ಕೊರಟಗೆರೆ : ಒಕ್ಕಲಿಗ ಸಮುದಾಯವು ರಾಜ್ಯಕ್ಕೆ ಅನ್ನ ನೀಡುವ ಕೃಷಿ ಪ್ರಧಾನ ಸಮುದಾಯವಾಗಿದ್ದು, ತನ್ನ ಅಭಿವೃದ್ಧಿಯ ಜೊತೆಗೆ ಸಮಾಜದ ತಳಸಮುದಾಯಗಳ ಹಿತವನ್ನೂ ಬಯಸುವ ವಿಶಾಲ ಮನೋಭಾವ ಹೊಂದಿದೆ. ರಾಜ್ಯದಲ್ಲಿ ಒಕ್ಕಲಿಗ ಸಮುದಾಯದ ನಾಯಕರು ಮುಖ್ಯಮಂತ್ರಿಗಳಾಗಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಕೇವಲ ತಮ್ಮ ಸಮುದಾಯಕ್ಕೆ ಸೀಮಿತವಾಗದೆ, ರೈತರು ಸೇರಿದಂತೆ ಎಲ್ಲ ವರ್ಗಗಳ ಜನರ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಪಟ್ಟನಾಯಕನಹಳ್ಳಿ ಸ್ಪಟಿಕಪುರಿ ಸಂಸ್ಥಾನದ ನಂಜಾವಧೂತ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಹೊರವಲಯದಲ್ಲಿ ತಾಲ್ಲೂಕು ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಿರ್ಮಿಸಲಾಗುತ್ತಿರುವ ಒಕ್ಕಲಿಗರ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿ ಕಲ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಎರಡು ಬಾರಿ ರೈತರ ಸಾಲಮನ್ನಾ ಸೇರಿದಂತೆ ಕೃಷಿ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆಗೂ ಬುನಾದಿ ಹಾಕಲಾಗಿದೆ. ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಾಜ್ಯಕ್ಕೆ ಶಾಶ್ವತ ಆದಾಯ ತರುವ ಯೋಜನೆಗಳಿಗೆ ಆದ್ಯತೆ ನೀಡಿದ್ದರು. ಈ ಎಲ್ಲ ಬೆಳವಣಿಗೆಗಳು ರಾಜ್ಯದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿವೆ ಎಂದರು.
ಒಕ್ಕಲಿಗ ಸಮುದಾಯವು ಬಲಿಷ್ಠವಾಗಿದ್ದರೂ ಉಪಪಂಗಡಗಳ ಹೆಸರಿನಲ್ಲಿ ವಿಭಜನೆಯಾದರೆ ಸಂಘಟನಾ ಶಕ್ತಿ ಕುಂದುತ್ತದೆ. ಎಲ್ಲ ಉಪಪಂಗಡಗಳೂ ಒಂದೇ ಸಮುದಾಯದವರು ಎಂಬ ಭಾವನೆಯೊಂದಿಗೆ ಒಗ್ಗಟ್ಟಿನಿಂದ ಮುನ್ನಡೆಯಬೇಕು. ಜಾತಿ ನಮೂದು ಮತ್ತು ಮೀಸಲಾತಿ ವಿಚಾರದಲ್ಲಿ ಸಮುದಾಯದ ಹಿತಾಸಕ್ತಿಗೆ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ಮೀಸಲಾತಿ ವಿಚಾರದಲ್ಲಿ ನ್ಯಾಯ ಸಿಗಲಿ
ಒಕ್ಕಲಿಗ ಸಮುದಾಯಕ್ಕೆ ಪ್ರಸ್ತುತ ನೀಡಿರುವ ಮೀಸಲಾತಿ ಪ್ರಮಾಣದ ಕುರಿತು ಸರ್ಕಾರ ಮರುಪರಿಶೀಲನೆ ನಡೆಸಿ ನ್ಯಾಯಯುತ ಪರಿಹಾರ ಕಂಡುಕೊಳ್ಳಬೇಕು. ಅದೇ ರೀತಿ ಬಲಿಜ ಸಮುದಾಯದ ಮೀಸಲಾತಿ ವರ್ಗೀಕರಣದ ಬಗ್ಗೆಯೂ ಸೂಕ್ತ ಪರಿಶೀಲನೆ ನಡೆಸಿ ಸಂಬಂಧಪಟ್ಟ ಸಮುದಾಯಗಳಿಗೆ ನ್ಯಾಯ ಒದಗಿಸಬೇಕು ಎಂದು ನಂಜಾವಧೂತ ಸ್ವಾಮೀಜಿ ಒತ್ತಾಯಿಸಿದರು.
ಕೆಂಗೇರಿಯ ವಿಶ್ವ ಒಕ್ಕಲಿಗ ಮಹಾಸಂಸ್ಥಾನದ ನಿಶ್ಚಲಾನಂದನಾಥ ಸ್ವಾಮೀಜಿ ಮಾತನಾಡಿ, ಒಕ್ಕಲಿಗರ ವಿವಿಧ ಉಪಪಂಗಡಗಳಲ್ಲಿ ಆಚರಣೆ ಮತ್ತು ಸಂಪ್ರದಾಯಗಳಲ್ಲಿ ಭಿನ್ನತೆಗಳಿದ್ದರೂ ನಾವೆಲ್ಲರೂ ಒಂದೇ ಸಮುದಾಯದವರು ಎಂಬ ಭಾವನೆ ಬೆಳೆಯಬೇಕು. ಹಿಂದಿನ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಪರಸ್ಪರ ಕೊಟ್ಟು-ತೆಗೆದುಕೊಳ್ಳುವ ಮನೋಭಾವ ಬೆಳೆಸಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ. ಈ ಒಗ್ಗಟ್ಟು ಮುಂದಿನ ದಿನಗಳಲ್ಲಿ ಮತ್ತಷ್ಟು ಬಲಗೊಳ್ಳಬೇಕು ಎಂದರು.
ನೂತನ ಭವನಕ್ಕೆ ‘ಒಕ್ಕಲಿಗರ ಸಂಗಮ ಭವನ’ ಎಂದು ನಾಮಕರಣ ಮಾಡಿ ಎಂದು ಸಲಹೆ ನೀಡಿದ ಅವರು, ಈ ಭವನವು ಸಮುದಾಯದ ಎಲ್ಲ ಉಪಪಂಗಡಗಳ ಒಗ್ಗಟ್ಟು ಮತ್ತು ಸಂಘಟನೆಯ ಕೇಂದ್ರವಾಗಲಿ ಎಂದು ಆಶಿಸಿದರು.
ಶಾಸಕ ಬಿ. ಸುರೇಶ್ ಗೌಡ ಮಾತನಾಡಿ, ನಮ್ಮವರನ್ನು ನಮ್ಮವರೇ ಕಾಲೆಳೆಯುವ ಪ್ರವೃತ್ತಿಯಿಂದಾಗಿ ದೊಡ್ಡ ಒಕ್ಕಲಿಗ ಸಮುದಾಯ ರಾಜಕೀಯವಾಗಿ ನಿರೀಕ್ಷಿತ ಪ್ರಗತಿ ಸಾಧಿಸಲು ಸಾಧ್ಯವಾಗಿಲ್ಲ. ಸಮುದಾಯದ ಮುಖಂಡರು ಪರಸ್ಪರ ಸಹಕಾರದೊಂದಿಗೆ ರಾಜಕೀಯವಾಗಿ ಸಂಘಟಿತರಾಗಬೇಕು. ಎಸ್.ಎಂ. ಕೃಷ್ಣ ಅವರನ್ನು ಹೊರತುಪಡಿಸಿದರೆ ಒಕ್ಕಲಿಗ ಸಮುದಾಯದ ನಾಯಕರಿಗೆ ಐದು ವರ್ಷಗಳ ಪೂರ್ಣಾವಧಿ ಮುಖ್ಯಮಂತ್ರಿಯಾಗುವ ಅವಕಾಶ ದೊರೆತಿಲ್ಲ ಎಂದು ಅಭಿಪ್ರಾಯಪಟ್ಟರು.
ತುಮಕೂರು ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿಯೂ ಒಕ್ಕಲಿಗ ಸಮುದಾಯ ನಿರ್ಣಾಯಕ ಸಂಖ್ಯೆಯಲ್ಲಿದೆ. ಆದರೂ ಟಿ.ಬಿ. ಜಯಚಂದ್ರ ಅವರ ನಂತರ ಜಿಲ್ಲೆಯಿಂದ ಸಮುದಾಯದವರಿಗೆ ಸಚಿವ ಸ್ಥಾನ ದೊರೆತಿಲ್ಲ ಎಂಬ ವಿಚಾರವನ್ನು ಪ್ರಸ್ತಾಪಿಸಿದ ಅವರು, ಸಮುದಾಯದವರು ರಾಜಕೀಯವಾಗಿ ಹೆಚ್ಚು ಜಾಗೃತರಾಗಿ ತಮ್ಮ ಸಂಘಟನಾ ಶಕ್ತಿಯನ್ನು ಪ್ರದರ್ಶಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸಮುದಾಯದ ಮುಖಂಡ ಪಿ.ಎನ್. ಕೃಷ್ಣಮೂರ್ತಿ ಮಾತನಾಡಿದರು. ಎಂ.ಎನ್.ಜೆ. ಮಂಜುನಾಥ್ ಅವರು ಭವನ ನಿರ್ಮಾಣ ಕಾರ್ಯಕ್ಕೆ ₹50 ಲಕ್ಷ ದೇಣಿಗೆ ನೀಡುವುದಾಗಿ ವೇದಿಕೆಯಲ್ಲಿ ಘೋಷಿಸಿ 10 ಲಕ್ಷ ಹಣ ಮುಂಗಡವಾಗಿ ನೀಡಿ ಸಮುದಾಯದ ಅಭಿವೃದ್ಧಿಗೆ ಕೈಜೋಡಿಸಿದರು. ಕೇಂದ್ರ ಒಕ್ಕಲಿಗ ಸಂಘದ ನಿರ್ದೇಶಕ ಹನುಮಂತರಾಯಪ್ಪ, ಆಡಿಟರ್ ನಾಗರಾಜು, ಜಿ.ಎಂ. ಕಾಮರಾಜು ಸೇರಿದಂತೆ ಹಲವು ಮುಖಂಡರು ಮಾತನಾಡಿದರು.
ಸಂಘದ ಅಧ್ಯಕ್ಷ ರಂಗರಸಪ್ಪ, ಕಾರ್ಯದರ್ಶಿ ಜೆ.ಎನ್. ನರಸಿಂಹರಾಜು, ಜಯಮ್ಮ, ಟಿ.ಡಿ. ಪ್ರಸನ್ನಕುಮಾರ್, ವಿ.ಕೆ. ವೀರಕ್ಯಾತರಾಯ, ಎಲ್.ವಿ. ಪ್ರಕಾಶ್, ಜಿ.ಎಸ್. ರವಿಕುಮಾರ್, ಮಾವತ್ತೂರು ಮಂಜುನಾಥ್, ಟಿ.ಸಿ. ಲಕ್ಷ್ಮೀಶ್, ಡಿ.ಎಂ. ಸಾಕರಾಜು, ಟಿ.ವಿ. ದೊಡ್ಡಯ್ಯ, ವೆಂಕಟಪ್ಪ, ಕೆ.ಎಸ್. ನಾಗೇಶ್ ಕುಮಾರ್, ಡಿ.ಎನ್. ರಮೇಶ್, ಮಲ್ಲಿಕಾರ್ಜುನ, ರಂಗರಾಜು, ಕೃಷ್ಣಮೂರ್ತಿ ಸೇರಿದಂತೆ ಸಂಘದ ಪದಾಧಿಕಾರಿಗಳು, ಸಮುದಾಯದ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಉಪ ಪಂಗಡಗಳ ಹೆಸರಿನಲ್ಲಿ ಸಮುದಾಯ ವಿಭಜನೆಯಾಗದೆ ಎಲ್ಲರೂ ಒಂದಾಗಿ ಸಂಘಟಿತರಾಗಬೇಕು. ಒಗ್ಗಟ್ಟೇ ಸಮುದಾಯದ ನಿಜವಾದ ಶಕ್ತಿ. ಒಕ್ಕಲಿಗ ಸಮುದಾಯಕ್ಕೆ ಪ್ರಸ್ತುತ ನೀಡಿರುವ ಮೀಸಲಾತಿ ಪ್ರಮಾಣದ ಕುರಿತು ಸರ್ಕಾರ ಮರುಪರಿಶೀಲನೆ ನಡೆಸಿ ನ್ಯಾಯ ಒದಗಿಸಬೇಕು. ಬಲಿಜ ಸಮುದಾಯದ ಮೀಸಲಾತಿ ವರ್ಗೀಕರಣದ ಬಗ್ಗೆಯೂ ಸೂಕ್ತ ನಿರ್ಧಾರ ಕೈಗೊಂಡು ಎರಡೂ ಸಮುದಾಯಗಳಿಗೆ ನ್ಯಾಯ ಕಲ್ಪಿಸಬೇಕು.
— ನಂಜಾವಧೂತ ಸ್ವಾಮೀಜಿ, ಸ್ಪಟಿಕಪುರಿ ಸಂಸ್ಥಾನ ಮಠ, ಪಟ್ಟನಾಯಕನಹಳ್ಳಿ.
ಒಗ್ಗಟ್ಟು, ಅಭಿವೃದ್ಧಿ ಮತ್ತು ಮೀಸಲಾತಿ ನ್ಯಾಯಕ್ಕೆ ಆದ್ಯತೆ ನೀಡಲಿ ; ನಂಜಾವಧೂತ ಸ್ವಾಮೀಜಿ
ಒಕ್ಕಲಿಗ ಸಮುದಾಯವು ರಾಜ್ಯಕ್ಕೆ ಅನ್ನ ನೀಡುವ ಕೃಷಿ ಪ್ರಧಾನ ಸಮುದಾಯವಾಗಿದ್ದು, ತನ್ನ ಅಭಿವೃದ್ಧಿಯೊಂದಿಗೆ ತಳಸಮುದಾಯಗಳ ಹಿತವನ್ನೂ ಬಯಸುವ ವಿಶಾಲ ಮನೋಭಾವ ಹೊಂದಿದೆ. ಒಕ್ಕಲಿಗ ನಾಯಕರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ರೈತರು ಸೇರಿದಂತೆ ಎಲ್ಲ ವರ್ಗಗಳ ಜನರ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
