ಕೊರಟಗೆರೆ: ಯಾವ ಭಾಷೆ ಹೆಚ್ಚು ಬಳಕೆಯಾಗುತ್ತದೆಯೋ ಆ ಭಾಷೆ ಜನಜೀವನದಲ್ಲಿ ಅಷ್ಟೇ ಗಟ್ಟಿಯಾಗಿ ನೆಲೆಯೂರುತ್ತದೆ. ನಿರಂತರ ಬಳಕೆಯಿಂದ ಮಾತ್ರ ಭಾಷೆಯ ಉಳಿವು ಮತ್ತು ಬೆಳವಣಿಗೆ ಸಾಧ್ಯ. ಆದ್ದರಿಂದ ಪ್ರತಿಯೊಬ್ಬ ಕನ್ನಡಿಗರೂ ಕನ್ನಡ ಮಾತನಾಡುವ, ಓದುವ ಹಾಗೂ ಬರೆಯುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಕೆ.ಎನ್. ಈರಣ್ಣ ಕರೆ ನೀಡಿದರು.
ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ 71ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ನಾಡಿನ ಶ್ರೀಮಂತ ಸಂಸ್ಕೃತಿ, ಪರಂಪರೆ ಹಾಗೂ ಭಾಷಾ ವೈಭವವನ್ನು ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗನ ಮೇಲಿದೆ. ಕನ್ನಡದ ಮೇಲಿನ ಅಭಿಮಾನ ಕೇವಲ ರಾಜ್ಯೋತ್ಸವ ಆಚರಣೆಗೆ ಸೀಮಿತವಾಗದೆ ನಿತ್ಯದ ಬದುಕಿನ ಭಾಗವಾಗಬೇಕು. ಮೊದಲು ಕನ್ನಡವನ್ನು ಶುದ್ಧವಾಗಿ ಕಲಿತು ಆತ್ಮವಿಶ್ವಾಸದಿಂದ ಬಳಸುವುದರ ಜತೆಗೆ ಇತರರಿಗೂ ಕನ್ನಡ ಕಲಿಸುವ ಮೂಲಕ ಭಾಷೆಯ ವ್ಯಾಪ್ತಿಯನ್ನು ವಿಸ್ತರಿಸಬೇಕು ಎಂದು ತಿಳಿಸಿದರು.
ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ರಾಮಕೃಷ್ಣ ಮಾತನಾಡಿ, ಕನ್ನಡಕ್ಕೆ ಎರಡು ಸಾವಿರ ವರ್ಷಗಳಿಗೂ ಮಿಗಿಲಾದ ಶ್ರೀಮಂತ ಇತಿಹಾಸವಿದೆ. ಸಾಹಿತ್ಯ, ಸಂಸ್ಕೃತಿ, ಜ್ಞಾನ ಮತ್ತು ವಿಚಾರಧಾರೆಗಳಲ್ಲಿ ಕನ್ನಡ ತನ್ನದೇ ಆದ ವಿಶಿಷ್ಟ ಸ್ಥಾನ ಹೊಂದಿದೆ. ಇಂತಹ ಸಮೃದ್ಧ ಭಾಷೆಯ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಪ್ರತಿಯೊಬ್ಬರೂ ಅರಿತು ಗೌರವಿಸಬೇಕು ಎಂದರು.
ನಿವೃತ್ತ ವೈದ್ಯಾಧಿಕಾರಿ ಡಾ. ಲಕ್ಷ್ಮಿಕಾಂತ ಮಾತನಾಡಿ, ಕನ್ನಡ ಭಾಷೆಯ ಬೆಳವಣಿಗೆಗೆ ಪುಸ್ತಕ ಓದುವ ಸಂಸ್ಕೃತಿ ಅತ್ಯಗತ್ಯ. ಕನ್ನಡ ಪುಸ್ತಕಗಳನ್ನು ಕೊಂಡು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಸರ್ಕಾರಿ ಕಚೇರಿಗಳು ಸೇರಿದಂತೆ ಎಲ್ಲ ಸಾರ್ವಜನಿಕ ವ್ಯವಹಾರಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡುವ ಮೂಲಕ ಕನ್ನಡದಲ್ಲಿಯೇ ಆಡಳಿತ ನಡೆಸುವ ವಾತಾವರಣ ನಿರ್ಮಾಣವಾಗಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ವೈದ್ಯರಾದ ಡಾ. ಆತ್ಮರಾಂ, ಡಾ. ಪುರುಷೋತ್ತಮ ನಾಯ್ಕ, ಡಾ. ಚಂದ್ರಕಲಾ, ಡಾ. ಯಶೋದ, ಡಾ. ಪುಷ್ಪಲತಾ, ಡಾ. ಶೃತಿ, ಡಾ. ನವೀನ್, ಡಾ. ರವಿ, ಡಾ. ವಿಜಯಲಕ್ಷ್ಮಿ, ಡಾ. ಕವಿತ, ಡಾ. ಮಾಣಿಕ್ಯ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿಗಳಾದ ಕಲ್ಯಾಣಿ, ಗಂಗಮ್ಮ ಹಾಗೂ ಇತರರು ಉಪಸ್ಥಿತರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
