps Timelineನಲ್ಲಿ ಸಂಗ್ರಹವಾಗಿರಬಹುದು. ಈ ಸೌಲಭ್ಯ ಸಕ್ರಿಯವಾಗಿದ್ದರೆ ಹಿಂದಿನ ಪ್ರಯಾಣದ ಮಾಹಿತಿಯನ್ನು ಪರಿಶೀಲಿಸಬಹುದು.ಇದಕ್ಕಾಗಿ Google Maps ಆ್ಯಪ್ ತೆರೆಯಿರಿ. ಮೇಲ್ಭಾಗದಲ್ಲಿರುವ ನಿಮ್ಮ ಪ್ರೊಫೈಲ್ ಫೋಟೋ ಮೇಲೆ ಕ್ಲಿಕ್ ಮಾಡಿ Your Timeline ಆಯ್ಕೆಮಾಡಿ. ನಂತರ Timeline ಸೆಟ್ಟಿಂಗ್ಸ್ಗೆ ತೆರಳಿ, ಅಗತ್ಯವಿರುವ ದಿನಾಂಕ ಅಥವಾ ಸ್ಥಳದ ಮಾಹಿತಿಯನ್ನು ಆಯ್ಕೆ ಮಾಡಿಕೊಂಡು ಅಳಿಸಬಹುದು.
ಗಮನಿಸಬೇಕಾದ ಸಂಗತಿಯೆಂದರೆ, Google Maps Timelineನ ಮಾಹಿತಿ ಕೆಲವು ಸಂದರ್ಭಗಳಲ್ಲಿ ನಿಮ್ಮ ಮೊಬೈಲ್ ಸಾಧನದಲ್ಲಿಯೇ ಸಂಗ್ರಹವಾಗಿರಬಹುದು. ಹೀಗಾಗಿ ನಿಮ್ಮ ಸಾಧನದಲ್ಲಿರುವ ಪ್ರಸ್ತುತ ಸೆಟ್ಟಿಂಗ್ಗಳನ್ನು ಪರಿಶೀಲಿಸುವುದು ಮುಖ್ಯ.
ನೀವು ಪ್ರತಿಬಾರಿಯೂ ಹಿಸ್ಟರಿಯನ್ನು ಕೈಯಾರೆ ಅಳಿಸುವ ಬದಲು, ನಿರ್ದಿಷ್ಟ ಅವಧಿಯ ಬಳಿಕ ಮಾಹಿತಿ ಸ್ವಯಂಚಾಲಿತವಾಗಿ ಅಳಿಸಿಹೋಗುವಂತೆ ವ್ಯವಸ್ಥೆ ಮಾಡಿಕೊಳ್ಳಬಹುದು. ಇದಕ್ಕಾಗಿ Google Accountನ Auto-delete ಆಯ್ಕೆಯನ್ನು ಬಳಸಬಹುದು.Google Account ತೆರೆಯಿರಿ. Data and Privacy ವಿಭಾಗಕ್ಕೆ ಹೋಗಿ History Settings ಆಯ್ಕೆಮಾಡಿ. ಅಲ್ಲಿ Web and App Activity ಹಾಗೂ ಲಭ್ಯವಿರುವ ಇತರ ಚಟುವಟಿಕೆಗಳ ಸೆಟ್ಟಿಂಗ್ಗಳನ್ನು ಪರಿಶೀಲಿಸಿ. Auto-delete ಆಯ್ಕೆ ಲಭ್ಯವಿದ್ದರೆ 3, 18 ಅಥವಾ 36 ತಿಂಗಳ ಅವಧಿಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು. ಇದರಿಂದ ನಿಗದಿತ ಅವಧಿಗಿಂತ ಹಳೆಯದಾದ ಮಾಹಿತಿಯನ್ನು ಸ್ವಯಂಚಾಲಿತವಾಗಿ ಅಳಿಸುವ ವ್ಯವಸ್ಥೆ ಮಾಡಬಹುದು.
ಹಿಸ್ಟರಿ ಅಳಿಸಿದರೆ ಎಲ್ಲ ಮಾಹಿತಿಯೂ ಅಳಿಸಿಹೋಗುತ್ತದೆಯೇ?
ಇಲ್ಲ. Google My Activityಯಿಂದ ಹಿಸ್ಟರಿ ಅಳಿಸಿದ ಮಾತ್ರಕ್ಕೆ ನಿಮ್ಮ ಎಲ್ಲಾ ಆನ್ಲೈನ್ ಚಟುವಟಿಕೆಗಳ ಮಾಹಿತಿ ಅಳಿಸಿಹೋಗುತ್ತದೆ ಎಂದರ್ಥವಲ್ಲ. Chrome ಬ್ರೌಸಿಂಗ್ ಹಿಸ್ಟರಿ, YouTube ವೀಕ್ಷಣೆಯ ಇತಿಹಾಸ ಹಾಗೂ Google Maps Timelineಗೆ ಪ್ರತ್ಯೇಕ ಸೆಟ್ಟಿಂಗ್ ಗಳಿರಬಹುದು. ಅವುಗಳನ್ನು ಪ್ರತ್ಯೇಕವಾಗಿ ಪರಿಶೀಲಿಸಿ ನಿರ್ವಹಿಸಬೇಕಾಗುತ್ತದೆ.ಅಲ್ಲದೆ, ಕೆಲವು ಸೇವೆಗಳು ಮತ್ತು ಸಾಧನಗಳು ತಮ್ಮದೇ ಆದ ಡೇಟಾ ಸಂಗ್ರಹಣೆಯ ಸೆಟ್ಟಿಂಗ್ ಗಳನ್ನು ಹೊಂದಿರುತ್ತವೆ. ಹೀಗಾಗಿ ಒಂದು ಆಯ್ಕೆಯನ್ನು ಆಫ್ ಮಾಡಿದರೆ ಗೂಗಲ್ ಗೆ ಸಂಬಂಧಿಸಿದ ಎಲ್ಲ ರೀತಿಯ ಮಾಹಿತಿ ಸಂಗ್ರಹ ಸಂಪೂರ್ಣವಾಗಿ ನಿಲ್ಲುತ್ತದೆ ಎಂದು ಭಾವಿಸಬಾರದು.
ಪ್ರತಿದಿನ ಗೂಗಲ್ ಬಳಸುವವರು ತಮ್ಮ ಖಾತೆಯ ಗೌಪ್ಯತೆ ಸೆಟ್ಟಿಂಗ್ಗಳ ಬಗ್ಗೆ ಗಮನ ಹರಿಸುವುದು ಅಗತ್ಯ. ಯಾವ ಮಾಹಿತಿ ಸಂಗ್ರಹವಾಗುತ್ತಿದೆ, ಅದನ್ನು ಹೇಗೆ ಬಳಸಲಾಗುತ್ತಿದೆ ಎಂಬುದನ್ನು ಆಗಾಗ ಪರಿಶೀಲಿಸಬೇಕು. ಅಗತ್ಯವಿಲ್ಲದ ಮಾಹಿತಿಯನ್ನು ಅಳಿಸುವುದರ ಜೊತೆಗೆ Auto-delete ಆಯ್ಕೆಯನ್ನು ಬಳಸಿಕೊಂಡು ವೈಯಕ್ತಿಕ ಮಾಹಿತಿಯ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡಬಹುದು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
