ಬ್ಯಾಂಕ್ ಗಳ ಖಾಸಗೀಕರಣ ನೀತಿಯನ್ನು ವಿರೋಧಿಸಿ ಡಿಸೆಂಬರ್ 3ರಂದು ದೇಶಾದ್ಯಂತ ಬ್ಯಾಂಕ್ ಮುಷ್ಕರ ನಡೆಸಲು ಬ್ಯಾಂಕ್ ನೌಕರರ ಸಂಘಟನೆಗಳು ಕರೆ ನೀಡಿವೆ. AIBEA, AIBOA ಮತ್ತು BEFI ಸಂಘಟನೆಗಳ ನೇತೃತ್ವದಲ್ಲಿ ನಡೆಯಲಿರುವ ಈ ಮುಷ್ಕರದಲ್ಲಿ ವಿವಿಧ ಬ್ಯಾಂಕ್ಗಳ ನೌಕರರು ಹಾಗೂ ಅಧಿಕಾರಿಗಳು ಭಾಗವಹಿಸುವ ನಿರೀಕ್ಷೆಯಿದೆ.
ಮುಷ್ಕರದ ಹಿನ್ನೆಲೆಯಲ್ಲಿ ಅಂದು ಬ್ಯಾಂಕ್ಗಳ ಶಾಖೆಗಳಲ್ಲಿ ನಡೆಯುವ ಸಾಮಾನ್ಯ ಸೇವೆಗಳಿಗೆ ಅಡಚಣೆ ಉಂಟಾಗುವ ಸಾಧ್ಯತೆಯಿದೆ. ಹಣ ಜಮೆ, ಹಣ ಹಿಂಪಡೆಯುವಿಕೆ, ಚೆಕ್ ಕ್ಲಿಯರೆನ್ಸ್ ಸೇರಿದಂತೆ ಕೆಲವು ಬ್ಯಾಂಕಿಂಗ್ ವ್ಯವಹಾರಗಳಲ್ಲಿ ವಿಳಂಬವಾಗಬಹುದು. ಹೀಗಾಗಿ ಗ್ರಾಹಕರು ಮುಂಚಿತವಾಗಿಯೇ ತಮ್ಮ ಬ್ಯಾಂಕಿಂಗ್ ಕೆಲಸಗಳನ್ನು ಪೂರ್ಣಗೊಳಿಸಿಕೊಳ್ಳುವುದು ಸೂಕ್ತ.
ಐಡಿಬಿಐ ಬ್ಯಾಂಕ್ನ ಖಾಸಗೀಕರಣ ಪ್ರಕ್ರಿಯೆಯೇ ಈ ಮುಷ್ಕರಕ್ಕೆ ಪ್ರಮುಖ ಕಾರಣ ಎಂದು ಸಂಘಟನೆಗಳು ತಿಳಿಸಿವೆ. ಪ್ರಸ್ತುತ ಕೇಂದ್ರ ಸರ್ಕಾರ ಮತ್ತು ಭಾರತೀಯ ಜೀವ ವಿಮಾ ನಿಗಮ (LIC) ಒಟ್ಟಾಗಿ ಐಡಿಬಿಐ ಬ್ಯಾಂಕ್ನಲ್ಲಿ ಸುಮಾರು ಶೇ.94ರಷ್ಟು ಪಾಲನ್ನು ಹೊಂದಿವೆ. ಇದರಲ್ಲಿ ಶೇ.60ರಷ್ಟು ಪಾಲನ್ನು ಫೇರ್ಫಾಕ್ಸ್ ಸಂಸ್ಥೆಗೆ ಮಾರಾಟ ಮಾಡುವ ಪ್ರಸ್ತಾವನೆಗೆ ಸರ್ಕಾರ ಅನುಮೋದನೆ ನೀಡಿರುವುದನ್ನು ಬ್ಯಾಂಕ್ ನೌಕರರ ಸಂಘಟನೆಗಳು ವಿರೋಧಿಸುತ್ತಿವೆ.ಈ ನಿರ್ಧಾರದಿಂದ ಫೇರ್ಫಾಕ್ಸ್ ಸಂಸ್ಥೆ ಬ್ಯಾಂಕ್ನ ಪ್ರವರ್ತಕ ಸಂಸ್ಥೆಯಾಗುವ ಸಾಧ್ಯತೆಯಿದೆ. ಈ ಹಿಂದೆ ಐಡಿಬಿಐ ಬ್ಯಾಂಕ್ ನೌಕರರು ಖಾಸಗೀಕರಣದ ವಿರುದ್ಧ ಪ್ರತಿಭಟನೆ ನಡೆಸಿದ್ದರೂ, ಸರ್ಕಾರದ ನಿರ್ಧಾರದಲ್ಲಿ ಬದಲಾವಣೆ ಆಗಿಲ್ಲ ಎಂದು ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿವೆ. ಇದೀಗ ಇತರ ಬ್ಯಾಂಕ್ಗಳ ನೌಕರರೂ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ.
ಐಡಿಬಿಐ ಬ್ಯಾಂಕ್ ಸುಮಾರು 3.50 ಲಕ್ಷ ಕೋಟಿ ರೂ. ಠೇವಣಿ ಹಾಗೂ 2.50 ಲಕ್ಷ ಕೋಟಿ ರೂ. ಮುಂಗಡ ಸಾಲ ಹೊಂದಿದ್ದು, ಒಟ್ಟು ವ್ಯವಹಾರದ ಪ್ರಮಾಣ ಸುಮಾರು 6 ಲಕ್ಷ ಕೋಟಿ ರೂ. ಇದೆ ಎಂದು ಸಂಘಟನೆಗಳು ಹೇಳಿವೆ. ಇಂತಹ ದೊಡ್ಡ ಪ್ರಮಾಣದ ವ್ಯವಹಾರ ಹೊಂದಿರುವ ದೇಶೀಯ ಬ್ಯಾಂಕ್ನ ಪಾಲನ್ನು ವಿದೇಶಿ ಸಂಸ್ಥೆಗೆ ಮಾರಾಟ ಮಾಡುವುದರಿಂದ ಬ್ಯಾಂಕಿನ ಸ್ವರೂಪ ಬದಲಾಗುವ ಆತಂಕವಿದೆ ಎಂಬುದು ನೌಕರರ ಒಕ್ಕೂಟಗಳ ವಾದವಾಗಿದೆ.ಹಿಂದೆ ಆಡಳಿತಾತ್ಮಕ ಹಾಗೂ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಹಲವು ಖಾಸಗಿ ಬ್ಯಾಂಕ್ಗಳನ್ನು ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳು ವಿಲೀನಗೊಳಿಸಿಕೊಂಡು ಅಥವಾ ಸ್ವಾಧೀನಪಡಿಸಿಕೊಂಡು ನಿರ್ವಹಿಸಿದ್ದವು. ಹೀಗಿರುವಾಗ ಸರ್ಕಾರಿ ಬ್ಯಾಂಕ್ಗಳನ್ನು ಖಾಸಗಿ ಅಥವಾ ವಿದೇಶಿ ಹೂಡಿಕೆದಾರರಿಗೆ ಮಾರಾಟ ಮಾಡುವ ಬದಲು, ಖಾಸಗಿ ಬ್ಯಾಂಕ್ಗಳನ್ನು ರಾಷ್ಟ್ರೀಕರಣಗೊಳಿಸಬೇಕು ಎಂದು ಸಂಘಟನೆಗಳು ಒತ್ತಾಯಿಸಿವೆ.
ಖಾಸಗೀಕರಣದಿಂದ ಸಾರ್ವಜನಿಕರ ಉಳಿತಾಯಕ್ಕೆ ಅಪಾಯವೇ?
ಬ್ಯಾಂಕ್ಗಳ ಖಾಸಗೀಕರಣವು ಸಾರ್ವಜನಿಕರ ಉಳಿತಾಯದ ಹಣವನ್ನು ಖಾಸಗಿ ಸಂಸ್ಥೆಗಳ ನಿಯಂತ್ರಣಕ್ಕೆ ಒಪ್ಪಿಸಿದಂತಾಗುತ್ತದೆ ಎಂದು ಸಂಘಟನೆಗಳು ಟೀಕಿಸಿವೆ. ಬ್ಯಾಂಕಿಂಗ್ ವಲಯದಲ್ಲಿ ಹೆಚ್ಚುತ್ತಿರುವ ವಸೂಲಾಗದ ಸಾಲಗಳಿಗೆ (NPA) ಖಾಸಗಿ ಕಾರ್ಪೊರೇಟ್ ಸಂಸ್ಥೆಗಳೇ ಪ್ರಮುಖ ಕಾರಣ ಎಂದು ಆರೋಪಿಸಿರುವ ಅವು, ಸುಸ್ತಿದಾರರಿಂದ ಸಾಲ ವಸೂಲಿ ಮಾಡುವ ಬದಲು ಸಾಲ ಮನ್ನಾ ಅಥವಾ ರಿಯಾಯಿತಿ ನೀಡಲಾಗುತ್ತಿದೆ ಎಂದು ಆಕ್ಷೇಪಿಸಿವೆ.
ಬ್ಯಾಂಕ್ಗಳು ನಷ್ಟ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದ್ದರೂ, ಮತ್ತೆ ಖಾಸಗಿ ಕಾರ್ಪೊರೇಟ್ ವಲಯಕ್ಕೆ ಬ್ಯಾಂಕ್ಗಳನ್ನು ಹಸ್ತಾಂತರಿಸುವ ಪ್ರಯತ್ನ ನಡೆಯುತ್ತಿದೆ ಎಂಬುದು ಸಂಘಟನೆಗಳ ಆರೋಪ. ಈ ನೀತಿಯನ್ನು ವಿರೋಧಿಸಿ ಹಾಗೂ ಐಡಿಬಿಐ ಬ್ಯಾಂಕ್ ಖಾಸಗೀಕರಣ ಪ್ರಕ್ರಿಯೆಯನ್ನು ತಡೆಯುವ ಉದ್ದೇಶದಿಂದ ಡಿಸೆಂಬರ್ 3ರಂದು ಮುಷ್ಕರಕ್ಕೆ ಕರೆ ನೀಡಿರುವುದಾಗಿ AIBEA, AIBOA ಮತ್ತು BEFI ಸಂಘಟನೆಗಳು ತಿಳಿಸಿವೆ.
ಮುಷ್ಕರದ ಕುರಿತು AIBEA, AIBOA ಮತ್ತು BEFI ಸಂಘಟನೆಗಳು ನವೆಂಬರ್ 19ರಂದು ಪ್ರಕಟಣೆ ಹೊರಡಿಸಿದ್ದು, ಡಿಸೆಂಬರ್ 3ರಂದು ಐಡಿಬಿಐ ನೌಕರರ ಮುಷ್ಕರಕ್ಕೆ ಬೆಂಬಲವಾಗಿ ಇತರ ಬ್ಯಾಂಕ್ಗಳ ನೌಕರರು ಮತ್ತು ಅಧಿಕಾರಿಗಳು ಸಾಂಕೇತಿಕ ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿವೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
